ಆಡಿಯೋ ಕ್ಷೇತ್ರಕ್ಕೆ ಕಾಲಿಟ್ಟ ಸತ್ಯ ಪಿಚ್ಚರ್ಸ್

ಇಬ್ಬನಿ ಎಂಬ ಮೂರಕ್ಷರ ಕೇಳಿದಾಕ್ಷಣ ಎಲ್ಲರ ಕಣ್ಣಂಚಿನಲ್ಲೂ ಹೊಳಪು. ಸವಿಗನಸುಗಳ, ಮಧುರ ನೆನಪುಗಳ ಹೊಳಪದು. ಈ ಒಲವಿನ ಹೊಳಪನ್ನೇ ಮ್ಯೂಸಿಕ್ ವಿಡಿಯೋ ಮೂಲಕ ದೃಶ್ಯೀಕರಿಸಿದ್ದಾರೆ ಯುವ ನಿರ್ದೇಶಕ ಪ್ರಶಾಂತ್ ಬಾಗೂರ್.
ಸತ್ಯ ಪಿಕ್ಚರ್ಸ್ ಯೂ ಟ್ಯೂಬ್ ಚ್ಯಾನೆಲ್ ಈಗಾಗಲೇ ಕಿರುಚಿತ್ರ ಸರಣಿಯ ಮೂಲಕ ಹೊಸಪ್ರಯೋಗಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೊಸ ಸೇರ್ಪಡೆ ‘ಇಬ್ಬನಿ’ ವಿಡಿಯೋ ಗೀತೆ. ಸತ್ಯ ಮತ್ತು ಮಯೂರ ಮೋಷನ್ ಪಿಕ್ಚರ್ಸ್ ಹಾಗೂ ಬಿಲ್ವ ಸ್ಟುಡಿಯೋಸ್ ಜಂಟಿಯಾಗಿ ಈ ಆಲ್ಬಂ ಗೀತೆಯನ್ನು ನಿರ್ಮಿಸಿದೆ.

‘ಇಬ್ಬನಿ’ ಆಲ್ಬಂ ಗೀತೆಯ ಮೂಲಕ ಸತ್ಯ ಪಿಕ್ಚರ್ಸ್ ಆಡಿಯೋ ಜಗತ್ತಿಗೂ ಕಾಲಿರಿಸಿದೆ. ಸತ್ಯಪಿಕ್ಚರ್ಸ್ ನ ಡಿ.ಸತ್ಯಪ್ರಕಾಶ್ ಅವರು ಮಾತನಾಡಿ “ಈಗಾಗಲೇ ಆಡಿಯೋ ಲೇಬಲಿಂಗ್ ಹಕ್ಕುಗಳನ್ನು ಪಡೆದಿದ್ದು, ಸತ್ಯ ಪಿಕ್ಚರ್ಸ್ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶೇಷತೆಗಳನ್ನು ಕಲಾಭಿಮಾನಿಗಳಿಗೆ ನೀಡಲಿದ್ದೇವೆ” ಎಂದಿದ್ದಾರೆ.
ಈ ಮೂಲಕ ಸತ್ಯ ಪಿಚ್ಚರ್ಸ್ ಇನ್ನಷ್ಟು ಮ್ಯೂಸಿಕ್ ವಿಡಿಯೋಗಳು ಹಾಗೂ ಚಲನಚಿತ್ರ ಗೀತೆ ಗಳಿಗೆ ವಿವಿಧ ಆಡಿಯೋ ಪ್ಲಾಟ್ಫಾರ್ಮ್ ಗಳ ಮುಖೇನ ಕೇಳುಗರನ್ನು ತಲುಪಲು ವೇದಿಕೆಯನ್ನು ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದೆ. ಮುಂಬರುವ ದಿನಗಳಲ್ಲಿ ಸತ್ಯ ಪಿಚ್ಚರ್ಸ್ ಮಯೂರ ಮೋಶನ್ ಪಿಚ್ಚರ್ಸ್ ನ ಸಹಯೋಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಮೂಲಕ ಇನ್ನಷ್ಟು ಹಾಡುಗಳನ್ನು ನಿರ್ಮಿಸುವ ಉದ್ದೇಶವನ್ನು ಇಟ್ಟುಕೊಂಡಿದೆ.
ಖ್ಯಾತ ಸಂಗೀತ ನಿರ್ದೇಶಕ ನಟ ಸಾಧು ಕೋಕಿಲ ಅವರು ಇಬ್ಬನಿ ಮ್ಯೂಸಿಕ್ ವಿಡಿಯೋ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ‘ಇಬ್ಬನಿ’ ಗೀತೆಯ ಚಂದದ ಸಾಲುಗಳಿಗೆ ಲೇಖನಿ ಹಿಡಿದವರು ದಯಾನಂದ ರಾಜಣ್ಣ.ಮನದ ಮಾತುಗಳಿಗೆ ಅಕ್ಷರ ರೂಪ ನೀಡಿ, ಹಂಸಲೇಖರಂತಹ ಹಿರಿಯ ಗೀತಸಾಹಿತಿಗಳನ್ನು ಭೇಟಿ ಮಾಡಿದ ನಂತರವಷ್ಟೇ ಹಾಡಿನ ಸಾಲುಗಳನ್ನು ಬರೆಯಲು ಧೈರ್ಯ ಬಂದದ್ದು” ಎನ್ನುತ್ತಾರೆ ದಯಾನಂದ ರಾಜಣ್ಣ.
ಇದನ್ನು ಕಾರ್ಯರೂಪಕ್ಕೆ ತಂದು ದೃಶ್ಯ ವೈಭವದ ಮೂಲಕ ಇಂದಿನ ಪೀಳಿಗೆಯ ಹುಡುಗ ಹುಡುಗಿಯರಿಗೆ ಮುದಾ ನೀಡುವಂತೆ ಪ್ರಶಾಂತ ಬಾಗೂರು ನವಿರಾದ ದೃಶ್ಯ ಕಾವ್ಯವನ್ನು ನಿರ್ದೇಶಿಸಿದ್ದರೆ. ಅಂಜನ್ ಆರ್ ಮಾಲೂರ್ ರವರ ಕ್ಯಾಮೆರಾ ಕೈಚಳಕವಿರುವ ಈ ಹಾಡನ್ನು ಯಾವುದೇ ಸಿನಿಮಾ ಹಾಡಿನ ಗುಣಮಟ್ಟಕ್ಕೆ ಹೋಲಿಸಬಹುದು ಎಂದು ನಿರ್ದೇಶಕರು ಹೇಳುತ್ತಾರೆ. ಈ ಹಾಡಿನೊಂದಿಗೆ ಉದಯೋನ್ಮುಖ ಪ್ರತಿಭೆಗಳಾದ ಅಭಿ ಗೌಡ ಮತ್ತು ರಕ್ಷಾ ಜಾದವ್ ರನ್ನು ಪರಿಚಯಿಸಲಾಗುತ್ತಿದೆ.
- ನಮ್ಮ ಸ್ಯಾಂಡಲ್ವುಡ್ನ ಮುದ್ದುಕಂಠದ ಗಾಯಕಿ ಅನುರಾಧ ಭಟ್ ಅವರ ಧ್ವನಿಯಲ್ಲಿ ಹಾಗೂ ‘ಜಿಂಕೆ ಮರಿ’ ಹಾಡಿನ ಖ್ಯಾತಿಯ ಎಮಿಲ್ ಅವರ ಸಂಗೀತ ನಿರ್ದೇಶನದಲ್ಲಿ ಗೀತೆ ಮೂಡಿಬಂದಿದೆ. ಈ ಗೀತೆಯ ಮುಖ್ಯಭೂಮಿಕೆಯಲ್ಲಿ ಅಭಿ ಗೌಡ ಹಾಗೂ ರಕ್ಷಾ ಜಾದವ್ ನಟಿಸಿದ್ದಾರೆ. ಅಂಜನ್ ಆರ್ ಮಾಲೂರ್ ಕ್ಯಾಮೆರಾ ಕೈಚಳಕ ಇರುವ ಈ ಮ್ಯೂಸಿಕ್ ವಿಡಿಯೋಗೆ ದಿವ್ಯಶ್ರೀ ಹೇಮಂತ್ ಅವರು ವಸ್ತ್ರವಿನ್ಯಾಸಗೊಳಿಸಿದ್ದಾರೆ.
“ಹಾಡಿನ ಮೂಲಕ, ಹೆಣ್ಣಿನ ಆಂತರ್ಯದ ಭಾವನೆಗಳಿಗೆ, ಕಲ್ಪನೆಗಳಿಗೆ ಸುಂದರ ಸನ್ನಿವೇಶಗಳನ್ನು ಸೃಷ್ಟಿಸಿ, ಕತೆಯೊಂದನ್ನು ಹೇಳುವ ಪ್ರಯತ್ನವಿದು. ಇದನ್ನು ವೀಕ್ಷಕರು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ತಂಡದ್ದು. ಈ ಆಲ್ಬಂ ಗೀತೆಯನ್ನು ವ್ಯಾಲಂಟೈನ್ಸ್ ಡೇ ಪ್ರಯುಕ್ತವಾಗಿ ಇದೇ ಫೆಬ್ರವರಿ 14, ಮಂಗಳವಾರದಂದು ‘ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚ್ಯಾನೆಲ್’ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಹಾಗೂ ಎಲ್ಲ ಮ್ಯೂಸಿಕ್ ಫ್ಲಾಟ್ಫಾರ್ಮ್ ಗಳಲ್ಲಿ ಫೆಬ್ರವರಿ 14ರ ನಂತರ ಕೇಳುಗರಿಗೆ ಲಭ್ಯವಿರುತ್ತದೆ.