Interview: We are from the same family...there is no rivalry between us - Producer M. Ramesh Reddy

Interview: ಒಂದೇ ಕುಟುಂಬದವರು ನಾವು…ನಮ್ಮಲ್ಲಿ ಪೈಪೋಟಿ ಇಲ್ಲ – ನಿರ್ಮಾಪಕ ಎಂ.ರಮೇಶ್ ರೆಡ್ಡಿ - CineNewsKannada.com

Interview: ಒಂದೇ ಕುಟುಂಬದವರು ನಾವು…ನಮ್ಮಲ್ಲಿ ಪೈಪೋಟಿ ಇಲ್ಲ – ನಿರ್ಮಾಪಕ ಎಂ.ರಮೇಶ್ ರೆಡ್ಡಿ

“ಚಿತ್ರರಂಗ ಒಂದು ಕುಟುಂಬವಿದ್ದಂತೆ, ನಾವೆಲ್ಲಾ ಒಂದೇ ಕುಟುಂಬದವರು, ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ, ಬದಲಾಗಿ ಒಬ್ಬರಿಗೊಬ್ಬರು ಒಳ್ಳೆಯದಾಗಲಿ ಎಂದು ಶುಭ ಹಾರೈಸಿಕೊಳ್ಳುವ ಮನಸ್ಸಿದೆ. ಮೇಲಾಗಿ “45” ಸಿನಿಮಾದ ಕಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಜನರು ಕೈಹಿಡಿಯುತ್ತಾರೆ ಎನ್ನುವ ನಂಬಿಕೆ ಮತ್ತು ವಿಶ್ವಾಸವಿದೆ…”

ಹೀಗಂತ ಮುಕ್ತವಾಗಿ ಮಾತು ಹಂಚಿಕೊಂಡರು ನಿರ್ಮಾಪಕ ಎಂ. ರಮೇಶ್ ರೆಡ್ಡಿ. ಕನ್ನಡ ಚಿತ್ರರಂಗದ ಸಧಬಿರುಚಿ ಚಿತ್ರಗಳ ಸರದಾರ, ಸೋಲು ಗೆಲುವುಗಳ ಬಗ್ಗೆ ತಲೆ ಕಡೆಸಿಕೊಳ್ಳದೆ ಉತ್ತಮ ಚಿತ್ರ ನೀಡುವದ ಬಗ್ಗೆ ನಂಬಿಕೆವುಳ್ಳ ಮಾನವೀಯ ಕಳಕಳಿಯ “ಹೃದಯವಂತ ನಿರ್ಮಾಪಕ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ರಿಯಲ್‍ಸ್ಟಾರ್ ಉಪೇಂದ್ರ ಹಾಗು ಯಶಸ್ವಿ ಚಿತ್ರಗಳ ನಾಯಕ ರಾಜ್ ಬಿ ಶೆಟ್ಟಿ ಕಾಂಬಿನೇಷನ್‍ನಲ್ಲಿ ತೆರೆಗೆ ಬರಲು “45” ಚಿತ್ರ ಸಿದ್ದಗೊಂಡಿದೆ. ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಸೂರಜ್ ಪ್ರೊಡಕ್ಷನ್ ಅಡಿ ನಿರ್ಮಾಪಕ ಎಂ.ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

“45” ಚಿತ್ರ ಡಿಸೆಂಬರ್ 25ಕ್ಕೆ ರಾಜ್ಯಾದ್ಯಂತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹಲವು ಸಂಗತಿಗಳ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಿದರು

• “45” ಚಿತ್ರ ಡಿಸೆಂಬರ್ 25ಕ್ಕೆ ತೆರೆಗೆ ಬರುತ್ತಿದೆ, ಅದೇ ದಿನ ಕಿಚ್ಚ ಸುದೀಪ್ ನಟನೆಯ ಚಿತ್ರವೂ ತೆರೆಗೆ ಬರುತ್ತಿದೆ. ಈ ಬಗ್ಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡು ಹಿಂದೆ ಮುಂದೆ ಬರಬಹುದಿತ್ತಲ್ಲ.

ನಾವು ಐದಾರು ತಿಂಗಳ ಹಿಂದೆಯೇ ಡಿಸೆಂಬರ್ 25ಕ್ಕೆ ತೆರೆಗೆ ಬರುತ್ತೇವೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದೇವೆ, ಅದಕ್ಕೆ ಕಾರಣವೂ ಇದೆ, ಕ್ರಿಸ್ಮಸ್ ಸೇರಿದಂತೆ ರಜಾ ದಿನಗಳು ಬರುತ್ತಿವೆ. ಜೊತೆಗೆ ಒಳ್ಳೆಯ ದಿನ ಎಂದು ನಾವು ನಂಬುವ ಜ್ಯೋತಿಷಿಗಳು, ಗುರುಗಳು ಹೇಳಿದ್ದರಿಂದ ಡಿಸೆಂಬರ್ 25ಕ್ಕೆ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದೇವೆ. ಸುದೀಪ್ ಅವರ ಚಿತ್ರವೂ ಅಂದೇ ಬಿಡುಗಡೆಯಾಗುತ್ತಿದೆ, ಚಿತ್ರರಂಗ ಎಂದರೆ ಒಂದೇ ಕುಟುಂಬವಿದ್ದಂತೆ ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ, ಒಬ್ಬರಿಗೊಬ್ಬರು ಒಳ್ಳೆಯದಾಗಲಿ ಎಂದು ಹಾರೈಸುವಷ್ಟು ದೊಡ್ಡ ಮನಸ್ಸು ಹೊಂದಿದ್ದೇವೆ. 45 ಚಿತ್ರ ಕಥೆಯ ಮೇಲೆ ನಂಬಿಕೆ ಇದೆ. ಜನ ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ.

• ಬೆಳ್ಳಿ ಪರದೆಯ ಮೇಲೆ ಚಿತ್ರ ನೋಡುವುದಕ್ಕಿಂತ ಮುಂದೆ ಕಂಪ್ಯೂಟರ್ ಪರದೆಯ ಮೇಲೆ ಸಿನಿಮಾ ನೋಡಿ, ಆ ಮೇಲೆ ಚಿತ್ರೀಕರಣ ಆರಂಭಿಸಿದ ಸಿನಿಮಾ ಇದು, ನಿಮಗೆ ಎಷ್ಟು ಪೂರಕವಾಯಿತು

ನಿರ್ದೇಶಕ ಅರ್ಜುನ್ ಜನ್ಯ ಚಿತ್ರೀಕರಣಕ್ಕೆ ಹೋಗುವ ಮುನ್ನ ಕಂಪೂಟರ್‍ನಲ್ಲಿ 2 ಗಂಟೆ 25 ನಿಮಿಷದ ಸಿನಿಮಾ ತೋರಿಸಿದ್ದರು. ಅದು ಯಥಾವತ್ ಸಿನಿಮಾ ರೀತಿಯೇ ಇತ್ತು, ಹೀಗಾಗಿ ಚಿತ್ರ ನಿರ್ಮಾಣ ಮಾಡಲು ಒಪ್ಪಿಕೊಂಡೆ. ಚಿತ್ರದ ಪ್ರತಿಯೊಂದು ಸನ್ನಿವೇಶವೇ ಹೀಗೆ ಬರಲಿದೆ ಎನ್ನುವುದ ಗೊತ್ತಿದ್ದರಿಂದ ಹೆಚ್ಚು ಚಿತ್ರೀಕರಣ ಮಾಡುವ ಅಗತ್ಯ ಎದುರಾಗಲಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಅವರು ಕಥೆ ಹೇಳಿದ ರೀತಿ ಮತ್ತು ವಿಧಾನ ಇಷ್ಟ ಆಯಿತು. ಹೀಗಾಗಿ ಸಿನಿಮಾ ನಿರ್ಮಾಣ ಮಾಡಲಾಗಿದೆ.

• 45 ಸಿನಿಮಾ ಕಥೆ ಏನು,, ಚಿತ್ರಕ್ಕೆ 45 ಎಂದು ಹೆಸರಿಡುವರ ಹಿಂದಿನ ವಿಶೇಷತೆ ಏನು..

ಚಿತ್ರದ ಮೂಲಕ ಹಿಂದೂ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಇಡೀ ಸಿನಿಮಾ ಹಿಂದೂ ಸಂಸ್ಕøತಿಯ ರಕ್ಷಣೆಯ ಸುತ್ತ ಸಾಗಲಿದೆ. ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಲಿದೆ, ಜೊತೆಗೆ 45 ದಿನಗಳಲ್ಲಿ ನಡೆಯುವ ಕಥೆ ಆಗಿದ್ದರಿಂದ ಚಿತ್ರಕ್ಕೆ 45 ಅಂತ ಹೆಸರಿಡಲಾಗಿದೆ.

• ಚಿತ್ರವನ್ನು ಎಲ್ಲೆಲ್ಲಿ ಚಿತ್ರೀಕರಣ ಮಾಡಿದ್ದೀರಿ ಮತ್ತು ಎಷ್ಟು ದಿನ ಚಿತ್ರೀಕರಣವಾಗಿದೆ.

ಚಿತ್ರವನ್ನು ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಕಡೆ 126 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ, ಕೆಲವು ಕಡೆ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಪ್ರತಿಯೊಂದು ಸನ್ನಿವೇಶವೂ ಒಂದಕ್ಕಿಮಥ ಒಂದು ಸನ್ನಿವೇಶ ಅದ್ಬುತವಾಗಿ ಮೂಡಿ ಬಂದಿದೆ. ಅಭಿಮಾನಿಗಳು ಹಬ್ಬದ ಊಟ ಉಣಬಡಿಸಲಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ.

• 45 ಚಿತ್ರದ ಟ್ರೈಲರ್ ಬಿಡುಗಡೆ ಡಿಸೆಂಬರ್ 15ರಂದು ಹಮ್ಮಿಕೊಂಡಿದ್ದೀರಿ ಈ ಬಗ್ಗೆ ಹೇಳುವುದಾದರೆ.

ಹೌದು. ಡಿಸೆಂಬರ್ 15 ರಂದು ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಶಂಕರ್‍ನಾಗ್ ಆಟದ ಮೈದಾನದಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ, ಅದೇ ಕಾರ್ಯಕ್ರಮವನ್ನು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ 7 ಕಡೆ ಚಿತ್ರಮಂದಿರದಲ್ಲಿ ನೇರ ಪ್ರಸಾರ ಹಮ್ಮಿಕೊಂಡಿದ್ದೇವೆ, ಇದಕಾಗಿ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ, ಏನೇ ಮಾಡಿದರೂ ವಿಶೇಷವಾಗಿರಬೇಕು ಮತ್ತು ಅಭಿಮಾನಿಗಳಿಗೆ ಇಷ್ಟವಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಇಡೀ ತಂಡ ಶ್ರದ್ದೆಯಿಂದ ಕೆಲಸ ಮಾಡುತ್ತಿದೆ.

• ಚಿತ್ರೀಕರಣಕ್ಕೆ ಹೋಗುವ ಮುನ್ನ ಚಿತ್ರದ ಪ್ರತಿ ಸನ್ನಿವೇಶ ಹೀಗೆ ಬರಲಿದೆ ಎನ್ನುವುದು ಗೊತ್ತಿದ್ದರೂ ಚಿತ್ರೀರಕರಣ ತಡೆ ಆಗಿದ್ದು ಯಾಕೆ..

ಚಿತ್ರದಲ್ಲಿ ಸ್ಟಾರ್ ನಟರಾದ ಶಿವರಾಜ್‍ಕುಮಾರ್, ಉಪೇಂದ್ರ ಹಾಗು ರಾಜ್.ಬಿಶೆಟ್ಟಿ ನಟಿಸಿದ್ದಾರೆ, ಎಲ್ಲರ ಡೇಟ್ ಹೊಂದಾಣಿಕೆ ಮಾಡಬೇಕಾಗಿತ್ತು. ಅವರ ಸಮಯಕ್ಕೆ ಚಿತ್ರೀಕರಣ ಮಾಡುವುದು ತುಸು ತಡ ಆಯ್ತು. ಜೊತೆಗೆ ಚಿತ್ರದ ಗ್ರಾಫಿಕ್ ಕೆಲಸ ಹೆಚ್ಚು ಸಮಯ ತೆಗೆದುಕೊಂಡಿತು, ಹೀಗಾಗಿಯೇ ಎರಡು ಬಾರಿ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿ ಆ ನಂತರ ಮುಂದೂಡುವಂತಾಯಿತು. ಅದನ್ನು ಬಿಟ್ಟು ಬೇರೆ ಕಾರಣಗಳಿಲ್ಲ.

• ಚಿತ್ರದಲ್ಲಿ ಗ್ರಾಫಿಕ್ ಕೆಲಸ ಎಷ್ಟಿದೆ. ಎಲ್ಲಿ ಮಾಡಿಸಲಾಗಿದೆ. ಎಷ್ಟು ಖರ್ಚಾಗಿದೆ..ಆ ಬಗ್ಗೆ ವಿವರ ನೀಡುವುದಾದರೆ

ಚಿತ್ರದಲ್ಲಿ ಸರಿ ಸುಮಾರು 1 ಗಂಟೆಯ ಕಾಲ ಗ್ರಾಫಿಕ್ ಕೆಲಸ ಇದೆ, ಇದಕ್ಕಾಗಿಯೇ ಹೆಚ್ಚು ಸಮಯ ತೆಗೆದುಕೊಂಡಿತು. ಗ್ರಾಫಿಕ್ ಕೆಲಸ ಅಚ್ಚುಕಟ್ಟಾಗಿ ಬರಬೇಕು ಎನ್ನುವುದು ನಮ್ಮ ಮತ್ತು ನಿರ್ದೇಶಕರ ಉದ್ದೇಶವಾಗಿತ್ತು, ಅಂದುಕೊಂಡಂತೆ ಗ್ರಾಫಿಕ್ ಮೂಡಿಬಂದಿದೆ, ಚಿತ್ರ ನೋಡಿದ ಮೇಲೆ ಗ್ರಾಫಿಕ್‍ಗೆ ಯಾಕೆ ಇಷ್ಟು ಸಮಯ ತೆಗೆದುಕೊಂಡಿತು ಎನ್ನುವುದು ಗೊತ್ತಾಗುತ್ತದೆ, ಅಷ್ಟು ಸುಂದರ ಮತ್ತು ಅದ್ಬುತವಾಗಿ ಮೂಡಿಬಂದಿದೆ. ಕೆನಡಾದಲ್ಲಿ ಚಿತ್ರಕ್ಕಾಗಿ ಗ್ರಾಫಿಕ್ ಕೆಲಸ ಮಾಡಿಸಲಾಗಿದೆ. ಗ್ರಾಫಿಕ್‍ಗೆ ಹೆಚ್ಚು ಹಣ ಖರ್ಚಾಗಿದೆ, ಒಳ್ಳೆಯ ಸಿನಿಮಾ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು, ಹಾಗಾಗಿ ಆ ಬಗ್ಗೆ ಯೋಚಿಸಿಲ್ಲ.

• ನಿರ್ದೇಶಕ ಅರ್ಜುನ್ ಜನ್ಯ, ಅದ್ಬುತ ಹಾಡುಗಳನ್ನು ಕೊಡುತ್ತಿರುವ ಸಂಗೀತ ಮಾಂತ್ರಿಕ. ಅವರ ಮೊದಲ ನಿರ್ದೇಶನದಲ್ಲಿ ವ್ಹಾವ್. ಎನ್ನಲು ಹಾಡುಗಳಿಲ್ಲ ಯಾಕೆ..

