ರಾಷ್ಟ್ರಪ್ರಶಸ್ತಿ “ಕಿರುಚಿತ್ರ” ಮಧ್ಯಂತರಕ್ಕೆ ಪ್ರಶಂಸೆಗಳ ಮಹಾಪೂರ: ಸಿನಿಮಾ ಮಾಡುವ ಉದ್ದೇಶ ಎಂದ ನಿರ್ದೇಶಕರು
ಮುವತ್ತರಾರು ನಿಮಿಷಗಳ “ಮಧ್ಯಂತರ” ಕಿರುಚಿತ್ರಕ್ಕೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಂ ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಕಿರುಚಿತ್ರದ ನಿರ್ದೇಶಕ ದಿನೇಶ್ ಶೆಣೈ ಹಾಗೂ ಸಂಕಲನಕಾರ ಸುರೇಶ್ ಅರಸ್ ಈ ಬಾರಿಯ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.
ಮಾಜಿ ಸಚಿವೆ, ನಟಿ, ನಿರ್ಮಾಪಕಿ ಡಾ.ಜಯಮಾಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿದಂತೆ ಗಣ್ಯರು ಆಗಮಿಸಿ ಮಧ್ಯಂತರ ಕಿರುಚಿತ್ರ ವೀಕ್ಷಿಸಿ ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ.
ಹಿರಿಯ ನಟಿ ಜಯಮಾಲ ಮಾತನಾಡಿ, ಅದ್ಭುತ ಕಥೆಯನ್ನು ಕೆಲವೇ ನಿಮಿಷಗಳಲ್ಲಿ ಹೇಳುವುದು ಸುಲಭವಲ್ಲ. ದಿನೇಶ್ ಶೆಣೈ ಆ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದು ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಅವರಿಗೆ ಹಾಗೂ ತಂಡಕ್ಕೆ ಶುಭಾಶಯ ಎಂದರು
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ” ಮಧ್ಯಂತರ” ತಂಡಕ್ಕೆ ಶುಭಾಶಯ ತಿಳಿಸಿ, ಮುಖ್ಯಮಂತ್ರಿಗಳ ಬಳಿ ಚಿತ್ರರಂಗಕ್ಕೆ ಅನುಕೂಲವಾಗಲಿರುವ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ನಿರ್ದೇಶಕ ದಿನೇಶ್ ಶೆಣೈ ಮಾತನಾಡಿ ಚಿತ್ರರಂಗಕ್ಕೂ ನನಗೂ ಇಪ್ಪತ್ತೇಳು ವರ್ಷಕ್ಕೂ ಮೀರಿದ ನಂಟು. ಆದರೆ ಈ ಕಥೆ ಹೊಳದ್ದದ್ದು ಕೊರೋನ ಸಮಯದಲ್ಲಿ. ಕಿರುಚಿತ್ರ ಜನರಿಗೆ ಹಿಡಿಸಿದರೆ, ಮುಂದೆ ಚಲನಚಿತ್ರ ಮಾಡೋಣ. ಆಗ ನಿರ್ಮಾಪಕರು ಸಿಗುತ್ತಾರೆ ಎಂಬ ಉದ್ದೇಶದಿಂದ. ಕಿರುಚಿತ್ರ ನೋಡಿದ ದಯಾಳ್ ಪದ್ಮನಾಭನ್ ಅವರು ಪನೋರಮಾಗೆ ಕಳುಹಿಸಲು ಸಲಹೆ ನೀಡಿದರು. ಹಾಗೆ ಡಿಸೆಂಬರ್ ಒಳಗೆ ಸೆನ್ಸಾರ್ ಮಾಡಿಸಿದರೆ ರಾಷ್ಟ್ರಪ್ರಶಸ್ತಿಗೂ ಕಳುಹಿಸಬಹುದು ಎಂದು ಮತ್ತೊಬ್ಬ ಸ್ನೇಹಿತರು ಹೇಳಿದರು. ಅದೇ ರೀತಿ ಕಳುಹಿಸಲಾಯಿತು.
ನಾನ್ ಫೀಚರ್ ವಿಭಾಗದಲ್ಲಿ “ಮಧ್ಯಂತರ”ಕ್ಕೆ ಎರಡು ಪ್ರಶಸ್ತಿಗಳು ಬಂದಿದೆ. ಈ ಸಮಯದಲ್ಲಿ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. 1976ರಿಂದ 85 ರವರೆಗಿನ ಕಾಲಘಟ್ಟದ ಕಥೆ. ಇದನ್ನು ನೆಗೆಟೀವ್‍ನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಹನ್ನೊಂದು ದಿನಗಳ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಮಾಣಿಕ್ ಚಂದ್ ಸಂದರ್ಶನವೊಂದರಲ್ಲಿ ಹೇಳಿದ ಮಾತೇ ನನ್ನ “ಮಧ್ಯಂತರ “ಕ್ಕೆ ಸ್ಪೂರ್ತಿ. ಮುಂದಿನ ದಿನಗಳಲ್ಲಿ ಕಥೆ ಮುಂದುವರೆಸಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

ಸಂಕಲನಕಾರ ಸುರೇಶ್ ಅರಸ್ ಮಾತನಾಡಿ ಐವತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಪಾರ. ಅವರಿಗೆ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ತಿಳಿಸುವುದಾಗಿ ತಿಳಿಸಿದರು.

ಕಿರುಚಿತ್ರದಲ್ಲಿ ನಟಿಸಿರುವ ವೀರೇಶ್, ರಮೇಶ್ ಪಂಡಿತ್ ಮುಂತಾದ ಕಲಾವಿದರು ತಮ್ಮ ಅನುಭವವನ್ನು ಹಂಚಿಕೊಂಡರು. ನಟಿ ನಿಖಿತ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


