ಟಾಲಿವುಡ್ ನಟ ಧರ್ಮಕೀರ್ತಿರಾಜ್ ಪ್ರವೇಶ

ಚಂದನವನದ ಪ್ರತಿಭೆಗಳು ಬೇರೆ ಭಾಷೆಯಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆ ಸಾಲಿಗೆ ಧರ್ಮಕೀರ್ತಿರಾಜ್ ಸೇರ್ಪಡೆಯಾಗಿದ್ದಾರೆ. ‘ನವಗ್ರಹ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಾಕಲೋಟ್ ಹೀರೋ ಆಗಿ ಗುರುತಿಸಿಕೊಂಡಿದ್ದರು. ನಂತರ ಸಾಹಸ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿ ಆಕ್ಷನ್ ಹೀರೋ ಆಗಿ ತಮ್ಮದೆ ಛಾಪು ಮೂಡಿಸಿಕೊಳ್ಳುವಲ್ಲಿ ಸಪಲರಾಗಿದ್ದಾರೆ. ಸದ್ಯ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದರೂ, ನೆರೆಯ ಟಾಲಿವುಡ್ ಹೋಗುತ್ತಿದ್ದಾರೆ.

‘ಬ್ಲಡ್ ರೋಸಸ್’ ಎನ್ನುವ ತೆಲುಗು ಸಿನಿಮಾಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿ ಇನ್ಸ್ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸಾಹಸ ಹಾಗೂ ಕ್ರೈಮ್ ಆಧಾರಿತ ಕಥೆ ಹೊಂದಿದ್ದು, ಸಾಕಷ್ಟು ತಿರುವುಗಳು ಇರುವುದು ವಿಶೇಷ. ನಾಗಣ್ಣ-ಲಕ್ಷಮ್ಮ ಆರ್ಶಿವಾದದೊಂದಿಗೆ ಟಿಬಿಆರ್ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಹರೀಶ್.ಕೆ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ರಚನೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಜವಬ್ದಾರಿಯನ್ನು ಎಂ.ಗುರುರಾಜನ್ -ಎಂಜಿಆರ್ ಹೊತ್ತುಕೊಂಡಿದ್ದಾರೆ. ತಾರಾಗಣದಲ್ಲಿ ಶ್ರೀಲೂ, ಸುಮನ್, ಟಾರ್ಜನ್, ಘರ್ಷಣಶ್ರೀನಿವಾಸ್, ಜಗದೀಶ್ವರಿ ಮುಂತಾದವರ ನಟನೆ ಇದೆ. ನಾಯಕಿ ಹಾಗೂ ಸಂಗೀತ ಸಂಯೋಜಕರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ.
ಛಾಯಾಗ್ರಹಣ ಓಗಿರೆಡ್ಡಿ ಶಿವಕುಮಾರ್, ಸಂಭಾಷಣೆ-ಕಾರ್ಯಕಾರಿ ನಿರ್ಮಾಪಕ ಮಣಿಕುಮಾರ್ ಮಂಚೇನಹಳ್ಳಿ, ಕಾಸ್ಟ್ಯೂಮ್ ಮಂದಟ್ಟಿ ಗೀತಕ್ಕ, ನಾಲ್ಕು ಫೈಟ್ ಗಳಿಗೆ ನಂದು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಹತ್ತು ದಿನದ ಚಿತ್ರೀಕರಣ ಹೈದರಬಾದ್ದಲ್ಲಿ ಮುಗಿದಿದ್ದು, ಎರಡನೇ ಹಂತದ ಶೂಟಿಂಗ್ ಅನ್ನು ರಾಮೋಜಿ ಫಿಲಂ ಸಿಟಿಯಲ್ಲಿ ನಡೆಸಲು ತಂಡ ಯೋಜನೆ ರೂಪಿಸಿಕೊಂಡಿದೆ.