Review: "Jai" is a social concern film with a human touch

Review: ಮಾನವೀಯ ಸ್ಪರ್ಶದ ಸಾಮಾಜಿಕ ಕಳಕಳಿಯ ಚಿತ್ರ ” ಜೈ” - CineNewsKannada.com

Review: ಮಾನವೀಯ ಸ್ಪರ್ಶದ ಸಾಮಾಜಿಕ ಕಳಕಳಿಯ ಚಿತ್ರ ” ಜೈ”

ಚಿತ್ರ; ಜೈ
ನಿರ್ದೇಶನ ರೂಪೇಶ್ ಶೆಟ್ಟಿ
ತಾರಾಗಣ ; ರೂಪೇಶ್ ಶೆಟ್ಟಿ, ಅದ್ವಿತಿ ಶೆಟ್ಟಿ, ಸುನೀಲ್ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ನವೀನ್ ಪಡೀಲು, ದೇವದಾಸ್ ಕಾಪಿಕಾಡ್ ಮತ್ತಿತರರು
ರೇಟಿಂಗ್ : *** 3/5

ಪ್ರೀತಿ,ಪ್ರೇಮ,ಹೊಡೆದಾಟ,ಬಡಿದಾಟ ಚಿತ್ರಗಳು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿವೆ. ಸಾಮಾಜಿಕ ಕಳಕಳಿ ಮತ್ತು ಮಾನವೀಯ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ತೆರೆಗೆ ಚಿತ್ರ ಕಟ್ಟಿಕೊಡುವುದು ತೀರಾ ಅಪರೂಪ.ಇಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ” ಜೈ”.

ಊರ ಜನರ ಸಮಸ್ಯೆಗೆ ಸ್ಪಂಧಿಸುವ ನೆಲದ ಕಥೆ ಆಧರಿಸಿ ಅದಕ್ಕೆ ಪ್ರೀತಿ,ಪ್ರೇಮ, ಆಕ್ಷನ್ ಸನ್ನಿವೇಶಗಳ ಜೊತೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಮುಖ್ಯವಾಗಿಟ್ಡುಕೊಂಡು ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ. ಆ ಪ್ರಯತ್ನದಲ್ಲಿ ನಿರ್ದೇಶಕ ರೂಪೇಶ್ ಶೆಟ್ಟಿ ಸಫಲರಾಗಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಶಾಸಕ ನಡೆಸುವ ತಂತ್ರ, ಪ್ರತಿತಂತ್ರ, ಪಕ್ಷದ ಕಾರ್ಯಕರ್ತರನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ರೀತಿ, ನೀತಿ, ಊರಿನ ಜನರಿಗೆ ಆಗಬೇಕಾದ ಸೌಲಭ್ಯ ಕಲ್ಪಿಸದೆ ಅವರನ್ನು ನಡೆಸಿಕೊಳ್ಳುವ ಬಗೆ ಹೀಗೆ ಕಮರ್ಷಿಯಲ್ ಆಯಾಮದಲ್ಲಿ ಚಿತ್ರವನ್ನು ಜನರ ಮುಂದಿಡಲಾಗಿದೆ.

ಸತ್ಯ (ರೂಪೇಶ್ ಶೆಟ್ಟಿ) ಶಾಸಕ ವಿಶ್ವನಾಥ್ (ರಾಜ್ ದೀಪಕ್ ಶೆಟ್ಟಿ) ಬಲಗೈ ಭಂಟ. ಆತ ಹೇಳಿದ್ದನ್ನು ಮಾಡುವುದೇ ಈತನ ಕಾಯಕ. ಅನಾರೋಗ್ಯದಿಂದ ಬಳಲುವ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪುರುಸೊತ್ತು ಇಲ್ಲದಷ್ಟು ನಿಯತ್ತಿನ ಜೀವಿ. ಆದರೆ ಆತ ಮತ್ತು ಊರಿನ ಜನರಿಗೆ ಒಂದೇ ಬೇಡಿಕೆ ಅದುವೇ ಊರಿಗೊಂದು ಸೇತುವೆ ಆಗಬೇಕು ಎನ್ನುವುದು.

ವಾಹಿನಿಯೊಂದರಲ್ಲಿ ಕೆಲಸ ಮಾಡುವ ಶ್ರಾವ್ಯ (ಅದ್ವಿತಿ ಶೆಟ್ಟಿ) ಸತ್ಯನನ್ನು ಇಷ್ಟಪಡ್ತಾಳೆ. ಆತನೂ ಕೂಡ.ಪ್ರೀತಿಸಿದ ಹುಡುಗಿ ಮತ್ತು ಮನೆಯವರಿಗಿಂತ ಹೆಚ್ಚಾಗಿ ಶಾಸಕನ ನಂಬಿಕಸ್ತ. ಚುನಾವಣೆ ಒಂದೆಡೆಯಾದರೆ ಜನರನ್ನು ಯಾಮಾರಿಸಿ ಮತ ಪಡೆಯುವುದು ಆತನ ಕಾಯಕ.ಇಂತಹುದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಆಗಮನವಾಗುತ್ತದೆ. ಅದು ಏನು.. ಊರ ಜನರ ಬೇಡಿಕೆ ಈಡೇರುತ್ತಾ.. ಸತ್ಯ ಏನೆಲ್ಲಾ ಮಾಡ್ತಾನೆ.. ಆತನ ಕನಸು ನನಸಾಗುತ್ತಾ ಎನ್ನುವುದು ಚಿತ್ರದ ತಿರುಳು.

ಚಿತ್ರದಲ್ಲಿ ಬಹುತೇಕ ತುಳು ಕಲಾವಿದರೇ ಇರುವುದರಿಂದ “ಸು ಪ್ರಮ್ ಸೋ” ಚಿತ್ರ ನೋಡಿದ ಮಂದಿಗೆ ಅಂತಹುದೇ ಮತ್ತೊಂದು ಚಿತ್ರ ಎನ್ನುವ ನಿರೀಕ್ಷೆ ಹುಟ್ಟಿಸಿದೆ. ಅದು ಕೊನೆತನಕ ಕಾಪಾಡಿಕೊಂಡಿದೆಯಾ ಎನ್ನುವುದನ್ನು ತಿಳಿಯಬೇಕಾದರೆ ಚಿತ್ರ ನೋಡಬಹುದಾಗಿದೆ.

ನಿರ್ದೇಶಕ ರೂಪೇಶ್ ಶೆಟ್ಟಿ ಚಿತ್ರಕ್ಕಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರನ್ನು ಕರೆಸಿ ತುಳುನಾಡಿನ ಬಗ್ಗೆ ಬಿಲ್ಡಪ್ ಡೈಲಾಗ್ ಹೊಡೆಸಿದ್ದಾರೆ. ಮತ್ತೊಬ್ಬರ ಪರ ವಹಿಸಲು ಬಂದು ಸತ್ಯ ತಂಡ ಪರ ನಿಲ್ತಾರೆ. ಹೀಗಿದ್ದರೂ ಅವರ ಮಾತಿಗಿಂತ ಕೊಲೆ ಪ್ರಕರಣ ಮುಂದೆ ತಂದು ಡಮ್ಮಿ ಮಾಡಿದ್ದಾರೆ ಅನ್ನಿಸಿದರೆ ಆಶ್ಚರ್ಯವಿಲ್ಲ. ಸುನೀಲ್ ಶೆಟ್ಟಿ ಬೆಂಬಲಕ್ಕೆ ಬಂದ ಮೇಲೆ ಅವರ ಕೊಲೆ ಪ್ರಕರಣ ಮುಂದೆ ತರುವ ಅಗತ್ಯವಿರಲಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಿದ್ದರೆ ಚೆಂದ ಇತ್ತು.

ನಿರ್ದೇಶಕ ರೂಪೇಶ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲಿ ಗಮನ ಸೆಳೆದಿದ್ದಾರೆ,ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಸುನೀಲ್ ಶೆಟ್ಟಿ ಸೇರಿದಂತೆ ತುಳುನಾಡ ಕಲಾವಿದರ ದಂಡು ಚಿತ್ರದಲ್ಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin