ಕರಾವಳಿ ಭಾಗದ ಮತ್ತೊಂದು ನೆಲಮೂಲದ ಕಥೆ “ಗುಂಮ್ಟಿ” ಚಿತ್ರದ ಟ್ರೈಲರ್ ಬಿಡುಗಡೆ
‘ಕಾಂತಾರ’ ಚಿತ್ರದ ಸೂಪರ್ ಡೂಪರ್ ಯಶಸ್ಸಿನ ಬಳಿಕ ಕರಾವಳಿ ಭಾಗದ ನೆಲಮೂಲದ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಅದರ ಸಾಲಿಗೆ ಮತ್ತೊಂದು ಚಿತ್ರ “ ಗುಂಮ್ಟಿ” ಸೇರ್ಪಡೆಯಾಗಿದೆ. ಕುಡಬಿ ಜನಾಂಗದ ಕಥೆಯನ್ನು ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಕಮ್ ನಾಯಕ ಸಂದೇಶ್ ಶೆಟ್ಟಿ ಆಜ್ರಿ.
‘ಗುಂಮ್ಟಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಉಡುಪಿ ಜಿಲ್ಲೆಯ ಸುತ್ತಮುತ್ತ ಸುಮಾರು 24 ಕ್ಕೂ ಹೆಚ್ಚು ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್ ಆಗಿರುವುದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕತ್ತಲೆ ಕೋಣೆ’ ಮತ್ತುಇನಾಮ್ದಾರ್’ ಚಿತ್ರ ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, `ಗುಂಮ್ಟಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್‍ಕಟ್ ಹೇಳಿದ್ದು, ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಗಮನ ಸೆಳೆದಿರುವ ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.
ಈ ವೇಳೆ ಮಾತನಾಡಿದ ಸಂದೇಶ್ ಶೆಟ್ಟಿ ಆಜ್ರಿ ಗುಂಮ್ಟಿ’ ಕುಡುಬಿ ಸಮುದಾಯಕ ಕಲಾ ಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಟ್ಟುಕೊಳ್ಳಲಾಗಿದೆ. ಜೊತೆಗೆ ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂದು ಮಾಹಿತಿ ನೀಡಿದರು
`ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆ.ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು
ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ ಮಾತನಾಡಿ `ಬಾಲ್ಯದಿಂದಲೂ ಸುತ್ತಮುತ್ತ ಕಂಡ ಜಾನಪದ ಕಲೆಯನ್ನು ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ಎಲ್ಲರಿಗೂ ಸಿನೆಮಾದ ಕಥಾಹಂದರ ಇಷ್ಟವಾಗಲಿದೆ, ಮನಮುಟ್ಟುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾಯಕಿ ವೈಷ್ಣವಿ ನಾಡಿಗ್ ಮಾತನಾಡಿ ಚಿತ್ರದಲ್ಲಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಉತ್ತಮ ಪಾತ್ರ ಸಿಕ್ಕಿದೆ. ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು
ಚಿತ್ರದಲ್ಲಿ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ `ಗುಂಮ್ಟಿ’ ಚಿತ್ರಕ್ಕೆ ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನ,ಚಿತ್ರದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.
ಗುಂಮ್ಟಿ’ ಚಿತ್ರವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಗುಂಮ್ಟಿ’ ಸೆನ್ಸಾರ್ ಮುಂದಿದೆ. ಸದ್ಯದಲ್ಲಿಯೇ ತೆರೆಗೆ ಬರುವ ಉತ್ಸಾಹದಲ್ಲಿದೆ.