ಗಾಯಕ ಮನೋಜವಂ ಆತ್ರೇಯ ಸಾರಥ್ಯದಲ್ಲಿ “ರಾಜ್ ಗೀತ ನಮನ”

ವರನಟ ಡಾ, ರಾಜ್‍ಕುಮಾರ್ ಅವರ ಹುಟ್ಟುಹಬ್ಬ 95ನೇ ಹುಟ್ಟುಹಬ್ಬ ಇದೇ ಏಪ್ರಿಲ್ 24 ರಂದು ಅಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ “ಮೈ ನೇಮ್ ಇಸ್ ರಾಜ್” ಭಾಗ 3 ಕಾರ್ಯಕ್ರಮ ನಡೆಯಲಿದೆ.

ಸ್ವಾಮಿ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ಸಮಾರಂಭವನ್ನು ಆಯೋಜಿಸಿದೆ. ಈ ಬಾರಿ ” ರಾಜ್ ಗೀತ ನಮನ” ಎಂಬ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಹೆಸರಾಂತ ಗಾಯಕರು ಡಾ.ರಾಜ್ ಅವರ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರಣೆ ನೀಡಿದರು.
ಗಾಯಕ ಮನೋಜವಂ ಆತ್ರೇಯ ಮಾತನಾಡಿ, ನಾನು ಹಾಗೂ ನನ್ನ ಕುಟುಂಬದವರು ಡಾ ರಾಜಕುಮಾರ್ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬದ ದಿನ ಏನಾದರೂ ಸಮಾರಂಭ ಮಾಡಬೇಕೆಂದುಕೊಂಡು ಟೀಮ್ ಆತ್ರೇಯ ತಂಡದಿಂದ ಪ್ರತಿವರ್ಷ “ಮೈ ನೇಮ್ ಇಸ್ ರಾಜ್” ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಇದರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಈ ಬಾರಿ ನಮ್ಮೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೂಡ ಜೊತೆಯಾಗಿದೆ. ಏಪ್ರಿಲ್ 24 ರ ಸಂಜೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ “ಮೈ ನೇಮ್ ಇಸ್ ರಾಜ್” ಕಾರ್ಯಕ್ರಮ ನಡೆಯಲಿದೆ ಎಂದರು

“ಸರಿಗಮಪ” ಖ್ಯಾತಿಯ ಚನ್ನಪ್ಪ ಹುದ್ದರ್ , ಪೃಥ್ವಿ ಭಟ್, ಮೈತ್ರಿ ಅಯ್ಯರ್ ಸೇರಿದಂತೆ ಹೆಸರಾಂತ ಗಾಯಕರು ಅಂದು ಹಾಡಲಿದ್ದಾರೆ. ಹನ್ನೆರಡಕ್ಕೂ ಅಧಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಾದ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿರುತ್ತಾರೆ. ಡಾ.ರಾಜಕುಮಾರ್ ಅವರು ಸಿನಿಮಾ, ಧ್ವನಿಸುರುಳಿ ಸೇರಿದಂತೆ 5000 ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ.
ಡಾ.ರಾಜ್, ಕೇವಲ ಹಾಡುಗಾರರಷ್ಟೇ ಆಗಿರಲಿಲ್ಲ. ಕೆಲವು ವಾದ್ಯಗಳನ್ನು ನುಡಿಸುತ್ತಿದ್ದರು. ಅವರೊಬ್ಬ ಸರಸ್ವತಿ ಪುತ್ರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕೆ ಅವರು ಹಾಡಿರುವ ಮಾಣಿಕ್ಯ ವೀಣಾ, ನಾದಮಯ, ಮೇಘ ಬಂತು ಮೇಘ ಮುಂತಾದ ಹಾಡುಗಳೆ ಸಾಕ್ಷಿ. ಈ ಬಾರಿ “ಡಾ ರಾಜ್ ಗೀತ ನಮನ” ಎಂಬ ಹೆಸರಲ್ಲಿ ಅವರು ಹಾಡಿರುವ ಸಂಗೀತಮಯ ಹಾಡುಗಳನ್ನು ಪ್ರಸ್ತುತ ಪಡಿಸುತ್ತಾ ಅಣ್ಣವ್ರಲ್ಲಿದ್ದ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಸಮರ್ಪಿಸುತಿದ್ದೇವೆ. ಹೆಚ್ಚಿನ ಜನರೂ ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಂಡರು

ಸ್ವಾಮಿ ವಿವೇಕಾನಂದ ಟ್ರಸ್ಟ್ ನ ಪಾಟೀಲ್ ಮಾತನಾಡಿ, ನಾನು ಸಹ “ಮೈ ನೇಮ್ ಇಸ್ ರಾಜ್” ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ ಈ ಬಾರಿ ಮನೋಜವಂ ಅವರ ಜೊತೆಯಾಗಿದ್ದೆವೆ. ಡಾ. ರಾಜ್ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಸಾಕಷ್ಟು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಟಿಕೇಟ್ ಗಳು ಬುಕ್ ಮೈ ಶೋ ನಲ್ಲಿ ಲಭ್ಯವಿದೆ ಎಂದರು
ಟೀಂ ಆತ್ರೇಯ ತಂಡದ ಮನೋಜ್ ಹೊಸಮನಿ, ಶರಣ್, ವೇದಾಂತ್ ನರಸಿಂಹ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು