ಮಾಲಾಶ್ರೀ ಅಭಿನಯದ “ಮಾರಕಾಸ್ತ್ರ” ಚಿತ್ರ “ಮಾರಣಾಯಧಂ” ತೆಲುಗಿನಲ್ಲಿ ಬಿಡುಗಡೆ
ಕೋಮಲ ನಟರಾಜ್ ನಿರ್ಮಾಣದ, ಗುರುಮೂರ್ತಿ ಸುನಾಮಿ ನಿರ್ದೇಶನದ ಹಾಗೂ ಮಾಲಾಶ್ರೀ ಅವರು ಪ್ರಮುಖಪಾತ್ರದಲ್ಲಿ ನಟಿಸಿದ್ದ “ಮಾರಕಾಸ್ತ್ರ” ಚಿತ್ರ ಕಳೆದವರ್ಷ ಬಿಡುಗಡೆಯಾಗಿ ಕನ್ನಡಿಗರ ಮನ ಗೆದ್ದಿತ್ತು. ಈ ಚಿತ್ರ ಈಗ ತೆಲುಗಿನಲ್ಲೂ ನಿರ್ಮಾಣವಾಗಿದ್ದು “ಮಾರಣಾಯುಧಂ” ಎಂದು ಹೆಸರಿಡಲಾಗಿದೆ. ಆಂದ್ರ ಹಾಗು ತೆಲಂಗಾಣದಲ್ಲಿ ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಅಲ್ಲಿನ ಜನರ ಮನ ಗೆದ್ದಿದೆ. ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಈ ಚಿತ್ರ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ನಿರ್ಮಾಪಕ ನಟರಾಜ್ ಮಾತನಾಡಿ “ಮಾರಕಾಸ್ತ್ರ” ಚಿತ್ರವನ್ನು ಕಳೆದವರ್ಷ ಬಿಡುಗಡೆ ಮಾಡಿದ್ದೆವು. ಆ ಸಮಯದಲ್ಲಿ ಭಾರತ – ಪಾಕ್ ಮ್ಯಾಚ್, ಹಬ್ಬಗಳು ಬಂದವು. ಹಾಗಾಗಿ ಅಷ್ಟು ಜನ ನಮ್ಮ ಸಿನಿಮಾ ನೋಡಲು ಆಗಲಿಲ್ಲ. ಆದರೆ ಚಿತ್ರ ನೋಡಿದ ತೆಲುಗು ವಿತರಕರಾದ ವೆಂಕಟೇಶ್ ರಾವ್ ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿ ಎಂದರು. “ಮಾರಕಾಸ್ತ್ರ” ಈಗ “ಮಾರಣಾಯುಧಂ” ಎಂಬ ಹೆಸರಿನಿಂದ ಇದೇ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಶನಿವಾರದಂದು ಪೌರ ಕಾರ್ಮಿಕರು ಸೇರಿದಂತೆ ಅನೇಕ ಶ್ರಮಿಕ ವರ್ಗದವರಿಗೆ ಒಂದು ಉಚಿತ ಪ್ರದರ್ಶನದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು .
ನಿರ್ದೇಶಕ ಗುರುಮೂರ್ತಿ ಸುನಾಮಿ ಮಾತನಾಡಿ, “ಮಾರಕಾಸ್ತ್ರ” ಚಿತ್ರವನ್ನು ಬಿಡುಗಡೆ ಮಾಡಿದಾಗ ಚಿತ್ರದ ಅವಧಿ ಸ್ವಲ್ಪ ಹೆಚ್ಚಿದೆ ಎಂದಿದ್ದರು ಈಗ 26 ನಿಮಿಷ ಕಡಿಮೆ ಮಾಡಿದ್ದೇವೆ. ಮಾಲಾಶ್ರೀ, ಆನಂದ್ ಆರ್ಯ, ಹರ್ಷಿಕಾ ಪೂಣಚ್ಛ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.
ನಟಿ ಮಾಲಾಶ್ರೀ ಮಾತನಾಡಿ ಮೊದಲು “ಮಾರಕಾಸ್ತ್ರ” ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಆನಂತರ ನಿರ್ದೇಶಕರು ಕಥೆ ಹೇಳಿದ ರೀತಿ ಇಷ್ಟವಾಯಿತು. ಅದರಲ್ಲೂ ನಿರ್ದೇಶಕರಿಗೆ ಕಾಲಿನ ಸಮಸ್ಯೆಯಿದೆ. ಅಂತಹುದರಲ್ಲೂ ಅವರಿಗಿರುವ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತು. ತೆಲುಗಿನ ಜನರು ನನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಇದೇ ಶುಕ್ರವಾರ ಕರ್ನಾಟಕದಲ್ಲೂ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರ ನೋಡಿ ಎಂದರು
ಚಿತ್ರದ ವಿತರಕ ಯಾದವ್, ಕಾರ್ಯಕಾರಿ ನಿರ್ಮಾಪಕ ವೆಂಕಟೇಶ್ ರಾವ್, ನಾಯಕ ಆನಂದ್ ಆರ್ಯ, ರವಿಚೇತನ್ , ಶಶಿಧರ್, ಮಂಜುನಾಥ್, ಮಂಜುಳಾ ರೆಡ್ಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.