ಉತ್ತರ ಕರ್ನಾಟಕದ ರಗಡ್ ಲವ್ ಸ್ಟೋರಿ ಚಿತ್ರಕ್ಕೆ ಮುಹೂರ್ತ
‘ಯುಕೆ ಲವ್ ಸ್ಟೋರಿ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಭರ್ಜರಿಯಾಗಿ ನಡೆಯಿತು. ನಟ ಅಜಯ್‍ರಾವ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ವಿಜಯ್‍ಗೆ ಎರಡನೇ ಅನುಭವ. ರೋಮನಾಸ್ ಕ್ರಿಯೇಶನ್ಸ್ ಅಡಿಯಲ್ಲಿ ಎಸ್.ಜೆ.ಸುರೇಶ್ ಆರೋಕ್ಯರಾಜ್ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಯುಕೆ ಅಂದರೆ ಉತ್ತರ ಕರ್ನಾಟಕ ಅಂತ ನಿರ್ದೇಶಕರು ಬಿಂಬಿಸಿಕೊಂಡಿದ್ದಾರೆ. ಆ ಭಾಗದಲ್ಲಿ ನಡೆಯುವ ರಗಡ್ ಪ್ರೀತಿಯ ಕಥನವನ್ನು ಹೇಳಲು ಹೊರಟಿದ್ದಾರೆ. ಇದರ ಸಲುವಾಗಿ ಗುಲ್ಬಾರ್ಗ ಜಿಲ್ಲೆಯ ಸಣ್ಣ ಹಳ್ಳಿಗೆ ಭೇಟಿ ನೀಡಿ, ಅಲ್ಲಿನ ಜನರ ಒಡನಾಟ, ಭಾಷೆ ತಿಳಿದುಕೊಂಡು, ಸುಮಾರು ಆರು ತಿಂಗಳುಗಳ ಕಾಲ ಅವರೊಂದಿಗಿದ್ದು ಚಿತ್ರಕಥೆ ಸಿದ್ದಪಡಿಸಿದ್ದಾರೆ.
ಕರಾಟೆಕಿಂಗ್ ಶಂಕರ್‍ನಾಗ್ ಆದರ್ಶ, ಮಾಗದರ್ಶನವನ್ನು ಅನುಸರಿಸುತ್ತಾ, ಅವರ ಪ್ರೇರಣೆಯಿಂದಲೇ ಕಥೆಯನ್ನು ಬರೆದಿದ್ದಾರೆ. ಅಲ್ಲಿ ಪ್ರತಿ ನಲವತ್ತು ಕಿ.ಮಿಗೆ ಮಾತನಾಡುವ ಭಾಷೆಯ ಶೈಲಿ ಬದಲಾಗಿರುತ್ತದೆ. ಯಾವ ರೀತಿಯ ಪ್ರೀತಿಯ ಅಂಶಗಳು ಇರಲಿದೆ ಎಂಬುದನ್ನು ಬಿಟ್ಟುಕೊಡದೆ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಿರೆಂದು ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಆದರೂ ಯುಕೆ ಎಂಬುದನ್ನು ನೋಡುಗರು ಯಾವರೀತಿ ಬೇಕಾದರೂ ಅಂದುಕೊಳ್ಳಬಹುದಂತೆ.
ಒರಟು ಹಳ್ಳಿ ಹುಡುಗನಾಗಿ ಧರ್ಮಕೀರ್ತಿರಾಜ್ ನಾಯಕನಾಗಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಅದನ್ನು ರಿವೀಲ್ ಮಾಡಲಿದ್ದಾರಂತೆ. ಹನ್ನೊಂದು ಅಣ್ಣಂದಿರ ಮುದ್ದಿನ ತಂಗಿಯಾಗಿ ಕಾವ್ಯಭಗವಂತ ನಾಯಕಿಯಾಗಿ ಮೂರನೇ ಅವಕಾಶ. ಉಳಿದಂತೆ ಸಾಧುಕೋಕಿಲ. ಬಲರಾಜವಾಡಿ, ಕಾಮಿಡಿ ಕಿಲಾಡಿಗಳು ಜಿ.ಜಿ.ಗೋವಿಂದೆಗೌಡ, ರವಿರೆಡ್ಡಿ, ಮಂಡ್ಯ ಸಿದ್ದು, ಮೂರ್ತಿ ಗಿರಿನಗರ, ಮಂಜು ಹೊನ್ನವಳ್ಳಿ ಮುಂತಾದವರು ನಟಿಸುತ್ತಿದ್ದಾರೆ.
ಸಂತೋಷ್ ನಾಯಕ್ ಮತ್ತು ಹನುರಾಜ್ ಮಧುಗಿರಿ ಸಾಹಿತ್ಯದ ನಾಲ್ಕು ಹಾಡುಗಳಿಗೆ ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ವಿ.ಪಳನಿವೇಲು, ಸಂಕಲನ ಸಿ.ಕೆ.ಕುಮಾರ್, ಸಾಹಸ ಚಂದ್ರುಬಂಡೆ, ನೃತ್ಯ ಶಿವಶಕ್ತಿ ಷಣ್ಮುಗಂ ಅವರದಾಗಿದೆ. ಕಲಬುರ್ಗಿ, ಕೊಳ್ಳೆಗಾಲ, ಯಾದಗಿರಿ, ಹುಬ್ಬಳ್ಳಿ, ಬೆಳಗಾಂ ಕಡೆಗಳಲ್ಲಿ ಹಾಗೂ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.