ಸೆಪ್ಟೆಂಬರ್ 21′ ಚಿತ್ರದ ಟೀಸರ್ ಬಿಡುಗಡೆ; ನಿರ್ದೇಶಕಿ ಅಪೂರ್ವ ಪ್ರಯತ್ನ
ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಬಹುನಿರೀಕ್ಷಿತ `ಸೆಪ್ಟೆಂಬರ್ 21′ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ. 22 ವರ್ಷದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ À ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವಈ ಸಿನಿಮಾ ಮರೆಗುಳಿತನ ಎಂಬ ಗಂಭೀರ ವಿಷಯವನ್ನು ಅತ್ಯಂತ ಮೃದುವಾಗಿ ಮತ್ತು ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆ.
ಸಾಮಾನ್ಯವಾಗಿ ಮರೆಗುಳಿತನದ ಬಗ್ಗೆ ಸಮಾಜದಲ್ಲಿ ಚರ್ಚೆಗಳಾಗುತ್ತವೆ, ಆದರೆ ಕಾಯಿಲೆಗೆ ತುತ್ತಾದವರ ಮತ್ತು ಅವರನ್ನು ಹಗಲಿರುಳು ಆರೈಕೆ ಮಾಡುವವರ ಒಳಗಿನ ತಳಮಳವನ್ನು ಚಿತ್ರದಲ್ಲಿ ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆ. ಈ ಟೀಸರ್ ಪ್ರೇಕ್ಷಕರಿಗೆ ಕೇವಲ ದೃಶ್ಯ ತೋರಿಸುವುದಲ್ಲದೆ, ಕಳೆದುಹೋಗುತ್ತಿರುವ ನೆನಪುಗಳ ನೋವನ್ನು ಮೌನವಾಗಿ ಅನುಭವಿಸುವಂತೆ ಮಾಡುತ್ತದೆ. ಕೇವಲ ಸಿನಿಮಾವಲ್ಲ, ಒಂದು ಭಾವನಾತ್ಮಕ ಪಯಣ ಎಂಬ ಭರವಸೆ ನೀಡುತ್ತದೆ.
ಚಿತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯಾ ಮರೆಗುಳಿತನದಿಂದ ತನ್ನ ಅಸ್ತಿತ್ವವನ್ನೇ ಮರೆಯುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಅವರಿಗೆ ಆಸರೆಯಾಗಿ ನಿಲ್ಲುವ ಪಾಲಕಿಯಾಗಿ ಪ್ರಿಯಾಂಕಾ ಉಪೇಂದ್ರ ಅದ್ಭುತವಾಗಿ ಅಭಿನಯಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ವೃತ್ತಿಜೀವನದಲ್ಲೇ ಅತ್ಯಂತ ಸಂಯಮದ ಮತ್ತು ಮಾಗಿದ ಅಭಿನಯ ಎನ್ನಲಾಗುತ್ತಿದೆ. ಯಾವುದೇ ಹೆಚ್ಚಿನ ನಾಟಕೀಯತೆ ಇಲ್ಲದೆ ಅತ್ಯಂತ ನೈಜವಾಗಿ ಈಪಾತ್ರಗಳು ಮೂಡಿಬಂದಿವೆ.
ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಮೇಕಿಂಗ್ ಶೈಲಿ ವಿಭಿನ್ನವಾಗಿದ್ದು, ಅನಗತ್ಯ ಅಬ್ಬರಕ್ಕೆ ಮೊರೆಹೋಗದೆ ಕಥೆಯ ಭಾವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. “ನನ್ನ ಸಿನಿಮಾ ನೋಡುವಾಗ ಪ್ರೇಕ್ಷಕರು ಅಲ್ಝೈಮರ್ಸ್ ರೋಗಿಗಳ ಕುಟುಂಬ ಅನುಭವಿಸುವ ಆ ಮೌನ ಮತ್ತು ಭಾವನಾತ್ಮಕ ತೂಕವನ್ನು ನೇರವಾಗಿ ಅನುಭವಿಸಬೇಕು ಎಂಬುದು ನನ್ನ ಹಂಬಲವಾಗಿತ್ತು” ಎಂದು ಕರೆನ್ ಅವರು ಚಿತ್ರದ ಉದ್ದೇಶವನ್ನು ಹಂಚಿಕೊಂಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಪ್ರವೀಣ್ ಸಿಂಗ್ ಸಿಸೋಡಿಯಾ ಮಾತ್ರವಲ್ಲದೆ, ಹಿರಿಯ ನಟಿ ಜರೀನಾ ವಹಾಬ್, ಅಮಿತ್ ಬೆಹ್ಲ್, ಅಜಿತ್ ಶಿಧಾಯೆ, ಸಚಿನ್ ಪಟೇಕರ್ ಮತ್ತು ರಿಕಿ ರುದ್ರ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ. ಈ ಎಲ್ಲಾ ನಟರ ಉಪಸ್ಥಿತಿಯು ಚಿತ್ರಕ್ಕೆ ಹೆಚ್ಚಿನ ಗಾಂಭೀರ್ಯ ಮತ್ತು ಮೆರುಗನ್ನು ತಂದುಕೊಟ್ಟಿದೆ. ಪ್ರತಿಯೊಂದು ಪಾತ್ರವೂ ಕಥೆಯ ಓಘಕ್ಕೆ ಪೂರಕವಾಗಿದ್ದು ಮೇ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ

