ತಾತನ ಸಲಹೆಯಂತೆ ಕಲಾವಿದೆಯಾಗಬೇಕೆನ್ನುವ ತುಡಿತ ಹೆಚ್ಚಾಗಿತ್ತು: ಭೀಮ ಚಿತ್ರದ ನಟಿ “ಪ್ರಕೃತಿ ಸೌಂದರ್ಯ”

ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಹೊಸ, ಯುವ ಪ್ರತಿಭೆಗಳ ಆಗಮನವಾಗುತ್ತಿದೆ. ಹಾಗೆ ಬಂದವರಲ್ಲಿ ಸರಳ ಸೌಂರ್ಯವತಿಯಾದ ಪ್ರಕೃತಿ ಸೌಂದರ್ಯ ಕೂಡ ಒಬ್ಬರು. ದುನಿಯಾ ವಿಜಯ್ ನಿರ್ದೇಶನದ ಭೀಮ ಚಿತ್ರದಲ್ಲಿ ಡ್ರಾಗನ್ ಮಂಜು ಪತ್ನಿಯಾಗಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು.

ಮೂಲತ: ತುಮಕೂರಿನವರಾದ ಪ್ರಕೃತಿ ಸೌಂದರ್ಯ ಚಿಕ್ಕಂದಿನಿಂದಲೇ ಕಲೆಯ ನಂಟು ಬೆಳೆಸಿಕೊಂಡವರು. ಇವರ ತಾತ ಕೂಡ ರಂಗಭೂಮಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು.

ಕಾಲೇಜು ದಿನಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಪ್ರಕೃತಿ ಸೌಂದರ್ಯಗೆ ಸ್ನೇಹಿತೆಯರೆಲ್ಲ ನೀನು ಚೆನ್ನಾಗಿದ್ದೀಯ, ಹಾಡುವುದಕ್ಕಿಂತ ಆಕ್ಟಿಂಗ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಸಲಹೆ ನೀಡಿದರಂತೆ. ಆ ಮಾತನ್ನೇ ಆಳವಾಗಿ ತೆಗೆದುಕೊಂಡ ಪ್ರಕೃತಿ ನಾನು ಕಲಾವಿದೆಯಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ.

ನಂತರ ಸ್ನೇಹಿತರೊಬ್ಬರ ಸಹಾಯದಿಂದ ಕಿರುತೆರೆಯ ಗೀತಾ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಆನಂತರ ಸಿಕ್ಕ ದೊಡ್ಡ ಅವಕಾಶವೇ ಕನ್ಯಾದಾನ. ಈ ಸೀರಿಯಲ್‍ನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ಪ್ರಕೃತಿ ಸೌಂದರ್ಯ ಪಾತ್ರ, ಅಭಿನಯ ಎಲ್ಲರ ಗಮನ ಸೆಳೆಯಿತು.
ಅದಾದ ನಂತರ ದುನಿಯಾ ವಿಜಯ್ ,ಭೀಮ ಚಿತ್ರದ ಪ್ರಮುಖ ಪಾತ್ರಕ್ಕೆ ಇವರೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಭೀಮ ಚಿತ್ರದ ಪಾತ್ರ ನೋಡಿ, ತೆಲುಗು ಚಿತ್ರರಂಗದ ಕಡೆಯಿಂದಲೂ ಇವರಿಗೆ ಹಲವಾರು ಆಫರ್ ಗಳು ಬರುತ್ತಿವೆ. ಈಗಾಗಲೇ ತೆಲುಗು ಸೀರಿಯಲ್ ಒಂದರಲ್ಲಿ ಕೂಡ ಪ್ರಕೃತಿ ಸೌಂದರ್ಯ ಅಭಿನಯಿಸಿದ್ದಾರೆ ಕೂಡ.

ಸದ್ಯ ಕನ್ನಡದ ಬಿಗ್ ಪ್ರಾಜೆಕ್ಟ್ ವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಅದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳಿದ ಪ್ರಕೃತಿ ಸೌಂದರ್ಯ ಅವರಿಗೆ ಜನರು ಗುರುತಿಸುವಂಥ ಹಾಗೂ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿದೆ.

ಇದೇ ಡಿಸೆಂಬರ್ 24ರಂದು ಪ್ರಕೃತಿ ಸೌಂದರ್ಯ ಹುಟ್ಟುಹಬ್ಬವಿದ್ದು ಇದೇ ಸಂದರ್ಭದಲ್ಲಿ ಹೊಸ ಚಿತ್ರಗಳ ಆಫರ್ ಬರುತ್ತಿರುವುದು ಅವರಿಗೆ ಡಬಲ್ ಖುಷಿ ನೀಡಿದೆ.