"Veera Kambala" movie set for release: Likely to hit screens in February

“ವೀರ ಕಂಬಳ” ಚಿತ್ರ ಬಿಡುಗಡೆಗೆ ಸಜ್ಜು: ಫೆಬ್ರವರಿಯಲ್ಲಿ ತೆರೆಗೆ ಸಾಧ್ಯತೆ - CineNewsKannada.com

“ವೀರ ಕಂಬಳ” ಚಿತ್ರ ಬಿಡುಗಡೆಗೆ ಸಜ್ಜು: ಫೆಬ್ರವರಿಯಲ್ಲಿ ತೆರೆಗೆ ಸಾಧ್ಯತೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ಚಿತ್ರ `ವೀರ ಕಂಬಳ’. ಬಿಡುಗಡೆಗೆ ಸಜ್ಜಾಗಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಕಂಬಳ ತುಳುನಾಡಿನ ನೆಲಮೂಲದ ಸಂಸ್ಕೃತಿಯ ಸೆಲೆಯ ಕ್ರೀಡೆ. ಎಂಟುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಾಲ ಕಳೆದಂತೆ ಒಂದಷ್ಟು ಕಾನೂನು ತೊಡಕುಗಳೆದುರಾಗುವ ಮೂಲಕ ಕಂಬಳ ಒಂದಷ್ಟು ರೂಪಾಂತರ ಹೊಂದಿದೆ. ಇತಿಹಾಸದ ಜಾಡಿನಲ್ಲಿ ಹೆಜ್ಜೆಯಿಡುವ ಮೂಲಕ ರಾಜೇಂದ್ರ ಸಿಂಗ್ ಬಾಬು, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಚಿತ್ರ ರೂಪಿಸಿದ್ದಾರೆ.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿ, ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಕಥೆ, ಚಿತ್ರಕಥೆ ಸಿದ್ಧಪಡಿಸಲು ನಿರ್ದೇಶಕರು ಎರಡು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಚಿತ್ರಕಥೆ ಮತ್ತು ಸಂಭಾಷಣೆಯ ಮೂಲಕ ಚಿತ್ರಕ್ಕೆ ಜೊತೆಯಾಗಿದ್ದಾರೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ನಾಯಕನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರತಿಯೊಂದು ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನದಲ್ಲಿ ಯಾವುದೇ ತೊಡಕಿಲ್ಲದಂತೆ ವೀರ ಕಂಬಳವನ್ನು ಅಣಿಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ದಕ್ಷಿಣ ಕನ್ನಡದ ಮೂಡುಬಿದರೆಯ ಬಳಿಯಲ್ಲಿ ವಿಶಾಲವಾದ ಕಂಬಳದ ಗದ್ದೆ ಸಿದ್ಧಪಡಿಸಿ,ಪ್ರಧಾನ ದೃಷ್ಯಗಳನ್ನು ಸೆರೆಹಿಡಿಯಲಾಗಿದೆ. ಪ್ರತಿ ದಿನವೂ ಇಪ್ಪತ್ತು ಜೊತೆ ಕೋಣಗಳು ಹಾಗೂ ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಂಬಳದಲ್ಲಿ ಕೋಣಗಳನ್ನು ಓಡಿಸೋದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ. ಸ್ವರಾಜ್ ಶೆಟ್ಟಿ ಅವರಿಗೆ ಜೊತೆಯಾಗಿದ್ದಾರೆ. ದುಬೈನಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ ಸದ್ಯದಲ್ಲಿ ದಿನಾಂಕ ಘೋಷಿಸಲಾಗುವುದು ಎಂದಿದ್ಧಾರೆ.

ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ.

ವಿಜಯ್ ಕೊಡಿಯಾಲ್‍ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ವಸ್ತ್ರವಿನ್ಯಾಸದೊಂದಿಗೆ ವೀರ ಕಂಬಳ ಕಳೆಗಟ್ಟಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin