ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಮೋದ್ ಶೆಟ್ಟಿ- ಶೃತಿ ಹರಿಹರನ್ ಪ್ರಯಾಣ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಾದ ಪ್ರಮೋದ್ ಶೆಟ್ಟಿ ಮತ್ತು ನಟಿ ಶೃತಿ ಹರಿಹರನ್ ಅವರು “ಎನ್ಎಚ್-66”ರಲ್ಲಿ ಜೊತೆಯಾಗಿದ್ದಾರೆ. ಈ ಜೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಮುಂದಾಗಿದೆ.ಮಂಜುನಾಥ್ ಟಿ.ಆರ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ

ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಜೊತೆಗೆ ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಹಾಗೂ ಶೀರ್ಷಿಕೆ ರಾಜರಾಜೇಶ್ವರಿ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನೆರವೇರಿತು. ನಟ ಉಗ್ರಂ ಮಂಜು ಸೇರಿದಂತೆ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾದರು
ನಿರ್ಮಾಪಕ ಹಾಗೂ ನಿರ್ದೇಶಕ ಮಂಜುನಾಥ್ ಟಿ.ಆರ್ ಮಾತನಾಡಿ ಹಿರಿಯ ನಿರ್ದೇಶಕ ಭಾರ್ಗವ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಕಾರಣಾಂತರದಿಂದ ವಿದೇಶಕ್ಕೆ ತೆರಳಿದೆ. ಅಲ್ಲಿ ಸ್ಕ್ರಿಪ್ಟ್ , ಚಿತ್ರಕಥೆ ಬಗ್ಗೆ ವಿಶೇಷ ಅಧ್ಯಯನ ನಡಿಸಿದೆ. ರಾಯರ ಪರಮಭಕ್ತ. ರಾಯ ಫಿಲಂಸ್ ಎಂಬ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣ ಕೂಡ ಮಾಡುತ್ತಿದ್ದೇನೆ. “ಎನ್ ಎಚ್- 66” ಹೆಸರೆ ಹೇಳುವಂತೆ ರೋಡ್ ಸ್ಟೋರಿ. ಥ್ರಿಲ್ಲರ್ ಡ್ರಾಮ ಜಾನರ್ನ ಚಿತ್ರವೂ ಹೌದು ಎಂದರು
ಎರಡು ರಾತ್ರಿಗಳಲ್ಲಿ ಮಂಗಳೂರಿನಿಂದ ಗೋವಾಗೆ ಹೋಗುವ ಮಧ್ಯದಲ್ಲಿ ನಡೆಯುವ ಕಥೆ, ಮೂರು ಅಥವಾ ನಾಲ್ಕು ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. ಎನ್ ಎಚ್ 66″ ಚಿತ್ರಕ್ಕೆ “ಒನ್ ಹೈವೆ. ಮೆನಿ ಸೀಕ್ರೆಟ್ಸ್” ಎಂಬ ಅಡಿಬರಹವಿದೆ. ಏಪ್ರಿಲ್ 6 ರಿಂದ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ ಎಂದು ತಿಳಿಸಿದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ ಇದೊಂದು ರೋಡ್ ಸ್ಟೋರಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಜೊತೆಗೆ ನಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. ರಾಯರ ಸನ್ನಿಧಿಯಲ್ಲಿ ಚಿತ್ರ ಆರಂಭವಾಗಿದೆ ಎಂದರು
ನಟಿ ಶೃತಿ ಹರಿಹರನ್ ಮಾತನಾಡಿ ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈವರೆಗೂ ಮಾಡಿರದ ಪಾತ್ರವನ್ನು ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಛಾಯಾಗ್ರಾಹಕ ಸುನೀತ್ ಹಲಗೇರಿ ಹಾಗೂ ಸಂಗೀತ ನಿರ್ದೇಶಕ ಸ್ವಾಮಿನಾಥನ್ ಅವರು ಎನ್ ಎಚ್-66 ಚಿತ್ರದ ಕುರಿತು ಮಾತನಾಡಿದರು.


