” `ಭೈರತಿ ರಣಗಲ್’ ಗೆ ಸ್ಯಾಂಡಲ್ ವುಡ್ ನಟ,ನಟಿಯರ ಬೆಂಬಲ: ನವಂಬರ್ 15ಕ್ಕೆ ಚಿತ್ರ ತೆರೆಗೆ
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಭೈರತಿ ರಣಗಲ್” ನವೆಂಬರ್ 15 ರಂದು ತೆರೆಗೆ ಬರಲಿದ್ದು ಕುತೂಹಲ ಹೆಚ್ಚು ಮಾಡಿದೆ.
ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ `ಭೈರತಿ ರಣಗಲ್’ ಚಿತ್ರದ ಪ್ರೀ ರಿಲೀಸ್ ಗೆ ಹಲವು ನಟ ನಟಿಯರು ಸಾಥ್ ನೀಡಿ ಚಿತ್ರಕ್ಕೆ ಶುಭ ಕೋರಿದರು.
1996 ರಲ್ಲಿ ಶಿವಣ್ಣ ಅಭಿನಯದ ಸೂಪರ್ ಹಿಟ್ ಚಿತ್ರ “ಜನುಮದ ಜೋಡಿ” ಕೂಡ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಈಗ “ಭೈರತಿ ರಣಗಲ್” ಚಿತ್ರ ಕೂಡ ಅದೇ ದಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಡಾಲಿ ಧನಂಜಯ, ನೀನಾಸಂ ಸತೀಶ್, ವಿಜಯ ರಾಘವೇಂದ್ರ, ಸುಧಾರಾಣಿ, ಶೃತಿ, ರಕ್ಷಿತಾ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದು, ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್, ನಿರ್ದೇಶಕರಾದ ಬಹದ್ದೂರ್ ಚೇತನ್, ಪವನ್ ಒಡೆಯರ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವಾರು ಗಣ್ಯರು ಈ ಸುಂದರ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೀತಿ ತುಂಬಿದ ಮಾತುಗಳಿಂದ “ಭೈರತಿ ರಣಗಲ್” ಗೆ ಶುಭ ಕೋರಿದರು.
ನಟ ಶಿವರಾಜ್ ಕುಮಾರ್ ಮಾತನಾಡಿ “ಮಫ್ತಿ” ಚಿತ್ರದ “ಭೈರತಿ ರಣಗಲ್” ಪಾತ್ರವನ್ನು ತಾವು ಮೆಚ್ಚಿಕೊಂಡು ಯಶಸ್ವಿ ಮಾಡಿದ್ದೀರಿ ಎಂದು ಮಾತನಾಡಿದ ನಾಯಕ ಶಿವರಾಜಕುಮಾರ್, “ಮಫ್ತಿ” ಚಿತ್ರದ ಪ್ರೀಕ್ವೇಲ್ ಈ “ಭೈರತಿ ರಣಗಲ್”. ನಿರ್ದೇಶಕ ನರ್ತನ್ ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಅಷ್ಟೇ ಚೆನ್ನಾಗಿ ನಿರ್ದೇಶನವನ್ನು ಮಾಡಿದ್ದಾರೆ. “ಭೈರತಿ ರಣಗಲ್” ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾನೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ ಎರಡನೇ ಚಿತ್ರವಿದು. ಅನುಭವಿ ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನವೆಂಬರ್ 15ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು
ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15 ರಂದೇ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್‍ನಲ್ಲಿ ಬಿಡುಗಡೆಯಾಗಿತ್ತು. ಅದರ ನಿರ್ದೇಶಕರು ನಾಗಾಭರಣ. ಈ ಚಿತ್ರ ಕೂಡ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಇದರ ನಿರ್ದೇಶಕರು ನರ್ತನ್. ಎರಡು ಚಿತ್ರಗಳಲ್ಲೂ ನ ನ ಇದೆ. ಇದು ಕಾಕತಾಳೀಯ. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ ಎಂದು ಹೇಳಿದರು
ನಿರ್ದೇಶಕ ನರ್ತನ್ ಹಾಗೂ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಚಿತ್ರವನ್ನು ನೋಡಿ ಪೆÇ್ರೀತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು.
ನಾಯಕಿ ರುಕ್ಮಿಣಿ ವಸಂತ್, ನಟಿ ಛಾಯಾಸಿಂಗ್, ಚಿತ್ರದಲ್ಲಿ ಅಭಿನಯಿಸಿರುವ ಅವಿನಾಶ್, ಬಾಬು ಹಿರಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು, ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಗ್ರಾಹಕ ನವೀನ್ ಕುಮಾರ್ ಸೇರಿದಂತೆ ಮುಂತಾದ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.