“ಮನದ ಕಡಲು” ಚಿತ್ರದ ತುರ್ರಾ ಹಾಡು ಬಿಡುಗಡೆ: ಹಾಡು ಹುಟ್ಟಿಕೊಂಡದ್ದೇ ರೋಚಕ
ಇ.ಕೃಷ್ಣಪ್ಪ ಮತ್ತು ಯೋಗರಾಜ್ ಭಟ್ಟರ ಕಾಂಬಿನೇಷನ್‍ನಲ್ಲಿ ಮೂಡಿಬಂದ “ಮುಂಗಾರು ಮಳೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಮಳೆ ಸುರಿಸುವ ಮುನ್ನುಡಿ ಬರೆದಿತ್ತು. ಆದಾದ ನಂತರ ಕನ್ನಡದ ಚಿತ್ರರಂಗದ ದಿಕ್ಕು ಬದಲಾಗುತ್ತಿತ್ತು. ಇದೀಗ ಈ ಜೋಡಿ ಮತ್ತಿ ಬರೋಬ್ಬರಿ 18 ವರ್ಷಗಳ ನಂತರ “ಮನದ ಕಡಲು” ಚಿತ್ರದ ಮೂಲಕ ಜೊತೆಯಾಗಿದೆ.ಹೀಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
“ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ “ಮನದ ಕಡಲು”. ಇತ್ತೀಚೆಗಷ್ಟೇ ಈ ಚಿತ್ರದ “ಹೂ ದುಂಬಿಯ ಕಥೆಯ” ಹಾಡು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಹೊತ್ತಿನಲ್ಲಿ ಚಿತ್ರದ ಮತ್ತೊಂದು ಗೀತೆ “ತುರ್ರಾ” ಬಿಡುಗಡೆಯಾಗಿದ್ದು ಹಾಡು ಮೋಡಿ ಮಾಡುವ ಎಲ್ಲಾ ಲಕ್ಷಣ ತೋರಿಸಿದೆ
ನೆಲಮಂಗಲದ ಬಳಿಯಿರುವ ನಿರ್ಮಾಪಕ ಈ ಕೃಷ್ಣಪ್ಪ ತೋಟದಲ್ಲಿ ಈ ಹಾಡು ಬಿಡುಗಡೆಯಾಯಿತು. ಯೋಗರಾಜ್ ಭಟ್ ಬರೆದಿರುವ ಹಾಡನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಹಾಡಿದ್ದಾರೆ.
ಈ ವೇಳೆ ಮಾತಿಗಿಳಿದ ನಿರ್ದೇಶಕ ಯೋಗರಾಜ್ ಭಟ್, ನನ್ನ ಹಾಗೂ ವಿ.ಹರಿಕೃಷ್ಣ ಕಾಂಬೋದಲ್ಲಿ ಅರ್ಥವಿರುವ ಹಾಡುಗಳು ಸಾಕಷ್ಟು ಹಿಟ್ ಆಗಿದೆ. ಆದರೆ ಅರ್ಥವಿಲ್ಲದ ಅನರ್ಥದ ಹಾಡುಗಳು ಸೂಪರ್ ಹಿಟ್ ಆಗಿದೆ. ಆ ಅನರ್ಥದ ಹಾಡಗಳಿಗೆ ಈ “ತುರ್ರಾ” ಹಾಡು ಸೇರ್ಪಡೆಯಾಗಿದೆ. ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ಅಲಿಮಾ ಎಂಬ ಹುಚ್ಚ ಇದ್ದ. ಆತನಿಗೆ ಮಕ್ಕಳೆಂದರೆ ಪ್ರೀತಿ. ನಾವೆಲ್ಲಾ ಆತನ ಹಿಂದೆ ಸುತ್ತುತ್ತಿದ್ದೆವು. ಆತ “ಬೊಂಬುವೈ ಟುರ್ರವೈ” ಎಂಬ ಪದ ಬಳಸುತ್ತಿದ್ದ. ಆ ಪದವೇ ಈ “ತುರ್ರಾ” ಹಾಡು ಬರೆಯಲು ಸ್ಪೂರ್ತಿ ಎಂದು ರಹಸ್ಯ ಬಿಚ್ಚಿಟ್ಟರು.
ವಿ.ಹರಿಕೃಷ್ಣ ಅವರ ಧ್ವನಿ ಈ ಹಾಡಿಗೆ ಸೂಕ್ತವಾಗಿದೆ. ಅವರ ಜೊತೆಗೆ ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ಕನ್ನಡ ಕಲಾಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಕೃಷ್ಣಪ್ಪ ಅವರ ಈ ತೋಟದಲ್ಲೇ ಚಿತ್ರ ಅರಂಭವಾಗಿದ್ದು, ಇವತ್ತು ಇದೇ ಸ್ಥಳದಲ್ಲೇ ಚಿತ್ರೀಕರಣ ಮುಕ್ತಾಯವಾಗಿ, ಕುಂಬಳಕಾಯಿ ಒಡೆಯಲಾಗಿದೆ ಹಾಗೂ ಎರಡನೇ ಹಾಡನ್ನು ಇಲ್ಲೇ ಬಿಡುಗಡೆ ಮಾಡಲಾಗಿದೆ ಎಂದರು
ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಾತನಾಡಿ ಸ್ಟುಡಿಯೋದಲ್ಲಿ ತುಂಬಾ ಹೊತ್ತು ಹಾಡಿರುವ ಹಾಡು ಇದೆ. ಲಿರಿಕಲ್ ಪೇಜ್ ಹಿಡಿದು ಹಾಡುವಾಗ ಪದಗಳನ್ನು ಹೇಳಲು ಬಹಳ ಹೊತ್ತಾಗುತ್ತಿತ್ತು. ಇಂತಹ ಕಷ್ಟದ ಹಾಗೂ ವಿರಳವಾದ ಪದಗಳನ್ನು ಬಳಸಿ ಯೋಗರಾಜ್ ಭಟ್ ಅವರು ಒಂದೊಳ್ಳೆ ಹಾಡು ಬರೆದಿದ್ದಾರೆ ಎಂದುತಿಳಿಸಿದರು.
ನಿರ್ಮಾಪಕ ಇ. ಕೃಷ್ಣಪ್ಪ ಮಾತನಾಡಿ ಈ ಹಾಡು ಕೇಳಿದ ತಕ್ಷಣ ಇಷ್ಟವಾಯಿತು. ನಿರ್ದೇಶಕರಿಗೆ ಈ ಹಾಡು ಇರಲಿ ಎಂದು ಹೇಳಿದೆ. ಹರಿಕೃಷ್ಣ, ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಅವರ ಗಾಯನ ಮತ್ತು ಸುಮುಖ, ಅಂಜಲಿ, ರಂಗಾಯಣ ರಘು ಅವರ ಅಭಿನಯ ಹಾಗೂ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಬಹಳ ಚೆನ್ನಾಗಿದೆ ಎಂದರು.
ನಾಯಕ ಸುಮುಖ ಮಾತನಾಡಿ ಯೋಗರಾಜ್ ಭಟ್ ಚಿತ್ರೀಕರಣದ ಸಮಯದಲ್ಲೂ ಇಂತಹ ಪದಗಳನ್ನು ಬಳಸುತ್ತಿರುತ್ತಾರೆ. ಈಗ ಆ ಪದಗಳನ್ನೇ ಬಳಸಿ ಹಾಡು ಬರೆದಿದ್ದಾರೆ. ಈ ಹಾಡು ತುಂಬಾ ಚೆನ್ನಾಗಿದೆ. ಈ ಜಾಗದಲ್ಲೇ ನಮ್ಮ ಚಿತ್ರ ಆರಂಭವಾಗಿದ್ದು, ಈಗ ಇದೇ ಜಾಗದಲ್ಲಿ ಹಾಡು ಬಿಡುಗಡೆಯಾಗಿರುವುದು ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು
ನಟಿ ರಾಶಿಕಾ ಶೆಟ್ಟಿ ಮಾತನಾಡಿ ನನಗೂ ಈ ಹಾಡು ಬಹಳ ಇಷ್ಟ ಎಂದರು
ಹಿರಿಯ ನಟ ದತ್ತಣ್ಣ ಮಾತನಾಡಿ ಅನರ್ಥದ ಹಾಡನ್ನು ಪ್ರೇಕ್ಷಕರಿಗೆ ಅರ್ಥ ಮಾಡಿಸಲು ಯೋಗರಾಜ್ ಭಟ್ ಒಬ್ಬರಿಗೆ ಸಾಧ್ಯ ಎಂದರು.
ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.