KRG Studios to produce Tamil film: Collaboration with director Anjali Menon

ತಮಿಳು ಚಿತ್ರ ನಿರ್ಮಾಣಕ್ಕೆ ಮುಂದಾದ ಕೆ ಆರ್ ಜಿ ಸ್ಟುಡಿಯೋಸ್ : ನಿರ್ದೇಶಕಿ ಅಂಜಲಿ ಮೆನನ್ ಜತೆ ಸಹಯೋಗ - CineNewsKannada.com

ತಮಿಳು ಚಿತ್ರ ನಿರ್ಮಾಣಕ್ಕೆ ಮುಂದಾದ ಕೆ ಆರ್ ಜಿ ಸ್ಟುಡಿಯೋಸ್ : ನಿರ್ದೇಶಕಿ ಅಂಜಲಿ ಮೆನನ್ ಜತೆ ಸಹಯೋಗ

ಚಿರಪರಿಚಿತ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ ಮೆನನ್ ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ.

“ಬ್ಯಾಂಗ್ಲೂರ್ ಡೇಸ್”, “ಉಸ್ತಾದ್ ಹೊಟೇಲ್”, “ಮಂಜಡಿಕುರು”, “ಕೂಡೆ” ಮತ್ತು ಇತ್ತೀಚಿನ “ವಂಡರ್ ವುಮನ್” ಅಂತಹಾ ಹೆಸರಾಂತ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ ಮೆನನ್ ಇದೀಗ ತಮಿಳು ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಈ ಸಹಯೋಗದ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು.ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ.

2020ರಲ್ಲಿ, “ರತ್ನನ್ ಪ್ರಪಂಚ” ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ ಧನಂಜಯ್ ಅಭಿನಯದಲ್ಲಿ ಮೂಡಿಬಂದ ಈ ಚಿತ್ರ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು. ನಂತರದಲ್ಲಿ , ಮಾರ್ಚ್ 2023ರಲ್ಲಿ ತೆರೆ ಕಂಡ “ಗುರುದೇವ್ ಹೊಯ್ಸಳ” ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು.

ಕೆ ಆರ್ ಜಿ ಸ್ಟುಡಿಯೋಸ್ ನ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.

ನಿರ್ದೇಶಕಿ ಅಂಜಲಿ ಮೆನನ್ ಮಾತನಾಡಿ, ಸಿನಿಮಾಗಳು ಭಾಷೆ ಎಂಬ ಗೋಡೆಯನ್ನು ದಾಟಿ ಎಲ್ಲರನ್ನು ತಲುಪುತ್ತಿರುವ ಈ ಕಾಲದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸಮಂಜಸವೇ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆ ಎಂದರು.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥಾಪಕರು ಮತ್ತು ನಿರ್ಮಾಪಕರು ಆದ ಕಾರ್ತಿಕ್ ಗೌಡ ಮಾತನಾಡಿ, ಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್ ಜಿ ಸ್ಟುಡಿಯೋಸ್ ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. “ಸಿನಿಮಾ”ಗೆ ಇರುವ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ “ಜಾದುವನ್ನಾದರೂ” ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆ ಎಂದಿದ್ಧಾರೆ

ಈ ಕುರಿತು ನಮ್ಮ ಪಯಣ ಶುರು ಆಗಲು ಕಾರಣ ನನ್ನ ಸ್ನೇಹಿತ ಹಾಗೂ ವಿಜಯ್ ಸುಬ್ರಹ್ಮಣ್ಯಂ. ಚಿತ್ರದ ಕಥಾವಸ್ತುವಿಗೆ, ಅದರ ನಿರೂಪಣೆಗೆ ಇರುವ ಶಕ್ತಿಯನ್ನು ಕುರಿತು ಹಾಗೂ ಉನ್ನತ ಮಟ್ಟದ ನಿರ್ಮಾಣವು ಪ್ರೇಕ್ಷಕರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದೆಲ್ಲಾ ನಾವು ಚರ್ಚಿಸಿದ್ದೇವೆ. ನಮ್ಮಲ್ಲಿರುವ ಸಾಮಥ್ರ್ಯವನ್ನು ಆತ ಗಮನಿಸಿ,ನಮಗೆ ಮಾರ್ಗದರ್ಶಕನಾಗಿ ಹಾಗೂ ನಮ್ಮೊಡನೆ ಸಹ-ನಿರ್ಮಾಪಕನಾಗಿ ಕೈ ಜೋಡಿಸಿದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ. “ತುಲ್ಸಿಯಾ” ಸಂಸ್ಥೆಯ ಸ್ಥಾಪಕ ಚೈತನ್ಯ ಹೆಗಡೆ ಅಂತಹ ಸಮಾನ ಮನಸ್ಕರ ಸಹಕಾರದಿಂದ ಅತ್ಯುನ್ನತ ಗುಣಮಟ್ಟದ ಚಿತ್ರಗಳನ್ನು ನೀಡುವ ಭರವಸೆ ನಮ್ಮ ಸಂಸ್ಥೆ ನೀಡಲಿದೆ.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಯ ಈ ಸಹಯೋಗ ಕೇವಲ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸುವುದಷ್ಟೇ ಅಲ್ಲದೆ, ಕಥಾ ನಿರೂಪಣೆಯಲ್ಲಿ ಹೊಸ ಆವಿಷ್ಕಾರಗಳನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತರಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ದಕ್ಷಿಣ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸಲು ಸಜ್ಜಾಗಿರುವ ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಗೆ ಗುಣಮಟ್ಟದ ಕಥಾ ವಸ್ತು ಹಾಗೂ ನವೀನ ಕಥಾ ನಿರೂಪಣೆಗೆ ಅಂಜಲಿ ಮೆನನ್ ಜೊತೆಗಿನ ಸಹಯೋಗ ಬಲು ದೊಡ್ಡ ಉದಾಹರಣೆ ಮತ್ತು ಮಾದರಿಯಾಗಲಿದೆ ಎಂದು ನಂಬಿದ್ದೇನೆ.

“ತುಲ್ಸಿಯಾ” ದೇಶದ ಅತ್ಯುನ್ನತ ಬರಹಗಾರರನ್ನು, ನಿರ್ದೇಶಕರನ್ನು, ನಟರನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಪ್ರತಿನಿಧಿಸುವ ಅಂಜಲಿ ಮೆನನ್ ಅವರೊಂದಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin