‘ಫೆಬ್ರವರಿ 10ಕ್ಕೆ ‘ಹೊಂದಿಸಿ ಬರೆಯಿರಿ’ ಸಿನಿಮಾ ತೆರೆಗೆ
‘ಸೋಲ್ ಆಫ್ ಹೊಂದಿಸಿ ಬರೆಯಿರಿ’ ಸಾಂಗ್ ರಿಲೀಸ್ – ಫೆಬ್ರವರಿ 10ಕ್ಕೆ ‘ಹೊಂದಿಸಿ ಬರೆಯಿರಿ’ ಸಿನಿಮಾ ತೆರೆಗೆ
ಸ್ಯಾಂಡಲ್ ವುಡ್ ಸಿನಿರಸಿಕರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲೊಂದು ‘ಹೊಂದಿಸಿ ಬರೆಯಿರಿ’. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಮ್ಮ ಚೊಚ್ಚಲ ಚಿತ್ರದ ಮೂಲಕ ಪ್ರೇಕ್ಷಕ ಪ್ರಭುಗಳ ಮನ ಗೆಲ್ಲಲು ಕಾತುರರಾಗಿದ್ದಾರೆ. ಫೆಬ್ರವರಿ 10ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಹು ತಾರಾಗಣದ ಈ ಚಿತ್ರ ಕಲರ್ ಫುಲ್ ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಬಹು ನಿರೀಕ್ಷಿತ ಹಾಡು ‘ಸೋಲ್ ಆಫ್ ಹೊಂದಿಸಿ ಬರೆಯಿರಿ’ ಬಿಡುಗಡೆ ಮಾಡಿದೆ ಚಿತ್ರತಂಡ.
‘ಸೋಲ್ ಆಫ್ ಹೊಂದಿಸಿ ಬರೆಯಿರಿ’ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಐಶ್ವರ್ಯ ರಂಗರಾಜನ್ ಹಾಡಿಗೆ ದನಿಯಾಗಿದ್ದಾರೆ. ಇಡೀ ಸಿನಿಮಾದ ಆಶಯವನ್ನು ಕಟ್ಟಿಕೊಡುವ ಈ ಹಾಡು ಚಿತ್ರದಲ್ಲಿ ಬಹಳ ಮುಖ್ಯ ಪಾತ್ರವಹಿಸಲಿದ್ದು, ಜೋ ಕೋಸ್ಟ ಸಂಗೀತ ಸಂಯೋಜನೆ ಮನ ಮುಟ್ಟುತ್ತಿದೆ.ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎಂಬ ಎಳೆಯ ಸುತ್ತ ಹೆಣೆಯಲಾದ ಸುಂದರ ಕಥಾಹಂದರ ಈ ಚಿತ್ರ. ಐದು ಜನ ಸ್ನೇಹಿತರ ಬದುಕಿನ ಕಥೆ ಹಾಗೂ ಭಾವನಾತ್ಮಕ ಜರ್ನಿಯನ್ನು ಒಳಗೊಂಡ ಈ ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲರ್ ಫುಲ್ ಕಲಾವಿದರ ಮುಖ್ಯ ಭೂಮಿಕೆಯಿದೆ.
ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರದ ಸೂತ್ರಧಾರ. ನಿರ್ದೇಶನದ ಜೊತೆ ಸ್ನೇಹಿತರೊಡಗೂಡಿ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಎಂಟು ಹಾಡುಗಳಿದ್ದು ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಗೆದ್ದಿವೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ.
ಶಾಂತಿ ಸಾಗರ್ ಹೆಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.