“ಸೂತ್ರದಾರಿ” ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ: ಕುತೂಹಲ ಹೆಚ್ಚಳ
ನಟ,ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣದ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ಗಾಯನದ ಮೂಲಕ ಜನಮನ ಗೆದ್ದಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಚಿತ್ರ ಮೇ ತಿಂಗಳ 9 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ, ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ,ನಿರ್ಮಾಪಕರಾದ ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್ ಹಾಗೂ ಗಜೇಂದ್ರ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ನವರಸನ್ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಿಜಯ್ ಈಶ್ವರ್ ಬರೆದಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೆ ಹಾಡಿದ್ದಾರೆ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ. ಅರ್ಥಗರ್ಭಿತ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಿರ್ಮಾಪಕ ನವರಸನ್ ಮಾತನಾಡಿ, “ಸೂತ್ರಧಾರಿ” ಸಿನಿಮಾ ಆರಂಭವಾದಗಿನಿಂದಲೂ ತಾವೆಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇನ್ನೂ ಸದಾ ನನ್ನ ಎಲ್ಲಾ ಕೆಲಸಗಳಿಗೂ ಜೊತೆಗಿದ್ದು, ಪ್ರೋತ್ಸಾಹ ನೀಡುವ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ, ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್, ಗಜೇಂದ್ರ ಮುಂತಾದವರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ವಿಜಯ್ ಈಶ್ವರ್ ಅವರು ಬರೆದಿರುವ ಈ ಚಿತ್ರದ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದರು

ನಾಯಕ ಚಂದನ್ ಶೆಟ್ಟಿ ಮಾತನಾಡಿ ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಇದೇ ಮೇ 9 ನೇ ತಾರೀಖು ಅವರ ಆಸೆ ಈಡೇರುತ್ತಿದೆ.ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅಂದು ಬಿಡುಗಡೆಯಾಗುತ್ತಿದೆ. ಗಾಯಕನಾಗಿ ನನ್ನನ್ನು ಎಲ್ಲರೂ ಮೆಚ್ಚಿಕೊಂಡು ಆಶೀರ್ವದಿಸಿದ್ದೀರಿ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತೀರಾ ಎಂಬ ಭರವಸೆ ಇದೆ. ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದರು.
ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜನಾ ಆನಂದ್, ತಬಲ ನಾಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಜಯ್ ಈಶ್ವರ್ ಅವರು ಬರೆದು ನಾನೇ ಹಾಡಿ ಸಂಗೀತವನ್ನೂ ನೀಡಿರುವ ಚಿತ್ರದ ಶೀರ್ಷಿಕೆ ಗೀತೆ ಇಂದು ಬಿಡುಗಡೆಯಾಗಿದೆ. “ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಈ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. ಈ ಚಿತ್ರದಲ್ಲಿ ನಾನು ನಾಯಕನಾಗಿ ನಟಿಸಲು ನವರಸನ್ ಅವರೆ ಮುಖ್ಯ ಕಾರಣ ಅವರಿಗೆ ವಿಶೇಷ ಧನ್ಯವಾದ ಎಂದು ಹೇಳಿದರು
ಚಿತ್ರದ ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮುಂತಾದವರು “ಸೂತ್ರಧಾರಿ” ಕುರಿತು ಮಾತನಾಡಿದರು.