ಮೊದಲ ಹೇಳಿದ ಹಾಗೆ 45 ಚಿತ್ರ ಹಿಂದೂ ಸಂಸ್ಕøತಿ ಕುರಿತಾದ ಚಿತ್ರ ಆಗಿದೆ, ಹೀಗಾಗಿ ಅದರ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಚಿತ್ರಕ್ಕೆ ಎಲ್ಲಿಯೂ ಹಾಡು ಬೇಕು ಅನ್ನಿಸಲಿಲ್ಲ, ಹೀಗಾಗಿ ಬಲವಂತವಾಗಿ ಹಾಡು ಸೇರಿಸಲು ಹೋಗಿಲ್ಲ.

• ಆಫ್ರಿಕಾದ ಖಂಡದಲ್ಲಿ ವೈರಲ್ ಆದ ಡ್ಯಾನ್ಸ್ ತಂಡ ಕರೆಸಿ ಹಾಡು ಮಾಡಿಸಿದ್ದೀರಿ, ಅದು ಸಿನಿಮಾದಲ್ಲಿ ಇರುತ್ತಾ, ಅಥವಾ ಸಿನಿಮಾ ಪ್ರಚಾರಕ್ಕಾಗಿ ಮಾಡಿದ್ದಾ..

ಹೌದು ಉತ್ತಮ ಡ್ಯಾನ್ಸರ್ ತಂಡವನ್ನು ಕರೆಸಿ ಆಪ್ರೋ ಹಾಡು ಮಾಡಿದ್ದೇವೆ . ಆ ಹಾಡು ಚೆನ್ನಾಗಿ ಮೂಡಿ ಬಂದಿದೆ, ಅದು ಚಿತ್ರದಲ್ಲಿ ಇರಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಚಿತ್ರದಲ್ಲಿ ನೋಡಿ, ಇನ್ನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಎಂದು ಹೇಳುವ ಮೂಲಕ ಚಿತ್ರದ ಬಗೆಗಿನ ನಿರೀಕ್ಷೆ ಮತ್ತು ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದರು.

• ಶಿವಣ್ಣ, ಉಪೇಂದ್ರ, ರಾಜ್.ಬಿ ಶೆಟ್ಟಿ ಇದ್ದಾರೆ, ಚಿತ್ರಮಂದಿರಕ್ಕೆ ಬಂದ ಅಭಿಮಾನಿಗಳು ಚಿತ್ರದಲ್ಲಿ ಏನನ್ನು ನಿರೀಕ್ಷೆ ಮಾಡಬಹುದು.

45 ಚಿತ್ರ ಮನರಂಜನೆಯ ರಸದೌತಣ ನೀಡಲಿದೆ, 2 ಗಂಟೆ 25 ನಿಮಿಷದ ಚಿತ್ರದ ಪ್ರತಿ ಸನ್ನಿವೇಶವೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಮೂರು ನಟರ ಅಭಿಮಾನಿಗಳು ಇಷ್ಟವಾಗಲಿದೆ. ಜೊತೆಗೆ ಕನ್ನಡದ ಸಿನಿ ರಸಿಕರಿಗೂ ಕೂಡ ಆಕ್ಷನ್,ಎಮೋಷನ್, ಕಾಮಿಡಿ ಸೇರಿದಂತೆ ಭರಪೂರ ಮನರಂಜನೆಯ ವಿಷಯಗಳು ಚಿತ್ರದಲ್ಲಿವೆ. ಜೊತೆಗೆ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರನ್ನು ಈ ಹಿಂದೆ ಯಾವುದೇ ಸಿನಿಮಾದಲ್ಲಿ ತೋರಿಸದ ರೀತಿಯಲ್ಲಿ ತೋರಿಸಿದ್ದೇವೆ. ಅದ್ದೂರಿ ಸೆಟ್‍ಗಳು ಚಿತ್ರದಲ್ಲಿ ಬಳಸಿರುವ ಬೈಕ್ ಸೇರಿ ಹಲವು ವಿಶೇಷತೆ ಇದೆ. ಯಾವೆಲ್ಲಾ ಕುತೂಹಲಗಳು ಇವೆ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡಿ ಅದರ ಮಜನಾ ಬೇರೆ ಇರುತ್ತದೆ.

• ಚಿತ್ರದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಶೆಟ್ಟಿ ಅವರಲ್ಲದೆ ಯಾರೆಲ್ಲಾ ಕಲಾವಿದರಿದ್ಧಾರೆ

ಚಿತ್ರದಲ್ಲಿ ಹಲವು ಕಲಾವಿದರ ಸಂಗಮವಿದೆ. ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಕುತೂಹಲವಾಗಿ ಇಟ್ಟುಕೊಂಡಿದ್ದೇವೆ, ಸಿನಿಮಾ ನೋಡುವ ತನಕ ಆ ಕುತೂಹಲ ಇರಲಿ ಎನ್ನುವುದು ನಮ್ಮ ಉದ್ದೇಶ, ಚಿತ್ರ ನೋಡಿದ ಮೇಲೆ ಎಲ್ಲರೂ ಸಪ್ರೈಸ್ ಆಗಲಿದ್ದಾರೆ.

• ಚಿತ್ರವನ್ನು ಯಾರು ಬಿಡುಡಗೆ ಮಾಡುತ್ತಿದ್ದಾರೆ. ಎಷ್ಟು ಚಿತ್ರಮಂದಿರಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ. ಬಿಡುಗಡೆಗೆ ಇನ್ನೂ ಎರಡೂ ಮೂರು ವಾರ ಇರುವುದರಿಂದ ಸದ್ಯದಲ್ಲಿಯೇ ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎನ್ನುವುದು ಗೊತ್ತಾಗಲಿದೆ. ಆದಷ್ಟು ಹೆಚ್ಚು ಚಿತ್ರಮಂದಿರಗಳಲ್ಲಿಯೇ ತೆರೆಗೆ ಬರಲಿದೆ.

• ಚಿತ್ರದ ವಿಶೇಷತೆಗಳ ಬಗ್ಗೆ ಹೇಳುವುದಾದರೆ

ಕನ್ನಡದ ಚಿತ್ರರಂಗದಲ್ಲಿ ಬಹುತಾರಾಗಣ, ತಾಂತ್ರಿಕ ದೃಶ್ಯವೈಭವ, ಸಿನಿಮಾ ಮಾಡುವರಿಗೆ ಆಕರ ಗ್ರಂಥವಾಗಬಹುದಾದ ಅದ್ದೂರಿ ದೃಶ್ಯ ವೈಭವ, ಉಗಾಂಡದಿಂದ ವೈರಲ್ ಡ್ಯಾನ್ಸರ್ ಕರೆಸಿದ ವಿಶೇಷತೆ, ಕೆನಡದಾದಲ್ಲಿ ಗ್ರಾಫಿಕ್ ಮಾಡಿರುವುದೂ ಸೇರಿದಂತೆ ಹಲವು ವಿಶೇಷತೆ ಮತ್ತು ವಿಭಿನ್ನ ಗಳನ್ನು 45 ಚಿತ್ರ ಒಳಗೊಂಡಿದೆ.ಹೊಸತನದ ಕಥೆ, ಹೊಸ ನಿರ್ದೇಶಕ, ಸೂಪರ್ ಸ್ಟಾರ್ ಗಳನ್ಜು ಒಟ್ಟುಗೂಡಿಸಿ ಸಿನಿಮಾ ಮಾಡುವುದು ಸುಲಭವಲ್ಲ. ಅದರಲ್ಲಿಯೂ ಚಿತ್ರದ ಬಹುತೇಕ ಭಾಗ ಗ್ರಾಫಿಕ್ ನಲ್ಲಿ ತೋರಿಸಿವುದು ಚಿತ್ರದ ವಿಶೇಷತೆಗಳನ್ನು ಒಳಗೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin