ಸಾಲ ಮಾಡಲು ಅಲ್ಲ, ಸಾಲ ತೀರಿಸಲು ತಾಕತ್ತು ಬೇಕು: ವಿ. ರವಿಚಂದ್ರನ್
“ನಟ ಅಜೇಯ್ ರಾವ್ ಅವರ ಒಂದಿಷ್ಟು ಸಂದರ್ಶನ ನೋಡಿಕೊಂಡು ಬಂದೆ. ಕೆಲವು ಸಂದರ್ಶನಗಳಲ್ಲಿ ಸಾಲ ಮಾಡಿದ್ದೇನೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಅದನ್ನು ಕೇಳಿ ನನಗೆ ನನ್ನ ಸಾಲದ ನೆನಪಾಯಿತು. ಇಲ್ಲಿ ಸಾಲ ತೀರಿಸುವ ತಾಕತ್ತು ಬೇಕು..”

ಹೀಗಂತ ಹೇಳಿದರು ಕನ್ನಡ ಚಿತ್ರರಂಗದ ಕನಸುಗಾರ ವಿ.ರವಿಚಂದ್ರನ್. ನಟ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ “ಯುದ್ಧಕಾಂಡ” ಚಿತ್ರದ ಟ್ರೇಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ರವಿಚಂದ್ರನ್ ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ. ಈಗಲೂ ಗೊತ್ತಿಲ್ಲ. ನನಗೆ 100 ಡ್ಯಾನ್ಸರ್ಸ್ ಬೇಕು, 100 ಫೈಟರ್ಸ್ ಬೇಕು ಎಂದು ಹೇಳಿಬಿಡುತ್ತಿದೆ. ಅಪ್ಪ ಎಲ್ಲಿಂದ ಹಣ ತರುತ್ತಿದ್ದರು ಅಂತ ನನಗೆ ಗೊತ್ತಿಲ್ಲ. ಒಂದು ದಿವಸ ಅವರು ಇಲ್ಲದಾಗ ಅದರ ಗೊತ್ತಾಯಿತು. ದುಡ್ಡಿಲ್ಲದಿದ್ದರೂ ಇಲ್ಲಿ ಕನಸು ಮುಖ್ಯ. ಎಷ್ಟು ದುಡ್ಡಿದೆಯೋ, ಅಷ್ಟರಲ್ಲಿ ಸಿನಿಮಾ ಮಾಡುವುದನ್ನು ಕಲಿಯಬೇಕು. ಇಲ್ಲಿ ಕಂಟೆಂಟ್ ಮುಖ್ಯ, ಏನು ಹೇಳುತ್ತಿದ್ದೀವಿ ಅನ್ನೋದು ಮುಖ್ಯ ಎಂದರು
ಯುದ್ದ ಕಾಂಡ ಚಿತ್ರತಂಡ ನೋಡಿದರೆ, ಶ್ರದ್ಧೆ ಕಾಣುತ್ತಿದೆ.ತಂಡದಲ್ಲಿ ಒಂದು ತೃಪ್ತಿ ಮತ್ತು ಆತ್ಮವಿಶ್ವಾಸವಿದೆ.ಇಷ್ಟೆಲ್ಲಾ ಮಾಡಿ ಸಿನಿಮಾ ಮಾಡಿದ್ದೀರಾ. ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಈಗಲೇ ಐದು ಗೋಲ್ಡ್ ಕ್ಲಾಸ್ ಟಿಕೆಟ್ ತೆಗೆದುಕೊಳ್ಳುತ್ತೇನೆ. ಸಿನಿಮಾ ನೋಡಿ ಫೋನ್ ಮಾಡುತ್ತೇನೆ ಎಂದು ಹೇಳಿದರು.

ನಿರ್ಮಾಪಕ ಮತ್ತು ನಾಯಕ ಅಜೇಯ್ ರಾವ್ ಮಾತನಾಡಿ ಹಿರಿಯ ನಟ ರವಿಚಂದ್ರನ್ ನಮ್ಮ ತಂದೆ, ಅಣ್ಣನ ಸ್ಥಾನದಲ್ಲಿದ್ದಾರೆ. `ಕೃಷ್ಣ ಲೀಲಾ’ ಚಿತ್ರ ಮಾಡಿದಾಗ, ಚಿತ್ರದ ಕಲೆಕ್ಷನ್ ಇಳಿಯುತ್ತಿತ್ತು. ರವಿಚಂದ್ರನ್ ಅವರು ತಾವಾಗಿ ಬಂದು ಸಿನಿಮಾ ನೋಡಿ, ನಮ್ಮನ್ನ ಮನೆಗೆ ಕರೆದು ಒಂದಿಷ್ಟು ವಿಚಾರಗಳನ್ನು ಹೇಳಿದರು. ಸಿನಿಮಾ ಬಗ್ಗೆ ನಮಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳನ್ನು ಹೇಳಿದರು. ಆ ನಂತರ ಕಲೆಕ್ಷನ್ ಕ್ರಮೇಣ ಹೆಚ್ಚಾಯಿತು ಎಂದರು
`ಯುದ್ಧಕಾಂಡ’ ಮಾಡುವಾಗ ಮೊದಲು ಹೋಗಿ ಅವರ ಬಳಿ ಶೀರ್ಷಿಕೆ ಕೇಳಿದೆ. ಆಶೀರ್ವಾದ ಮಾಡಿ ಕಳಿಸಿದರು. ಚಿತ್ರದ ಪ್ರತಿಯೊಂದು ದೃಶ್ಯ ಮಾಡುವಾಗಲೂ, ಸೋಲಬಾರದು ಅಂತ ಹೆದರಿಕೊಂಡು ಸಿನಿಮಾ ಮಾಡಿದ್ದೇನೆ.ಜೀವನಪೂರ್ತಿ ಅವರ ತರಹ ಕನಸುಗಾರನಾಗಿ, ಹಠವಾದಿಯಾಗಿ ಅವರನ್ನು ಕಾಪಿ ಮಾಡಿಕೊಂಡಿರಲು ಇಷ್ಟಪಡುತ್ತೇನೆ. ರವಿಚಂದ್ರನ್ ಅವರು ಚಿತ್ರದ ಮೊದಲ ಐದು ಟಿಕೆಟ್ಗಳನ್ನು ಖರೀದಿಸಿದ್ದಾರೆ. ಈ ಚಿತ್ರ ನಿಜಕ್ಕೂ ದಾಖಲೆ ಮಾಡುತ್ತದೆ ಎಂಬ ನಂಬಿಕ ಇದೆ. ಈ ಚಿತ್ರದ ನಂತರ ಇನ್ನಷ್ಟು ಚಿತ್ರಗಳನ್ನು ಮಾಡುತ್ತೇನೆ ಮತ್ತು ಕನ್ನಡ ಚಿತ್ರಗಳನ್ನೇ ಮಾಡುತ್ತೇನೆ. ಆದರೆ ಸಾಲ ಮಾಡಲ್ಲ ಎಂದು ತಿಳಿಸಿದರು.
ನಿರ್ದೇಶಕ ಪವನ್ ಭಟ್ ಮಾತನಾಡಿ “ಯುದ್ಧ ಕಾಂಡ” ಚಿತ್ರದಲ್ಲಿ ಕಥೆಯಲ್ಲಿ ಎಲ್ಲಾ ಪಾತ್ರಗಳು ಪ್ರಮುಖ ಪಾತ್ರಗಳೆ. ನಾಯಕ ಪ್ರಧಾನ ಚಿತ್ರವಲ್ಲ. ಹಾಗೆ ಹೇಳಬೇಕಾದರೆ, ಚಿತ್ರದ ಶೇಕಡಾ ಶೇಕಡಾ 35 ರಷ್ಟು ಅಜೇಯ್ ರಾವ್ ಅವರು ಈ ಚಿತ್ರದಲ್ಲಿ ಇರುವುದಿಲ್ಲ. ಆದರೂ ಅವರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು .

ನಾಯಕಿ ಅರ್ಚನಾ ಜೋಯಿಸ್ ಮಾತನಾಡಿ, ಈ ಚಿತ್ರದಲ್ಲಿ ನನ್ನದು ನೊಂದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುವ ಪಾತ್ರ ಎಂದರು.
ನ್ಯಾಯಾಧೀಶರ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ ನಟ ಟಿ.ಎಸ್.ನಾಗಾಭರಣ, ಚಿತ್ರತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು.

