ಕಾರ್ತಿಕ್ ಶರ್ಮಾ ನಿರ್ದೇಶನದ ಭಾವಾಂತರ’ ಚಿತ್ರದಮೊದಮೊದಲಿದು’ ಹಾಡು ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಈಗ
ಭಾವಾಂತರ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಸಿನಿಮಾದಮೊದಮೊದಲಿದು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಸ್ವತಃ ಕಾರ್ತಿಕ್ ಶರ್ಮಾ ಹೊತ್ತಿದ್ದಾರೆ. ಬಿಡುಗಡೆಯಾಗಿರುವ ‘ಮೊದಮೊದಲಿದು’ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದು, ಪ್ರಖ್ಯಾತ ಗಾಯಕರಾದ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.
ನೈಜ ಘಟನೆಗಳಿಂದ ಪ್ರೇರಿತವಾದ ಕಥಾಹಂದರಕ್ಕೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲೇ ರೀತಿಯ ವಿಶಿಷ್ಟವಾದ ಹಾಗೂ ಅಪರೂಪದ ಎಳೆ ಹೊಂದಿರುವ ಸಿನಿಮಾ ಬಂದಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ.
ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿರುವ `ಭಾವಾಂತರ’ ಶೀಘ್ರದಲ್ಲೇ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಕರಾವಳಿಯ ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನ ಸುಂದರ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಕಾರ್ತಿಕ್ ಶರ್ಮಾ ಅವರಿಗೆ ಜೋಡಿಯಾಗಿನಟಿ ತನ್ವಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಮತ್ತು ಭಾನು ಮುಂತಾದ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದು, ಸಾಗರ್ ಅತ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಸಂಕಲನ ಈ ಚಿತ್ರಕ್ಕಿದೆ.

ನಿರ್ದೇಶಕ ಕಾರ್ತಿಕ್ ಶರ್ಮಾ ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅಭಿನಯದ ವೀರ ಕನ್ನಡಿಗ' ಹಾಗೂ ನಟಿ ಖುಷ್ಬೂ ಅಭಿನಯದಮ್ಯಾಜಿಕ್ ಅಜ್ಜಿ’ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಮಿಂಚಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ನೂರಕ್ಕೂ ಹೆಚ್ಚು ಕಿರುತೆರೆ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಿಗೆ ಸಂಗೀತ ನೀಡುವ ಮೂಲಕ ಸಂಗೀತ ಲೋಕದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ನಿರ್ದೇಶಕರಾಗಿ `ಭಾವಾಂತರ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.

