ಶಿವಣ್ಣ- ಪವನ್ ಒಡೆಯರ್ ಕಾಂಬಿನೇಷನ್‍ನ `ಬೇಲ್’ ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆ
ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನ ಬಹುನಿರೀಕ್ಷಿತ ಸಿನಿಮಾ `ಬೇಲ್’ ಚಿತ್ರದ ಹೊಸ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕ ಪ್ರಕಟವಾಗಿದೆ.

ಈ ಹೊಸ ಪೋಸ್ಟರ್ ನಲ್ಲಿ ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಈ ಆಕ್ಷನ್ ಸಿನಿಮಾ ಮುಂಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಜಗತ್ತಿನಾದ್ಯಂತ ತೆರೆಕಾಣಲಿದೆ.
ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಸಾಯಿ ಕುಮಾರ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
`666 ಆಪರೇಷನ್ ಡ್ರೀಮ್ ಥಿಯೇಟರ್’ ಮೇಕಿಂಗ್ ವಿಡಿಯೋ ಬಿಡುಗಡೆ
ನಿರ್ದೇಶಕ ಹೇಮಂತ್ ಎಂ. ರಾವ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪಿರಿಯಡ್ ಆಕ್ಷನ್-ಸ್ಪೈ ಥ್ರಿಲ್ಲರ್ ಸಿನಿಮಾ `666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಿಂದ ಶಿವಣ್ಣನಿಗೆ ವಿಶಿಷ್ಟವಾಗಿ ಶುಭಾಶಯ ಕೋರಲಾಗಿದೆ.

ಚಿತ್ರದಲ್ಲಿ ಶಿವಣ್ಣ ಡಿಫರೆಂಟ್ ಗೆಟಪ್ ಹೊಂದಿರುವ ರೋಮಾಂಚಕ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವಣ್ಣ – ಡಾಲಿ ಧನಂಜಯ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಕುತೂಹಲ ಮೂಡಿಸಿದೆ.
`ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ
ಶಿವರಾಜ್‍ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ ಅನಾರೋಗ್ಯದ ಕಠಿಣ ಹೋರಾಟದ ಕಥೆಯನ್ನು ಒಳಗೊಂಡಿರುವ `ಸರ್ವೈವರ್’ ಸಾಕ್ಷ್ಯಚಿತ್ರದ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.
ಗೀತಾ ಶಿವರಾಜ್‍ಕುಮಾರ್ ಒಡೆತನದ `ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಸಾಕ್ಷ್ಯಚಿತ್ರ ನಿರ್ಮಾಣವಾಗಿದ್ದು, ಶಿವಣ್ಣ ಚಿಕಿತ್ಸೆ ಪಡೆಯುವಾಗಿನ ಆಸ್ಪತ್ರೆಯೊಳಗಿನ ನೈಜ ದೃಶ್ಯಗಳನ್ನು ಇದು ಒಳಗೊಂಡಿದೆ. ಈ ಟೀಸರ್ ನಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರಾದ ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್, ಸಾಯಿ ಕುಮಾರ್, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಶಿವಣ್ಣನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.

