Review: Shakuni's political chess game between Krishna and Dushyasana in "The Devil"

Review: ಕೃಷ್ಣ, ದುಶ್ಯಾಸನ ನಡುವೆ ಶಕುನಿಯ ರಾಜಕೀಯ ಚದುರಂಗದಾಟ “ದಿ ಡೆವಿಲ್” - CineNewsKannada.com

Review: ಕೃಷ್ಣ, ದುಶ್ಯಾಸನ ನಡುವೆ ಶಕುನಿಯ ರಾಜಕೀಯ ಚದುರಂಗದಾಟ “ದಿ ಡೆವಿಲ್”

ಚಿತ್ರ: ದಿ ಡೆವಿಲ್
ನಿರ್ದೇಶನ: ಪ್ರಕಾಶ್ ವೀರ್
ತಾರಾಗಣ: ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶೋಭರಾಜ್,ಶ್ರೀನಿವಾಸ ಪ್ರಭು, ತುಳಸಿ, ಶರ್ಮಿಳಾ ಮಾಂಡ್ರೆ, ಗಿಲ್ಲಿ ನಟ,ಹುಲಿ ಕಾರ್ತಿಕ್ ಮತ್ತಿತರರು
ರೇಟಿಂಗ್: **** 4/5

ಕೃಷ್ಣನ ಮೆಸ್ ಫೇಮಸ್ಸು,,, ಖಾರ ಉಪ್ಪೆಸರು,, ಮುದ್ದೆ ಬಸ್ಸಾರು…
ಮನುಷ್ಯನನ್ನು ರಾಕ್ಷಸನ ರೀತಿ ಸಾಯಿಸಿ ಬಿಟ್ನಲ್ಲ. ಇವನಿಗಾಗಿ ನಾನು ಕೆಲಸ ಮಾಡ್ತಾ ಇರೋದು…

ಮಾಮ ಅಂತ ಮರ್ಯಾದೆ ಕೊಟ್ರೆ,, ನನಗೆ ಆರ್ಡರ್ ಮಾಡ್ತೀಯಾ… ಎದುರಿದ್ದ ವ್ಯಕ್ತಿಯ ತಲೆಗೆ ಗನ್ ಇಟ್ಟ ಅವಾಜ್ ಹಾಕಿದ ಧನುಶ್..

ಈ ವಾರ ತೆರೆಗೆ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ದಿ ಡೆವಿಲ್” ಚಿತ್ರದಲ್ಲಿ ನಾಯಕ ಮತ್ತು ಪ್ರತಿನಾಯಕ ನಡುವೆ ನಡೆಯುವ ಸಂಬಾಷಣೆ.ಎರಡೂ ಪಾತ್ರಗಳನ್ನು ದರ್ಶನ್ ಮಾಡಿರುವುದು ವಿಶೇಷ. ಎರಡೂ ಪಾತ್ರಗಳಲ್ಲಿ ಚಿಂದಿ ಉಡಾಯಿಸಿರುವ ದರ್ಶನ್ ಅಭಿಮಾನಿಗಳಿಗೆ ಹಬ್ಬದ ಊಟ ಉಣಬಡಿಸಿದ್ದಾರೆ.

ಹೆಸರಿಗೆ ತಕ್ಕಂತೆ ಮಾಸ್ ಡೈಲಾಗ್, ಪವರ್ ಫುಲ್ ಆಕ್ಷನ್, ಇದ್ರೆ ನೆಮ್ದಿಯಾಗಿರಬೇಕು ಎಂದು ಹಾಡಿ ಕುಣಿಯಲು ಹಾಡು, ಅಲ್ಲಲ್ಲಿ ಮನರಂಜನೆಯ ಮೂಲಕ ದರ್ಶನ್ ತಮ್ಮ ಖದರ್, ಪವರ್ ಛಾಪು ಪ್ರದರ್ಶಿಸಿರುವ ಚಿತ್ರ ಇದು.

ಕೃಷ್ಣ ಸಭ್ಯವಂತ, ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣವುಳ್ಳವ, ಮತ್ತೊಬ್ಬ ಧನುಶ್,, ಸ್ತೀಲೋಲ, ಕಣ್ಣಿಗೆ ಕಂಡದ್ದ ಕಣ್ಣು ಮಿಟಿಕಿಸುವಷ್ಟರಲ್ಲಿ ತನ್ನದಾಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡ ನಿಸ್ಸೀಮ.ಇವರಿಬ್ಬರ ನಡುವೆ ರಾಜಕೀಯ ಸುಳಿದರೆ ಏನೆಲ್ಲಾ ಆಗಲಿದೆ, ಕೃಷ್ಣ, ದುಶ್ಯಾಸನನ ನಡುವೆ ಶಕುನಿ ಎಂದರೆ ಏನೆಲ್ಲಾ ಆಗಬಹುದು ಎನ್ನುವುದನ್ನು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ “ದಿ ಡೆವಿಲ್”.

ಕೃಷ್ಣ -ದರ್ಶನ್ ಮೆಸ್ ನಡೆಸುವ ಕಾಯಕಜೀವಿ. ತನ್ನ ಹೋಟೆಲ್‍ಗೆ ಬರುವ ಗ್ರಾಹಕರಿಗೆ ಖ್ಯಾತ ನಟರ ವೇಷ ಹಾಕಿ ಅವರಂತೆ ಸಂಭಾಷಣೆ ಹೊಡೆದು ಅವರನ್ನು ರಂಜಿಸುವುದು ಈತನ ಉಪ ಕಸುಬು, ಈತನಿಗೆ ಒಂದೇ ಗುರಿ ದೊಡ್ಡ ನಟನಾಗಿ ನನ್ನ ಕಟೌಟ್ ಚಿತ್ರಮಂದಿರದ ಎದುರು ನಿಲ್ಲಬೇಕು ಎನ್ನುವ ಆಸೆ. ಅವಕಾಶ ಹುಡುಕಿಕೊಂಡು ಹೋಗಲ್ಲ, ಅವಕಾಶವೇ ನನ್ನ ಹುಡುಕಿಕೊಂಡು ಬರಬೇಕು ಎನ್ನುವ ಶಪಥ ಮಾಡಿದಾತ, ಈತನಿಗೆ ಒಬ್ಬಳು ಪ್ರೇಮಿ ರಕ್ಮಿಣಿ-ರಚನಾ ರೈ, ಆಕೆ ಮನೆಯಲ್ಲಿ ತೋರಿಸಿದ ಹುಡುಗರನೆಲ್ಲಾ ಬೇಡ ಎಂದಳು.

ಧನುಶ್- ದರ್ಶನ್, ರಾಜ್ಯದ ಮುಖ್ಯಮಂತ್ರಿ ರಾಜಶೇಖರ್- ಮಹೇಶ್ ಮಂಜ್ರೇಕರ್ ಮಗ, ಸ್ತ್ರೀಲೋಲ, ಅಂದುಕೊಂಡಿದ್ದು ಆಗಬೇಕು, ಇನ್ನು ಮುಖ್ಯಮಂತ್ರಿಗೆ ನಂಬಿಯಾರ್ – ಅಚ್ಯುತ್ ಕುಮಾರ್ ಎನ್ನುವ ನಂಬಿಕಸ್ತ ಎಂದು ಪೋಸು ನೀಡುವ ಶಕುನಿ ಭಂಟ, ಮುಖ್ಯಮಂತ್ರಿ ಜೈಲು ಸೇರುವ ಪರಿಸ್ಥಿತಿ ಬಂದಾಗ ಮಗ ಧನುಶ್‍ಗೆ ಪಟ್ಟ ಕಟ್ಟಲು ಮುಂದಾಗುತ್ತಾನೆ. ಇಂತಹ ಸಮಯದಲ್ಲಿ ಧನುಶ್‍ರಂತೆ ಕಾಣುವ ಕೃಷ್ಣ, ನಂಬಿಯಾರ್ ಕಣ್ಣಿಗೆ ಬೀಳ್ತಾನೆ, ಅಲ್ಲಿಂದ ಕಥೆ ಮತ್ತೊಂದು ಮಗ್ಗುಲು ಪಡೆಯುತ್ತದೆ,ರಾಜಕೀಯ ಚದುರಂಗದಾಟದಲ್ಲಿ ಏನೆಲ್ಲಾ ಆಗಲಿದೆ ಅದರ ವಿಶೇಷತೆ ಏನು, ಮುಂದೆ ಏನೆಲ್ಲಾ ನಡೆಯಲಿದೆ ಎನ್ನುವುದು ಚಿತ್ರದ ಕಥನ ಕುತೂಹಲ ಮತ್ತು ರೋಚಕತೆ. ಅದನ್ನು ಸಿನಿಮಾದಲ್ಲಿ ನೋಡಿದರೆ ಚೆನ್ನ.

ನಿರ್ದೇಶಕ ಪ್ರಕಾಶ್ ವೀರ್, ನಟ ದರ್ಶನ್ ಗಾಗಿ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಅಭಿಮಾನಿಗಳನ್ನು ರಂಜಿಸಲು ಏನೆಲ್ಲಾ ಸರಕು ಬೇಕೋ ಅವುಗಳನ್ನು ಅಡಕ ಮಾಡಿದ್ದಾರೆ, ಹೀಗಾಗಿ ದರ್ಶನ್ ಸೆಲೆಬ್ರಿಟಿಗಳಿಗೆ ವರ್ಷಾಂತ್ಯದಲ್ಲಿ ಮನರಂಜನೆಯ ರಸದೌತಣ ಉಣಬಡಿಸಿದ್ದಾರೆ. ಜೊತೆಗೆ ಈಗಿನ ಕಾಲಕ್ಕೆ ತಕ್ಕಂತೆ ಕಥೆ ಮಾಡುವಲ್ಲಿ ಪ್ರಕಾಶ್ ವೀರ್ ಉತ್ತಮ ಕೆಲಸ ಮಾಡಿದ್ದಾರೆ. ಅದರಲ್ಲಿ ಸಫಲರಾಗಿದ್ದಾರೆ ಕೂಡ.

ದರ್ಶನ್, ಅಭಿಮಾನಿಗಳನ್ನು ರಂಜಿಸಲು ಹಿಂದೆ ಬಿದ್ದಿಲ್ಲ. ಅದಕ್ಕಾಗಿ ಡಬ್ಬಲ್ ರೋಲ್‍ನಲ್ಲಿ ಕಾಣಿಸಿಕೊಂಡು ಡಬ್ಬಲ್ ಖುಷಿಯನ್ನು ತನ್ನ ಸೆಲೆಬ್ರಿಟಿಗಳಿಗೆ ನೀಡಿದ್ದಾರೆ, ಇನ್ನು ನೃತ್ಯ, ಫೈಟಿನಲ್ಲಿ ದರ್ಶನ್ ಅಭಿಮಾನಿಗಳ ಶಿಳ್ಳೆ ಕೇಕೆ ಹಾಕುವಂತೆ ಮಾಡಿದ್ದಾರೆ. ಜೊತೆಗೆ ಅವರಿಗೆ ಬಳಸಿರುವ ವಿಗ್ ಸೂಕ್ತವಾಗಿದೆ.

ನಟಿ ರಚನಾ ರೈ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡಿದ್ದಾರೆ,ಹಾಗಂತ ಅವರದ ವ್ಹಾ ಅನ್ನುವಂತ ಪಾತ್ರ ಅಲ್ಲ, ಆದರೂ ದರ್ಶನ್ ಎದುರಿಗೆ ಸೂಟ್ ಆಗಿದ್ದಾರೆ.

ಇನ್ನೂ ಮಹೇಶ್ ಮಂಜ್ರೇಕರ್ ಇಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಲ್ಲಿ ಅವರ ಡೈಲಾಗ್‍ಗೆ ಲಿಪ್ ಮೂಮೆಂಟ್ ಸರಿಯಾಗಿ ಸಿಂಕ್ ಆಗಿಲ್ಲ, ಹಿರಿಯ ಕಲಾವಿದ ಅಚ್ಯುತ್ ಚಿತ್ರದಲ್ಲಿನ ನಿಜವಾದ ಖಳನಟ, ನಟನೆಯಿಂದಲೇ ಗಮನ ಸೆಳೆದಿದ್ಧಾರೆ.

ಶೋಭರಾಜ್, ಗಿಲ್ಲಿ ನಟ, ಶ್ರೀನಿವಾಸ ಪ್ರಭು, ತುಳಿಸಿ, ಶರ್ಮಿಳಾ ಮಾಂಡ್ರೆ, ಹುಲಿಕಾರ್ತಿಕ್, ಚಂದುಗೌಡ, ವಿನಯ್ ಗೌಡ ಸೇರಿದಂತೆ ಹಲವು ಕಲಾವಿದರು ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ, ಎರಡು ಮೂರು ಸನ್ನಿವೇಶದಲ್ಲಿ ಬಂದರೂ ಗಿಲ್ಲಿ ನಟ ಕಮಾಲ್ ಮಾಡಿದ್ದಾರೆ

ಚಿತ್ರಕ್ಕೆ ಪೂರಕವಾಗಿ ಸುಧಾಕರ್ ರಾಜ್ ಕಾಮ್ಯಾರ, ಅಜನೀಶ್ ಲೋಕನಾಥ್ ಸಂಗೀತ ಮೂಡಿಬಂದಿದೆ. ದಿ ಡೆವಿಲ್ ಪಕ್ಕಾ ಪೈಸಾ ವಸೂಲ್ ಚಿತ್ರ. ಇಷ್ಟಕ್ಕೂ ಡೆವಿಲ್ ಯಾರು ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin