“ಖಾಲಿ ಡಬ್ಬ” ನಿರ್ದೇಶಕನ ಹೊಸ ಚಿತ್ರ “ಕಾಲಘಟ್ಟ: ಜೂನ್ 19 ರಂದು ತೆರೆಗೆ
ಖಾಲಿ ಡಬ್ಬ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಕೆ ಪ್ರಕಾಶ್ ಅಂಬಳೆ ಈಗ ಕಾಲಘಟ್ಟ ಎಂಬ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೇ ತಿಂಗಳ 19ರಂದು ಚಿತ್ರ ತೆರೆಗೆ ಬರುತ್ತಿದೆ, ಕಿರುತೆರೆಯ ನಟ ಅಭಿದಾಸ್ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ ಇದು,

ನಾಯಕ ಅಭಿದಾಸ್ ಮಾತನಾಡಿ, ಕಾಲಘಟ್ಟ ಸಿನಿಮಾದಲ್ಲಿ ಹೀರೋ ಆಗಿ ನಟನೆ ಮಾಡಿದ್ದೇನೆ. ಪಾತ್ರ ತುಂಬಾ ವಿಭಿನ್ನವಾಗಿದೆ. 1995 ಹಾಗೂ 2025ರಲ್ಲಿ ಎರಡು ಟೈಮ್ ನಲ್ಲಿ ನಡೆಯುವ ಕಥೆ. ನನ್ನದು 1990ರಲ್ಲಿ ಬರುವ ಪಾತ್ರ. ಮೊದಲ ಬಾರಿಗೆ ಹಳ್ಳಿ ಹುಡುಗನ ಪಾತ್ರ ಮಾಡಿದ್ದೇನೆ. ಕಿರಾತಕ ಸಿನಿಮಾದಲ್ಲಿ ಯಶ್ ಸರ್ ಮಾಡಿರುವ ಪಾತ್ರದ ರೆಫರೆನ್ಸ್ ತರ ಇದೆ. ನನ್ನ ಪಾತ್ರ ಚೆನ್ನಾಗಿ ಬಂದಿದೆ ಎಂದುಕೊಳ್ಳುತ್ತೇನೆ. ನಿರ್ಮಾಪಕರು ಕೃಷಿಕರು. ಅವರಿಗೆ ಸಿನಿಮಾ ಮೇಲೆ ಆಸಕ್ತಿ ಬಂದಿರುವುದು ಖುಷಿ ವಿಚಾರ ಎಂದರು.
ನಿರ್ದೇಶಕ ಕೆ ಪ್ರಕಾಶ್ ಅಂಬಳೆ ಮಾತನಾಡಿ, ಕಮರ್ಷಿಯಲ್ ಚಿತ್ರಗಳ ನಡುವೆ ಜಾನಪದ ಹಾಗೂ ಗೊರವನ ಸಂಸ್ಕೃತಿ ಇಟ್ಕೊಂಡು ಕಮರ್ಷಿಯಲ್ ಟಚ್ ಕೊಟ್ಟು ಚಿತ್ರ ಮಾಡಿದರೆ ಯಾರು ಹಣ ಹಾಕ್ತಾರೆ ಎಂಬ ಯೋಚನೆಯಲ್ಲಿಯೇ ನಿರ್ಮಾಪಕರ ಬಳಿ ಹೋದೆ. ಅವರು ಕಥೆ ಕೇಳಿ ಇಷ್ಟಪಟ್ಟರು. ಕಥೆ ಚೆನ್ನಾಗಿದೆ ಚಿತ್ರ ಮಾಡೋಣ ಎಂದು ಧೈರ್ಯ ಕೊಟ್ಟರು. ಅವರ ಧೈರ್ಯದಿಂದ ಈ ಚಿತ್ರವಾಗಿದೆ. ಅಲ್ಲಿಂದ ಶುರುವಾದ ಜರ್ನಿ ಈಗ ಚಿತ್ರ ಬಿಡುಗಡೆಗೆ ಬಂದು ನಿಂತಿದೆ ನೋಡಿ ಹಾರೈಸಿ ಎಂದರು.
ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್ ಹಾಗೂ ನಿತಿನ್ ಕಾಲಘಟ್ಟ ದ ನಾಯಕರಾಗಿ ನಟಿಸಿದ್ದು, ಮೇಘ ಮತ್ತು ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಶೋಭ್ ರಾಜ್, ಭವ್ಯ, ಪ್ರಶಾಂತ್ ಹಾಗೂ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕ ಕೆ ಪ್ರಕಾಶ್ ಅಂಬಳೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್ ಅವರ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ ನಿರ್ದೇಶನ, ವೆಂಕಿ ಯು.ಡಿ.ವಿ. ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.
ಇದು ಎರಡು ಕಾಲಘಟ್ಟಗಳಲ್ಲಿ ನಡೆಯುವ ಕಥೆ. ಪೂರ್ವಾರ್ಧ ಮೂವತ್ತು ವರ್ಷಗಳ ಹಿಂದೆ , ದ್ವಿತೀಯಾರ್ಧ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತದೆ. ಗ್ರಾಮೀಣ ಸೊಗಡಿನ ಜಾನಪದ ಕಲೆಯ ಬಗ್ಗೆ ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ.
ಲಯನ್ ಚಿಕ್ಕೇಗೌಡ ಹಾಗೂ ಟಿ.ಸಿ. ತಳಗವಾಡಿ ಚಿತ್ರಕ್ಕೆ ಹಣ ಹಾಕಿದ್ದಾರೆ

