Voting Awareness Through Rap Song “Vote Our Power”: Stars join hands

“Vote ನಮ್ಮ Power” ರಾಪ್ ಹಾಡಿನ ಮೂಲಕ ಮತದಾನದ ಜಾಗೃತಿ: ಕೈಜೋಡಿಸಿದ ತಾರೆಯರು - CineNewsKannada.com

“Vote ನಮ್ಮ Power” ರಾಪ್ ಹಾಡಿನ ಮೂಲಕ ಮತದಾನದ ಜಾಗೃತಿ: ಕೈಜೋಡಿಸಿದ ತಾರೆಯರು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ `ಮಾಧ್ಯಮ ಅನೇಕ’ ಸಂಸ್ಥೆ “ವೋಟ್ ನಮ್ಮ ಅಧಿಕಾರ” ರಾಪ್ ಸಾಂಗ್ ಪ್ರಸ್ತುತಪಡಿಸುತ್ತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ಮತದಾನದ ಹಕ್ಕುಗಳನ್ನು ಪ್ರತಿಪಾದಿಸುವುದು ಆದ್ಯ ಕರ್ತವ್ಯ.

ಮತದಾನದೊಂದಿಗೆ ಭವ್ಯ ಭಾರತದ ಭವಿಷ್ಯ ನಿರ್ಧರಿಸುವುದು ನಮ್ಮೆಲ್ಲರ ಕೈಲಿದೆ. ಈ ಪ್ರಜಾಪ್ರಭುತ್ವದ ಹಬ್ಬವನ್ನು ಒಂದು ಸಂದೇಶಭರಿತ ಚೆಂದದ ರಾಪ್ ಸಾಂಗ್ ಮೂಲಕ ಸೆಲೆಬ್ರೇಟ್ ಮಾಡುವ ಆಶಯ ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನಕ್ಕೆ ಅವರನ್ನು ಪ್ರೇರೇಪಿಸುವುದು ಉದ್ದೇಶವೊಂದಿದೆ

ಹಾಡಿಗೆ ದನಿಯಾಗಿರುವ ನಟ ರಾಕೇಶ್ ಅಡಿಗ ಮಾತನಾಡಿ ‘ಮೊದಲ ಬಾರಿಗೆ ಮತದಾನ ಮಾಡುವವರಿಗೆ ರಾಪ್ ಹಾಡು ಇಷ್ಟವಾಗಬಹುದು ಯುವಜನತೆ ಹೆಚ್ಚಾಗಿ ಮತದಾನ ಮಾಡಬೇಕು’ ಎಂದರು .

ನಿರ್ದೇಶಕ ರಾಜ್ ಗೋಪಿ ಮಾತನಾಡಿ ‘ಮತದಾನದ ಬಗ್ಗೆ ಸಂವಿದಾನದಲ್ಲಿರುವ ಕೆಲವು ವಿಷಯಗಳನ್ನು ತೆಗೆದುಕೊಂಡು ಈ ಹಾಡನ್ನು ಮಾಡಿದ್ದೇವೆ. ಈಗಿನ ಯುವಜನತೆ ಹೆಚ್ಚಾಗಿ ರಾಪ್ ಹಾಡಿಗೆ ಅಭಿಮಾನಿಗಳು. ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ತಿಳಿಸಿದರು.

ಮತದಾನ ಜಾಗೃತಿ ರಾಯಭಾರಿಯೂ ಆಗಿರುವ ‘ಬಿಗ್ ಬಾಸ್’ ಖ್ಯಾತಿಯ ನೀತು ವನಜಾಕ್ಷಿ ಮಾತನಾಡಿ ‘ಮತದಾನದ ದಿನ ರಜೆ ಇದೆ ಎಂದು ಮನೆಯಲ್ಲಿ ಕೂರುವುದು. ಪ್ರವಾಸಕ್ಕೆ ಹೋಗುವುದು ಮಾಡಬೇಡಿ. ಎಲ್ಲರೂ ಮತದಾನ ಮಾಡಿ. ಏಕೆಂದರೆ ಅದು ನಮ್ಮ ಹಕ್ಕಲ್ಲ. ಅಧಿಕಾರ’ ಎಂದು ಮನವಿ ಮಾಡಿದ್ದಾರೆ

ಹಾಡಿಗೆ ಹೆಜ್ಜೆ ಹಾಕಿರುವ ನಟಿ ತೇಜಸ್ವಿನಿ ಶರ್ಮ, ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅಮರ್ ಮತದಾನದ ಮಹತ್ವವನ್ನು ತಿಳಿಸಿ, ಅವಕಾಶ ಮಾಡಿಕೊಟ್ಟ ‘ಮಾಧ್ಯಮ ಅನೇಕ’ ಸಂಸ್ಥೆಗೆ ಧನ್ಯವಾದ ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥ ಅರವಿಂದ್ ಮೋತಿ ಈ ಯೋಜನೆಯ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಅನು ಮೋತಿ ಬರೆದು, ಕಾರ್ತಿಕ್ ಶರ್ಮ ಸಂಗೀತ ನೀಡಿರುವ ಈ ಹಾಡನ್ನು ರಾಕೇಶ್ ಅಡಿಗ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಗಿರೀಶ್ ಛಾಯಾಗ್ರಹಣವಿದೆ.

ಪ್ರತಿಭಾವಂತ ಯುವ ತಾರೆಯರಾದ ತೇಜಸ್ವಿನಿ ಶರ್ಮ, ಸ್ಮೈಲ್ ಗುರು ರಕ್ಷಿತ್, ಬೃಂದಾ ಪ್ರಭಾಕರ್, ಅಭಯ್ ಮತ್ತು ಅನನ್ಯ ಅಮರ್ ಹಾಡನ್ನು ಪ್ರಸ್ತುತಪಡಿಸಿದ್ದಾರೆ.

ಕಿರುತೆರೆ ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳು ಹಾಡಿಗೆ ಹೆಜ್ಜೆ ಹಾಕುತ್ತಾ ಹಾಡಿನ ಆಕರ್ಷಣೆ ಹೆಚ್ಚಿಸಿದ್ದಾರೆ. ನವೀನ್ ಶಂಕರ್, ನೀತೂ ವನಜಾಕ್ಷಿ, ಕಾರ್ತೀಕ್ ಮಹೇಶ್, ತನಿಶಾ ಕುಪ್ಪಂಡ, ಸಾನಿಯಾ ಅಯ್ಯರ್, ಸಾಗರ್ ಪುರಾಣಿಕ್, ನಿರಂಜನ್ ದೇಶಪಾಂಡೆ, ಚಂದನಾ ಅನಂತಕೃಷ್ಣ ಮುಂತಾದವರು ಅತಿಥಿಗಳಾಗಿ ಕಾಣಿಸಿಕೊಂಡು ಸದಾಶಯದ ಈ ಯೋಜನೆಗೆ ಕೈಜೋಡಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin