“ಟಗರು ಪಲ್ಯ” ನಿರ್ದೇಶಕ ಉಮೇಶ್ ಕೆ ಕೃಪ ನಿರ್ದೇಶನದ ಎರಡನೇ ಚಿತ್ರ ಆರಂಭ
ಎರಡು ವರ್ಷಗಳ ಹಿಂದೆ ತೆರೆಕಂಡ “ಟಗರು ಪಲ್ಯ” ನೋಡುಗರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಈಗ ನಾಗೇಶ್ ವಾಸ್ಟರ್ ನಿರ್ಮಾಣ ಮಾಡುತ್ತಿರುವ “ಪ್ರೊಡಕ್ಷನ್ ನಂ- 2” ನೂತನ ಚಿತ್ರದ ಮುಹೂರ್ತ ಸಮಾರಂಭ ಶುಕ್ರವಾರ ಬೆಳಗ್ಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು.

ಉಮೇಶ್ ಕೃಪ ಮಾತನಾಡಿ “ಟಗರು ಪಲ್ಯ” ಚಿತ್ರಕ್ಕೆ ಎಲ್ಲರೂ ತೋರಿದ ಪ್ರೋತ್ಸಾಹ ಹಾಗೂ ಮೆಚ್ಚುಗೆಗೆ ಧನ್ಯವಾದ. ನನ್ನ ಎರಡನೇ ನಿರ್ದೇಶನದ ಚಿತ್ರಕ್ಕೆ ಚಾಲನೆ ದೊರಕಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಇನ್ನೂ ಹೆಸರಿಡದ ಈ ಹೊಸ ಚಿತ್ರಕ್ಕೆ ನಾಗೇಶ್ ವಾಸ್ಟರ್ ಬಂಡವಾಳ ಹೂಡುತ್ತಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ, ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ, ಮಧು ತುಂಬಕೆರೆ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ಎ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ನೂತನ ಚಿತ್ರಕ್ಕೆ ಎಚ್ ಜಗದೀಶ್ ರಾವ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು
ಈ ಚಿತ್ರಕ್ಕೆ ಕಥೆಯೇ ನಾಯಕ. ನನ್ನ ಹಿಂದಿನ ಚಿತ್ರದಂತೆ ಈ ಚಿತ್ರದಲ್ಲೂ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುತ್ತದೆ. “ಪುಟ್ಟಕ್ಕನ ಮಕ್ಕಳು” ಧಾರಾವಾಹಿಯಲ್ಲಿ “ಕಂಠಿ” ಪಾತ್ರದ ಮೂಲಕ ಚಿರಪರಿಚಿತರಾಗಿರುವ ಧನುಷ್ ಹಾಗೂ ಕೆಲವು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿಸಿರುವ ಮನಸ್ವಿ ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ. ಇದೊಂದು ನಾಡಿನ ಕಥೆ. ಪ್ರೀತಿ, ಕಾಮಿಡಿ, ಸೆಂಟಿಮೆಂಟ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಮನೋರಂಜನೇಯೇ ಪ್ರಧಾನವಾದ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದೆ ಎಂದು ಹೇಳಿದರು

ಚಿತ್ರದಲ್ಲಿ ಮಳೆಯದು ಮುಖ್ಯ ಪಾತ್ರ. ಹಾಗಾಗಿ ಚಿತ್ರೀಕರಣಕ್ಕೆ ಮಳೆಗಾಲಕ್ಕಾಗಿ ಕಾಯುತ್ತಿದ್ದೆವು. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ತೀರ್ಥಹಳ್ಳಿ, ಆಗುಂಬೆ, ಕಾರ್ಕಳ, ಚಿಕ್ಕಮಗಳೂರು ಮುಂತಾದ ಕಡೆ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.


