ಟಗರು ಪಲ್ಯ ಚಿತ್ರದ ಎರಡನೇ ಹಾಡು ಬಿಡುಗಡೆ : ಸೂರ್ಯಕಾಂತಿ ಎಂದು ಕುಣಿದ ಅಮೃತಾ ಪ್ರೇಮ್
ನಟ ನೆನಪಿರಲಿ ಪ್ರೇಮ್ ಪುತ್ರಿ, ಅಮೃತಾ ಪ್ರೇಮ್ “ ಟಗರು ಪಲ್ಯ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾಗುತ್ತಿದ್ದು ಈ ಮೂಲಕ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ. ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದ್ದು “ಸೂರ್ಯಕಾಂತಿ ನಾನು “ ಎಂದು ಹಾಡಿ ಕುಣಿದಿದ್ದಾರೆ.
ನಟರಾಕ್ಷಸ ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಅವರು `ಡಾಲಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.
ಈ ಸಂಸ್ಥೆಯ ಮೂರನೇ ಪ್ರಯತ್ನವೇ `ಟಗರು ಪಲ್ಯ’. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಟಗರು ಪಲ್ಯ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.
ಈಗಾಗಲೇ ರಿಲೀಸ್ ಆಗಿರುವ ಟೈಟಲ್ ಟ್ರ್ಯಾಕ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಚಿತ್ರತಂಡ ಸೂರ್ಯಕಾಂತಿ ನಾನು ಎಂಬ ಮೆಲೋಡಿ ಹಾಡನ್ನು ಅನಾವರಣ ಮಾಡಿದೆ. ಸ್ವತಃ ಧನಂಜಯ್ ಅವರೇ ಕ್ಯಾಚಿ ಮ್ಯಾಚಿ ಪದಗಳನ್ನು ಪೆÇಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಕಂಠ ಕುಣಿಸಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ.
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ `ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಅನೇಕ ಹೊಸಬರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು, ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ನಾಗಭೂಷಣ್ ಟಗರು ಪಲ್ಯದ ನಾಯಕ.
‘ಟಗರು ಪಲ್ಯ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಕೂತೂಹಲ ದುಪ್ಪಟ್ಟಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಹಾಗೇ ವಾಸುಕಿ ವೈಭವ್ ಸಂಗೀತವಿದೆ ಇನ್ನು ಎಸ್.ಕೆ.ರಾವ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಪ್ರಚಾರ ಕಾರ್ಯ ಆರಂಭಿಸಿರುವ ಟಗರು ಪಲ್ಯ ತಂಡ ಇದೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡಲು ಸಕಲ ಸಿದ್ಧತೆ ನಡೆದಿದೆ.