Malayalam film "Pani" starring "Joju George" is releasing on November 29

“ಜೋಜು ಜಾರ್ಜ್” ಅಭಿನಯದ ಮಲಯಾಳಂ ಚಿತ್ರ “ಪಣಿ” ನವಂಬರ್ 29ರಂದು ಬಿಡುಗಡೆ - CineNewsKannada.com

“ಜೋಜು ಜಾರ್ಜ್” ಅಭಿನಯದ ಮಲಯಾಳಂ ಚಿತ್ರ “ಪಣಿ” ನವಂಬರ್ 29ರಂದು ಬಿಡುಗಡೆ

ಕಳೆದ ತಿಂಗಳು ಕೇರಳದಲ್ಲಿ ಬಿಡುಗಡೆಯಾದ ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ `ಪಣಿ’ ಚಿತ್ರ ಕನ್ನಡಕ್ಕೆ ಡಬ್ ಆಗಿ ನವಂಬರ್ 29ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದೆ.

ನಿರ್ದೇಶನ ಮಾಡಿರುವ ಜೋಜು ಜಾರ್ಜ್ ಮಾತನಾಡಿ, ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಮೊದಲ ನಿರ್ದೇಶನದ ಚಿತ್ರ ಕಳೆದ ತಿಂಗಳು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಇದೀಗ ಕನ್ನಡಕ್ಕೆ ಡಬ್ ಆಗಿ ನವಂಬರ್ 29 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಇದೊಂದು ಮಾಸ್ ಮತ್ತು ಕಮರ್ಷಿಯಲ್ ಚಿತ್ರ. ಕೇರಳದಲ್ಲಿ ಬಿಡುಗಡೆಯಾಗಿ ಯಶಸ್ವಿಯಗಿದೆ. ಸೇಡಿನ ಕಥೆಯಾದ್ದರಿಂದ, ಎಲ್ಲಾ ಕಡೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಕನ್ನಡದಲ್ಲೂ ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಇದೊಂದು ಕಾಲ್ಪನಿಕ ಕಥೆಯಾಗಿದ್ದರು ಎರಡು ವರ್ಷಗಳ ಕಾಲ ಚರ್ಚೆ ನಡೆಸಿ ಚಿತ್ರಕಥೆ ಮಾಡಿದ್ದೇವೆ. ಈ ಚಿತ್ರದಲ್ಲಿ ಸಾಕಷ್ಟು ಹೊಸಬರಿದ್ದಾರೆ. ಇದೊಂದು ಸರಳ ಕಥೆಯಾಗಿದ್ದು, ಅದನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಲಯಾಳಂನಲ್ಲಿ “ಪಣಿ” ಎಂದರೆ ಕೆಲಸ ಎಂದರ್ಥ. ಈ ಹಿಂದೆ ನನ್ನ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ, ಯಶಸ್ವಿಯಾಗಿದೆ. ಈ ಚಿತ್ರ ಕೂಡ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರು

ನಟಿ ಅಭಿನಯ ಮಾತನಾಡಿ ಈ ಹಿಂದೆ ಹುಡುಗ್ರು',ಕಿಚ್ಚು’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಬಹಳ ದಿನಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ಜೋಜು ಜಾರ್ಜ್ ಅಭಿಮಾನಿ. ಅವರ ಜೊತೆಗೆ ನಟಿಸಬಹುದು ಎಂದು ಊಹಿಸಿರಲಿಲ್ಲ. ಈ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಿಕ್ಕೆ ಆಭಾರಿ. ಚಿತ್ರದಲ್ಲಿ ಜೋಜು ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕನ್ನಡದಲ್ಲಿ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಸಿನಿಮಾಗೆ ಯಾವುದೇ ಭಾಷೆಯ ಗಡಿ ಇಲ್ಲ. ಮುಂದೆ ಇಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದರು

ಸಾಗರ್ ಸೂರ್ಯ, ಜುನೈಜ್, ಬಾಬ್ಬಿ ಕುರಿಯನ್, ಅಭಯಾ ಹಿರಣ್ಮಯಿ, ರಂಜಿತ್ ವೇಲಾಯುಧನ್ ಮುಂತಾದವರು ಹಾಜರಿದ್ದರು. ಚಿತ್ರವು ಕನ್ನಡಕ್ಕೆ ಡಬ್ ಆಗುತ್ತಿರುವ ಸಂಭ್ರಮವನ್ನು ಹಂಚಿಕೊಂಡರು. ಚಿತ್ರವು ಕೇರಳದಲ್ಲಿ ಯಶಸ್ವಿಯಾದಂತೆ, ಕನ್ನಡದಲ್ಲೂ ಯಶಸ್ವಿಯಾಗುತ್ತದೆ ಎಂದು ಆಶಿಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin