ಸರಳವಾಗಿ ನೆರವೇರಿದ “ತಿರುವು” ಚಿತ್ರಕ್ಕೆ ಮಹೂರ್ತ

ಹದಿನಾಲ್ಕು ಚಿತ್ರಗಳಿಗೆ ಸಂಗೀತ ಮತ್ತು ಮೂರು ಆಲ್ಬಂ ಹಾಡುಗಳಿಗೆ ರಾಗ ಒದಗಿಸಿರುವ ಕೆವಿನ್.ಎಂ, ಇದೆಲ್ಲಾ ಅನುಭವದಿಂದ ಈಗ ‘ತಿರುವು’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ಹೊಸ ಪ್ರಯೋಗಕ್ಕೆ ಹೆಜ್ಜೆ ಹಾಕಿದ್ದಾರೆ. ಗುರುವಾರದಂದು ವಿಜಯನಗರದ ಮಾರುತಿ ಮಂದಿರದಲ್ಲಿ ಸರಳವಾಗಿ ಮುಹೂರ್ತ ಸಮಾರಂಭ ನಡೆಯಿತು. ಉದ್ಯಮಿ ಮತ್ತು ನಿರ್ಮಾಪಕ ಸಣ್ಣಕ್ಕಿಪ್ರಕಾಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.

ಸಲ್ಗರ್ ಫಿಲ್ಮ್ಸ್ ಅಡಿಯಲ್ಲಿ ಶಿವಮೊಗ್ಗದ ಪ್ರತಿಮಾಬಸವರಾಜ ಸಲ್ಗರ್ ಬಂಡವಾಳ ಹೂಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಹಳ್ಳಿಯಲ್ಲಿದ್ದ ಯುವ ದಂಪತಿಗಳು ಸಣ್ಣದೊಂದು ಕನಸು ಕಟ್ಟಿಕೊಂಡು ಪಟ್ಟಣಕ್ಕೆ ಬರುತ್ತಾರೆ. ಇಲ್ಲಿಗೆ ಬಂದಾಗ ತಮಗೆ ಅರಿವಿಲ್ಲದಂತೆ ತೊಂದರೆಗೆ ಸಿಲುಕುತ್ತಾರೆ. ಇವರ ಸಹಾಯಕ್ಕೆ ಒಬ್ಬರು ಬರುತ್ತಾರೆ. ಅವರು ಯಾರು ಯಾವ ಕಾರಣಕ್ಕೆ ಕಷ್ಟ ಒದಗಿ ಬರುತ್ತದೆ. ಕೊನೆಗೆ ಸಂಕಷ್ಟದಿಂದ ಹೊರಗೆ ಬರುತ್ತಾರಾ ತಾವು ಕಂಡಂತ ಕನಸನ್ನು ನನಸು ಮಾಡಿಕೊಳ್ಳುತ್ತಾರಾ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳೊಂದಿಗೆ ತೋರಿಸಲಾಗುತ್ತಿದೆ. ಜತೆಗೆ ಪ್ರೀತಿ, ಭಾವನೆಗಳು, ನ್ಯಾಯಾಲಯ ದೃಶ್ಯಗಳು ಬರಲಿದೆ.

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಾ ಹೆಸರು ಮಾಡಿರುವ ಹೊನ್ನಾಳಿ ತಾಲ್ಲೋಕು, ಹೊಸಹನುಮನ ಹಳ್ಳಿಯ ಬಸವರಾಜ.ಎ.ಎಸ್ ನಾಯಕ. ಅಂಡಮಾನ್ ಮೂಲದ ಭರತನಾಟ್ಯ ಪ್ರವೀಣೆ. ಸದ್ಯ ಬೆಂಗಳೂರು ನಿವಾಸಿ, ವಿನಿತಾನಾಯರ್.ಹೆಚ್ ನಾಯಕಿ. ಇವರೊಂದಿಗೆ ಯಶವಂತರಾಜ್‍ಕುಮಾರ್, ಕಾವ್ಯ, ದೀಕ್ಷಿತಾನಂಜಪ್ಪ, ಶ್ರೀಕಂಠ.ಎಸ್.ಆರ್, ಸಣ್ಣಕ್ಕಿಪ್ರಕಾಶ್, ಭರತ್‍ಕೃಷ್ಣ, ಅಖಿಲ್.ಎಸ್.ನಾಯರ್, ಭಾಗ್ಯಲಕ್ಷೀ ಹುಂಡೇಕರ್, ಆಕಾಶ್.ಎಂ, ಮಾದವಿ.ಟಿ.ಎಂ, ಪುನೀತ್‍ಕುಮಾರ್.ಎಸ್, ಉಮಾದೇವಿ.ಆರ್, ಹೇಮಂತ್.ಎನ್, ಕೃಷ್ಣಪ್ರೇಮಾ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕಥೆ ಎಸ್.ರಂಜಿತ್ ಕುಮಾರ್-ಶ್ರೀಕಂಠ ಪ್ರಸಾದ್, ಛಾಯಾಗ್ರಹಣ ರಾಜೇಶ್.ಜಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ.