`ಮೋಡ ಕವಿದ ವಾತಾವರಣ’ ಚಿತ್ರದ ಟ್ರೈಲರ್ ಬಿಡುಗಡೆ: ಕುತೂಹಲ ಹೆಚ್ಚಳ
ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟ ಶೀಲಮ್, `ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿರುವ ವಿಭಿನ್ನ ಲವ್ ಸ್ಟೋರಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಚಿತ್ರರಂಗದ ತಾರೆಗಳಾದ ವಿನಯ್ ರಾಜ್‍ಕುಮಾರ್, ನವೀನ್ ಶಂಕರ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಶುಭ ಹಾರೈಸಿದರು. ಚಿತ್ರ ಇದೇ ಜೂನ್ 26ರಂದು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ.
ನಾಯಕ ಶೀಲಂ ಮಾತನಾಡಿ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಪ್ರದರ್ಶನದಲ್ಲಿ ನಮಗೆ ನೂರಕ್ಕೆ ನೂರರಷ್ಟು ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ನೀವೆಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಕೇಳಿಕೊಂಡರು
ನಟಿ ಮೋಕ್ಷಾ ಕುಶಾಲ್ ಮಾತನಾಡಿ ಚಿತ್ರದಲ್ಲಿ ನನ್ನದು ‘ಸೌಪರ್ಣಿಕ’ ಎಂಬ ಅತ್ಯಂತ ಮುಗ್ಧ ಮತ್ತು ಹಳ್ಳಿ ಹುಡುಗಿಯ ಪಾತ್ರ. ನೀವು ಟ್ರೇಲರ್‍ನಲ್ಲಿ ನೋಡಿರುವುದು ಕೇವಲ ಶೇ. 5ರಷ್ಟು ಮಾತ್ರ, ಸಿನಿಮಾದಲ್ಲಿ ಇನ್ನೂ ದೊಡ್ಡ ಕಥೆಯಿದೆ ಎಂದರು.

ನಟಿ ಸಾತ್ವಿಕಾ ಮಾತನಾಡಿ ಚಿತ್ರಮಂದಿರದಲ್ಲಿ ಕಳೆಯುವ ಎರಡು ಗಂಟೆ ಪಕ್ಕಾ ‘ಪೈಸಾ ವಸೂಲ್’ ಮನರಂಜನೆಯಿಂದ ಕೂಡಿದೆ. ನಟ ಶೀಲಂ ಅದ್ಭುತವಾಗಿ ನಟಿಸಿದ್ದಾರೆ, ಎಲ್ಲರೂ ಬೆಂಬಲಿಸಿ” ಎಂದು ಮನವಿ ಮಾಡಿದರು.
ನಿರ್ದೇಶಕ ಸುನಿ ಮಾತನಾಡಿ “ಶೀಲಂ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನಾಯಕನಾಗಿ ನಿಲ್ಲುತ್ತಾರೆ. ನಾಯಕಿಯರಾದ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿಂಗಾಪುರದಲ್ಲೂ ನಮಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಹೇಳಿದರು

‘ಒಂದು ಸರಳ ಪ್ರೇಮಕಥೆ’ಯಂತಹ ಯಶಸ್ವಿ ಸಿನಿಮಾ ನೀಡಿದ್ದ ‘ರಾಮ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸ್ಯಾಂಡಲ್‍ವುಡ್‍ನ ಸ್ಟಾರ್ ತಂತ್ರಜ್ಞರಾದ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ಜೂಡಾ ಸ್ಯಾಂಡಿ ಮೆಲೋಡಿಯಸ್ ಸಂಗೀತ ಚಿತ್ರಕ್ಕಿದೆ.

