Unveiling of 'Sanju' life in a foggy environment

“ಮಂಜು’ ಕವಿದ ವಾತಾವರಣದಲ್ಲಿ ‘ಸಂಜು’ ಬದುಕಿನ ಅನಾವರಣ - CineNewsKannada.com

“ಮಂಜು’ ಕವಿದ ವಾತಾವರಣದಲ್ಲಿ ‘ಸಂಜು’ ಬದುಕಿನ ಅನಾವರಣ

ಪ್ರೇಮ ಕಥೆಗಳಿಗೆ ಕೊನೆಯಿಲ್ಲ…ಭಾವನಾತ್ಮಕ ಸಂಬಂಧಗಳಿಗೆ ಸಾವಿಲ್ಲ ..ಪ್ರಕೃತಿಗೆ ಸೋಲದ ಮನಸ್ಸಿಲ್ಲ ಎಂಬುದನ್ನ ಚೆನ್ನಾಗಿ ಅರ್ಥೈಸಿಕೊಂಡಿರುವ ನಟ, ನಿರ್ದೇಶಕ ಯತಿರಾಜ್, ಮೇಲಿನ ಮೂರೂ ಅಂಶಗಳನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿದಿದ್ದಾರೆ. ಅವರ ನಿರ್ದೇಶನದ ‘ ಸಂಜು’ ಇದೇ 27 ರಂದು ತೆರೆಗೆ ಬರಲು ಸಜ್ಜಾಗಿದೆ.

ಪತ್ರಕರ್ತರೂ ಆಗಿರುವ ಯತಿರಾಜ್ ಅನುಭವವನ್ನು ಒಟ್ಟುಗೂಡಿಸಿ ಒಂದೊಳ್ಳೆ ಕಥೆ ಮಾಡಿ ಇದೀಗ ಸಿನಿಮಾ ರೂಪದಲ್ಲಿ ತಂದಿರುವಂತೆ ಕಾಣುತ್ತದೆ. ಮೈಸೂರಿನ ಸಂತೋಷ್ ಡಿ.ಎಂ ನಿರ್ಮಾಣದ ‘ಸಂಜು’ ಚಿತ್ರಕ್ಕಿದೆ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಯತಿರಾಜ್ ‘ವಿಶೇಷವಾಗಿ ಟೀನೇಜಿನಲ್ಲಿ ಬಹಳಷ್ಟು ಏರಿಳಿತಗಳು, ಸೋಲುಗಳು, ಹತಾಶೆಗಳು ಅವಮಾನಗಳು ಘಟಿಸುತ್ತವೆ. ಕೆಲವರು ಅದನ್ನು ಸುಲಭವಾಗಿ ಮೆಟ್ಟಿ ಮುಂದೆ ಸಾಗುತ್ತಾರೆ. ಇನ್ನೂ ಕೆಲವರು ತಮಗೆ ಎದುರಾಗುವ ಘಟನೆಗಳಿಗೆ ಅಂಜಿ ಎದೆಗುಂದುತ್ತಾರೆ. ಅಂತಹ ಎರಡು ಪ್ರಸಂಗವನ್ನು ಪ್ರೀತಿಯ ಚೌಕಟ್ಟಿನಲ್ಲಿ ಹೇಳಿದ್ದೇನೆ. ನನ್ನ ಚಿತ್ರವನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ನಾನು ಹೇಳಲಾರೆ. ಆದರೆ, ಬದುಕನ್ನು ಮತ್ತು ಸಂಬಂಧಗಳನ್ನು ಆಳದ ದೃಷ್ಟಿಯಿಂದ ನೋಡುವ ಮಂದಿ ಅಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ‘ಎಂದಿದ್ದಾರೆ.

ಚಿತ್ರದ ಹೈಲೈಟ್ ಬಗ್ಗೆ ಮಾತನಾಡುವಾಗ ಮೊದಲು ನಿರ್ಮಾಪಕರಾದ ಸಂತೋಷ್ ಅವರನ್ನು ನೆನೆಯುವುದು ಕರ್ತವ್ಯ. ಅವರಿಗಿದು ಮೊದಲ ಚಿತ್ರವಾದರೂ ಯಾವುದಕ್ಕೂ ಕೊರತೆ ಮಾಡಿಲ್ಲ. ಎಲ್ಲರನ್ನೂ ಇಂದಿಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಕೃತಜ್ಞತೆ ಸಲ್ಲಿಸಿದರು

ಚಿತ್ರದ ಎರಡನೇ ಹೈಲೈಟ್ ಲೊಕೇಷನ್. ಮಡಿಕೇರಿಯ ಮೂರ್ನಾಡುವಿನಲ್ಲಿ ಹಾಕಲಾಗಿದ್ದ ಬಸ್ ಸ್ಟಾಪ್ ಸೆಟ್, ನಾಯಕಿಯ ಮನೆ, ನಾಯಕನ ಮನೆ ಮತ್ತು ಅಲ್ಲಿನ ಪರಿಸರ ಚಿತ್ರಕ್ಕೆ ಮೆರುಗು ತಂದುಕೊಟ್ಟಿದೆ. ಅದರ ತೂಕ ಹೆಚ್ಚುವಂತೆ ಮಾಡಿದ್ದು ಚಿತ್ರದಲ್ಲಿ ನಟಿಸಿದ ಕಲಾವಿದರು. ಸುಂದರಶ್ರೀ, ಸಂಗೀತ, ಬಲರಾಜುವಾಡಿ, ಅಪೂರ್ವ, ಬೌ ಬೌ ಜಯರಾಮ್, ಮಹಂತೇಶ್, ಪ್ರಕಾಶ್ ಶೆಣೈ ಮತ್ತು ಕಾತ್ಯಾಯಿನಿ ಅವರುಗಳ ಅಭಿನಯವಂತೂ ತೆರೆಯ ಮೇಲೇ ಸವಿಯಬೇಕು ಅನ್ನೋದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ

ಮೂರನೇ ಮುಖ್ಯ ಅಂಶವೆಂದರೆ ನಾಯಕಿ ಸಾತ್ವಿಕ ಅವರ ಅಭಿನಯ. ರಾಜ್ಯ ಪ್ರಶಸ್ತಿ ಪಡೆಯಬಲ್ಲ ಸೂಕ್ಷ್ಮ ಅಭಿನಯವನ್ನು ಜನ ಖಂಡಿತ ಮೆಚ್ಚಿಕೊಳ್ಳುತ್ತಾರೆ ಎಂದು ಬಣ್ಣಿಸುವ ಯತಿರಾಜ್ ನಾಯಕ ಮನ್ವಿತ್ ಅವರನ್ನೂ ಬಿಟ್ಟು ಕೊಡುವುದಿಲ್ಲ.

ಛಾಯಾಗ್ರಾಹಕ ವಿದ್ಯಾ ನಾಗೇಶ್ ಸೆರೆ ಹಿಡಿದಿರುವ ಸುಂದರ ದೃಶ್ಯಗಳಿಗೆ, ಚಿತ್ರದ ಹಿನ್ನಲೆ ಸಂಗೀತ ಸಾಕಷ್ಟು ಪುಷ್ಠಿ ನೀಡಿದೆ. ವಿಜಯ್ ಹರಿತ್ಸ ನನ್ನೆಲ್ಲಾ ಟಾರ್ಚರಗಳನ್ನು ಸಹಿಸಿ ಸಹಕರಿಸಿ ಚಿತ್ರಕ್ಕೆ ಬೇರೆಯದೇ ಆಯಾಮ ತಂದುಕೊಟ್ಟಿರುವುದಾಗಿ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಥ್ರಿಲ್ಲರ್ ಮಂಜು ಅವರು ಎರಡು ಸಾಹಸ ದೃಶ್ಯಗಳು, ಮದನ್- ಹರಿಣಿ ನೃತ್ಯ ಸಂಯೋಜನೆಯ ಎರಡು ಹಾಡುಗಳು ಚಿತ್ರಕ್ಕೆ ಕಮರ್ಷಿಯಲ್ ಅಂಶ ತಂದು ಕೊಟ್ಟಿದೆ. ಸಂಜೀವ ರೆಡ್ಡಿ ಅವರ ಸಂಕಲನ ಮತ್ತು ಸೋನುಸಾಗರ ಹಾಗೂ ಅರುಣ್ ಕುಮಾರ್ ಅವರ ಸಹ ನಿರ್ದೇಶನ ಚಿತ್ರಕ್ಕಿದೆ.

ಮಸಾಲ ಸಿನಿಮಾಗಳ ನಡುವೆ ಮನಸೂರೆಗೊಳ್ಳಬಲ್ಲ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕು ಎನ್ನುವ ವಾತಾವರಣ ಸಂಜು ಮೂಲಕ ಸೃಷ್ಠಿಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin