ಪಾರಂಪರಿಕ ಸ್ಥಳಗಳ ಮಹತ್ವ ಸಾರುವ “ಸ್ವಪ್ನ ಮಂಟಪ” ಚಿತ್ರ ಜುಲೈ 25ಕ್ಕೆ ರಾಜ್ಯಾದ್ಯಂತ ತೆರೆಗೆ
ಹಿರಿಯ ಸಾಹಿತಿ ಹಾಗು ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಸ್ವಪ್ನ ಮಂಟಪ’ ಚಿತ್ರ ಜುಲೈ 25ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಂಡಿರುವ ಚಿತ್ರಕ್ಕೆ ಡಾ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ಮೈಸೂರಿನ ಎ.ಎಂ.ಬಾಬು ನಿರ್ಮಾಣ ಮಾಡಿದ್ದಾರೆ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮಾತನಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ “ಸ್ವಪ್ನ ಮಂಟಪ” ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು “ಸ್ವಪ್ನ ಮಂಟಪ” ಎಂದು ಕರೆಯುತ್ತಿದ್ದರು. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ `ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವುದೆ ಚಿತ್ರದ ಪ್ರಮುಖ ಕಥಾಹಂದರ.
ಚಿತ್ರದಲ್ಲಿ ವಿಜಯ ರಾಘವೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿದೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನ ಹಾಗೂ ನಾಗರಾಜ್ ಆದವಾನಿ ಛಾಯಾಗ್ರಹಣವಿರುವ “ಸ್ವಪ್ನ ಮಂಟಪ” ಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು.
ಇನ್ನೂ ಇಂತಹ ಪ್ರಯೋಗಾತ್ಮಕ ಚಿತ್ರಗಳನ್ನು ಉತ್ತೇಜಿಸಲು ಸರ್ಕಾರ ಪ್ರತಿ ಜಿಲ್ಲೆಯಲ್ಲೂ 150 ಆಸನಗಳ ಚಿತ್ರಮಂದಿರಗಳನ್ನು ತೆರೆಯಬೇಕು. ಹಾಗೂ ಟಿಕೆಟ್ ದರ 100 ರೂಪಾಯಿಗಳನ್ನು ಮೀರಬಾರದು. ಆಗ ಹೆಚ್ಚಿನ ಜನರು ಸಿನಿಮಾ ನೋಡಲು ಬರಿತ್ತಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.ಇದರಿಂದ ಚಿತ್ರರಂಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು

ನಾಯಕ ವಿಜಯ ರಾಘವೇಂದ್ರ ಮಾತನಾಡಿ ಪ್ರತಿಯೊಬ್ಬ ನಟನಿಗೂ ಇಂತಹ ಒಬ್ಬ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಇರುತ್ತದೆ. ನನಗೂ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. ಈ ಚಿತ್ರದಲ್ಲಿ ಒಂದು ಹಾಡು ಕೂಡ ಹಾಡಿದ್ದೇನೆ ಎಂದರು
ನಿರ್ಮಾಪಕ ಎ.ಎಂ.ಬಾಬು ಮಾತನಾಡಿ ಜುಲೈ 25 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಾಜಪ್ಪ ದಳವಾಯಿ, ಮೈಸೂರು ಮಂಜುಳ, ಶಿವಲಿಂಗ ಪ್ರಸಾದ್, ಛಾಯಾಗ್ರಾಹಕ ನಾಗರಾಜ ಆದವಾನಿ, ಸಹ ನಿರ್ದೇಶಕ ನಟರಾಜ್ ಶಿವು ಮುಂತಾದವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

