ಬಿಡುಗಡೆಯಾದ ಎಲ್ಲೆಡೆ ರಂಜಾನ್ ಚಿತ್ರಕ್ಕೆ ಮೆಚ್ಚುಗೆ

ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ’ರಂಜಾನ್’ ಸಿನಿಮಾವು ಬಿಡುಗಡೆಗೊಂಡಿದ್ದು ಎಲ್ಲಾ ಕಡೆಗಳಿಂದಲೂ ಪ್ರಶಂಸೆಯ ಸುರಿಮಳೆಗಳು ಬರುತ್ತಿದೆ. ಹಿರಿಯ ಲೇಖಕ ಫಕೀರ್‌ಮುಹಮ್ಮದ್ ಕಟ್ಪಾಡಿ ಬರೆದಿರುವ ’ನೊಂಬು’ ಕಥೆಯನ್ನು ಆಧರಿಸಿದೆ.
ಹಾಸ್ಯನಟನಾಗಿ ಗುರುತಿಸಿಕೊಂಡಿರುವ ಸಂಗಮೇಶ ಉಪಾಸೆ ಮೊದಲಬಾರಿ ನಾಯಕನಾಗಿ ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಜತೆಗೆ ಚಿತ್ರಕಥೆ-ಸಂಭಾಷಣೆ ಹಾಗೂ ಸಾಹಿತ್ಯ ಒದಗಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಪಂಚಾಕ್ಷರಿ.ಸಿ.ಈ ನಿರ್ದೇಶನ ಮಾಡಿದ್ದಾರೆ. ಯೂನಿವರ್ಸಲ್ ಸ್ಟುಡಿಯೋ ಮೂಲಕ


ಮಡಿವಾಳಪ್ಪ.ಎಂ.ಗೂಗಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಸಮಯದಲ್ಲಿ ಬಿಡುಗಡೆಗೊಂಡಿದ್ದು, ಮುಸ್ಲಿಂ ಜನಾಂಗದವರು ಅಲ್ಲದೆ ಇತರೆ ಧರ್ಮದವರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಥೆಯಲ್ಲಿ ದಮನಿತರ, ದಲಿತರ, ಬಡವರ, ಹಿಂದುಳಿದವರ ಶಿಕ್ಷಣದ, ಆರೋಗ್ಯದ, ನೆಲದ ಹಕ್ಕಿನ ಅಂಶಗಳು ಇರಲಿದೆ. ಹಾಗೂ ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್, ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆಯನ್ನು, ಉಳ್ಳವರು ಮತ್ತು ಇಲ್ಲದವರ ಎರಡು ಕುಟುಂಬಗಳ ಮಧ್ಯೆ ಹೋಲಿಕೆ, ಭೂಸ್ವಾದೀನದ ಸನ್ನಿವೇಶಗಳನ್ನು ತೋರಿಸುವುದು ಪ್ಲಸ್ ಪಾಯಿಂಟ್ ಆಗಿದೆ.

ತಾರಗಣದಲ್ಲಿ ಪ್ರೇಮಾವತಿ ಉಪಾಸೆ, ಬೇಬಿ ಈಶಾನಿಉಪಾಸೆ, ಮಾಸ್ಟರ್ ವೇದಿಕ್, ಭಾಸ್ಕರ್‌ಮಣಿಪಾಲ್, ಮಾಸ್ಟರ್ ನೀಲ್, ಜಯಲಕ್ಷಿ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾಭಟ್ ಮುಂತಾದವರು ನಟಿಸಿದ್ದಾರೆ. ಸಂಗೀತ ಇಂದ್ರ, ಛಾಯಾಗ್ರಹಣ ರಂಗಸ್ವಾಮಿ.ಜಿ, ಸಂಕಲನ ಡಿ.ಮಲ್ಲಿ, ಮಿಕ್ಸಿಂಗ್ ಪಳನಿ.ಡಿ.ಸೇನಾಪತಿ ಅವರದಾಗಿದೆ.