Trailer released of actress Ragini starrer "Shanu Bhogara Magalu"

ನಟಿ ರಾಗಿಣಿ ಅಭಿನಯದ “ಶಾನುಭೋಗರ ಮಗಳು” ಚಿತ್ರದ ಟ್ರೈಲರ್ ಬಿಡುಗಡೆ - CineNewsKannada.com

ನಟಿ ರಾಗಿಣಿ ಅಭಿನಯದ “ಶಾನುಭೋಗರ ಮಗಳು” ಚಿತ್ರದ ಟ್ರೈಲರ್ ಬಿಡುಗಡೆ

ರಾಗಿಣಿ ಪ್ರಜ್ವಲ್ ನಾಯಕಿಯಾಗಿ ನಟಿಸಿರುವ ‘ಶಾನುಭೋಗರ ಮಗಳು’ ಚಿತ್ರದ ಟ್ರೈಲರ್ ಹಾಗೂ ಟೈಟಲ್ ಸಾಂಗ್ ಬಿಡುಗಡೆಯಾಗಿದೆ.ಭಾಗ್ಯ ಕೃಷ್ಣಮೂರ್ತಿ ಬರೆದ ಇದೇ ಹೆಸರಿನ ಕಾದಂಬರಿ ಆಧರಿಸಿ ಕೂಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ,

ಚಿತ್ರರಂಗಕ್ಕೆ ವಿಭಿನ್ನ ಶೈಲಿಯ ಚಿತ್ರಗಳನ್ನು ನೀಡಿರುವ ಕೂಡ್ಲು ರಾಮಕೃಷ್ಣ ಚಿತ್ರಕ್ಕೆ ಚಿತ್ರಕಥೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ವಾಣಿಜ್ಯಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಹಿರಿಯನಟ ರಮೇಶ್ ಭಟ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಶಾನುಭೋಗರ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಚನ್ನಪಟ್ಟಣ, ಚಿಕ್ಕಬಳ್ಳಾಪುರದ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಟ್ರೈಲರ್ ಬಿಡುಗಡೆ ವೇಳೆ ಕಾದಂಬರಿಗಾರ್ತಿ ಭಾಗ್ಯ ಕೃಷ್ಣಮೂರ್ತಿ ಮಾತನಾಡಿ ನಾನೊಬ್ಬ ಪತ್ರಕರ್ತೆ. 32 ಕಾದಂಬರಿಗಳನ್ನು ಬರೆದಿದ್ದೇನೆ, ಅದರಲ್ಲಿ ಅಭಿನೇತ್ರಿ ಸಿನಿಮಾ ಆಗಿದೆ. 2004ರಲ್ಲಿ ಬರೆದಿದ್ದ ಈ ಕಾದಂಬರಿ ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು, ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕೆಲವು ಘಟನೆಗಳು ನೈಜವಾಗೇ ಇರುವಂತೆ ಕಂಡಿರುವುದು ಆಶ್ಚರ್ಯ ಮೂಡಿಸಿದೆ ಎಂದರು.

ಚಿತ್ರದ ಜವಾಬ್ದಾರಿ ಹೊತ್ತಿರುವ ಸ್ವಸ್ತಿಕ್ ಶಂಕರ್ ಮಾತನಾಡಿ ನಿರ್ಮಾಪಕ ಸಿ.ಎಂ. ನಾರಾಯಣ್ ನನ್ನ ಸ್ನೇಹಿತರು. ಇದೊಂದು ಮಹಿಳಾ ಪ್ರದಾನ ಕಥೆ. ಅನೇಕ ಅಡೆ ತಡೆಗಳನ್ನು ಎದುರಿಸಿ ಈ ಸಿನಿಮಾ ಆಗಿದೆ, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು,

ನಟಿ ರಾಗಿಣಿ ಪ್ರಜ್ವಲ್ ಮಾತನಾಡಿ ತುಂಬಾ ದಿನಗಳ ಗ್ಯಾಪ್ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮೂಲತಃ ಕ್ಲಾಸಿಕಲ್ ಡ್ಯಾನ್ಸರ್. ಈ ಚಿತ್ರದಲ್ಲಿ ಡಬ್ಬಿಂಗ್ ಕೂಡ ಮಾಡಿದ್ದೇನೆ. ದು:ಖದ ಸನ್ನಿವೇಶಗಳಲ್ಲಿ ಗ್ಲಿಸರಿನ್ ಉಪಯೋಗಿಸದೆ ಅಭಿನಯಿಸಿದ್ದೇನೆ, ಇಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.

ನಿರ್ದೇಶಕ ಕೂಡ್ಲು ರಾಮಕೃಷ್ಣ ಮಾತನಾಡಿ ಈ ಸಿನಿಮಾ ಪ್ರಾರಂಭವಾಗಿದ್ದೇ ಆಕಸ್ಮಿಕ. ಭಾಗ್ಯ ಅವರು ನನಗೆ 35 ವರ್ಷಗಳ ಸ್ನೇಹಿತೆ, ನನ್ನ 32 ಸಿನಿಮಾಗಳಲ್ಲಿ 14 ಕಾದಂಬರಿ ಆಧಾರಿತ ಚಿತ್ರಗಳೇ ಎನ್ನುವುದು ವಿಶೇಷ. 18ನೇ ಶತಮಾನದಲ್ಲಿ ನಡೆಯುವ ಕಥೆಯಿದು, ಮತ್ತೊಬ್ಬ ನಟಿ ರಿಶಿಕಾ ಸೆಕೆಂಡ್ ಲೀಡ್ ಮಾಡಿದ್ದಾರೆ ಎಂದರು,

ಸಿ.ಎಂ. ನಾರಾಯಣ್ ನಿರ್ಮಿಸಿರುವ ಚಿತ್ರಕ್ಕೆ ಜೈಆನಂದ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ವಸಂತ ಕುಲಕರ್ಣಿ ಕಲಾನಿರ್ದೇಶನ, ಕವಿರಾಜ್-ಅರಸು ಅಂತಾರೆ ಸಾಹಿತ್ಯವಿದೆ. ರಮೇಶ್ ಕೃಷ್ಣನ್ ಸಂಗೀತ ಸಂಯೋಜನೆ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್‍ರಾವ್, ರಘು ಕಲ್ಪತರು ಸಹ ನಿರ್ದೇಶನ ಇರುವ ಶಾನುಭೋಗರ ಮಗಳು ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆಗಳನ್ನು ಹೆಣೆದಿದ್ದಾರೆ.

ಶ್ಯಾನುಭೋಗರ ಮಗಳು ಚಿತ್ರದ ಉಳಿದ ಪಾತ್ರಗಳಲ್ಲಿ ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜಿತ್ ಕಾರ್ತಿಕ್, ಧರ್ಮ ನವೀನ್ ಮುಂತಾದವರು ನಟಿಸಿದ್ದಾರೆ. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin