Priyanka Achar Interview : “ಮಹಾನಟಿ” ವಿಜೇತೆಗೆ ಒಲಿದ ಅದೃಷ್ಟ : ಯಾವುದೇ ಪಾತ್ರ ಮಾಡಲು ಸಿದ್ದ – ಪ್ರಿಯಾಂಕ ಆಚಾರ್

ಕನ್ನಡದ ಕಿರುತೆರೆ ಅನೇಕ ಪ್ರತಿಭಾನ್ವಿತರನ್ನು ಹಿರಿತೆರೆಗೆ ಪರಿಚಯಿಸಿದೆ. ಈ ಮೂಲಕ ಸಿನಿಮಾ ರಂಗದಲ್ಲಿ ಬಹು ಎತ್ತರಕ್ಕೆ ಕರೆದೊಯ್ದಿದೆ. ನೇಮು, ಫೇಮು, ಯಶಸ್ಸು ಕೊಟ್ಟಿದೆ. ಈ ಸಾಲಿಗೆ ಮತ್ತೊಂದು ರಂಗಭೂಮಿ ಪ್ರತಿಭೆ ಪ್ರಿಯಾಂಕ ಆಚಾರ್ ಹೊಸ ಸೇರ್ಪಡೆಯಾಗಿದ್ದಾರೆ.

ಕನ್ನಡದ ಖ್ಯಾತ ನಟ ಮಂಡ್ಯ ರಮೇಶ್ ಅವರ “ನಟನಾ” ರಂಗ ಶಾಲೆಯಿಂದ ಕಲಿತ ಹುಡುಗಿ ಈಕೆ. ಅಲ್ಲಿನ ತರಬೇತಿ, ನಟನಾ ಪಟ್ಟುಗಳ ಕರಗತ ಅವರನ್ನು ಜೀ ವಾಹಿನಿಯ “ಮಹಾನಟಿ” ರಿಯಾಲಿಟಿ ಶೋಗೆ ಆಯ್ಕೆಯಾಗುವಂತೆ ಮಾಡಿತ್ತು. ಅಲ್ಲಿ ಮಹಾನಟಿ ಕಿರೀಟ ತೊಟ್ಟು ಗೆಲುವಿನ ನಗೆ ಬೀರಿದ್ದರು.
“ಕಾಟೇರ” ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ತರುಣ್ ಸುಧೀರ್ ಕಿಶೋರ್ ನಿರ್ಮಾಣದ ಏಳು ಮಲೆಯಲ್ಲಿ ಎದೆ ನಡುಗಿಸಿದ ಪ್ರೇಮಕಥೆಗೆ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ
“ಮಹಾನಟಿ” ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಸಿಕ್ಕಿರುವ ಮೊದಲ ಸಿನಿಮಾ, ಜೊತೆಗೆ ಪ್ರಿಯಾಂಕ ಆಚಾರ್ ಅವರ ವೃತ್ತಿ ಜೀವನದ ಮೊದಲ ಚಿತ್ರ. ಹೀಗಾಗಿ ಪ್ರಿಯಾಂಕ ಅವರಲ್ಲಿ ಮೊದಲ ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದ್ದು ಚಿತ್ರದಲ್ಲಿ ನಟಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ಹೊಸ ಚಿತ್ರದ ಕುರಿತು ನಟಿ ಪ್ರಿಯಾಂಕ ಆಚಾರ್ ಸಿನಿಮಾಗೆ ಬಂದ ಬಗೆ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
- ನಿಮ್ಮ ಹಿನ್ನೆಲೆ ಏನು, ಎಲ್ಲಿಯವರು ಪ್ರಿಯಾಂಕ ಆಚಾರ್..
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹುಡುಗಿ, ದ್ವಿತೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದ ನಟಿಯಾಗುವ ಆಸೆ ಇತ್ತು. ಅದಕ್ಕೆ ಪೂರಕ ಎನ್ನುವಂತೆ ” ನಟನಾ” ರಂಗ ಶಾಲೆಗೆ ಸೇರಿಕೊಂಡಿದ್ದೆ.. ಅಲ್ಲಿಯೇ ಸಿಕ್ಕ ಮಹಾನಟಿ ರಿಯಾಲಿಟಿ ಶೋ. ಆ ಬಳಿಕ ಸಿಕ್ಕ ಅವಕಾಶ ಈ ಸಿನಿಮಾ.
* ನಟಿಯಾಗುವ ಕನಸಿತ್ತಾ.. ಮಹಾನಟಿ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದು ಹೇಗೆ
ಸಿನಿಮಾದಲ್ಲಿ ನಟಿಸಬೇಕು ಅನ್ನುವುದು ನನ್ನ ಚಿಕ್ಕ ವಯಸ್ಸಿನ ಕನಸು. ಆದರೆ ಚಿತ್ರರಂಗಕ್ಕೆ ಹೇಗೆ ಹೋಗಬೇಕು ಎನ್ನುವುದು ಗೊತ್ತಿರಲಿಲ್ಲ. ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು. ಹೀಗಾಗಿ ನಟನಾ ರಂಗ ಶಾಲೆಗೆ ನಟನಾ ತರಬೇತಿಗೆ ಸೇರಿಕೊಂಡೆ. ಆಗಲೇ ಜೀ ಕನ್ನಡ ವಾಹಿಯ ಮಹಾನಟಿ ರಿಯಾಲಿಟಿ ಶೋ ಆಡಿಷನ್ ನಡೀತಾ ಇತ್ತು. ಮೈಸೂರಿನಲ್ಲಿ ಆಡಿಷನ್ ಕೊಟ್ಟೆ ಆಯ್ಕೆಯಾದೆ…

- ಏಳು ಮಲೆಯಲ್ಲಿ ಎದೆ ನಡುಗಿಸುವ ಕಥೆಯಲ್ಲಿ ನಿಮ್ಮ ಪಾತ್ರ ಏನು
ಈ ಸಿನಿಮಾದಲ್ಲಿ ನನ್ನ ಪಾತ್ರ ತಮಿಳುನಾಡಿನ ಒಂದು ಒಳ್ಳೆಯ ಮನೆತನದ ಹುಡುಗಿಯ ಪಾತ್ರ. ಬಹಳ ಮುದ್ದಾಗಿ ಇರುವ ಪಾತ್ರ. ಜೊತೆಗೆ ಮಗ್ದೆಯ ಪಾತ್ರ. ಈ ಪಾತ್ರ ನನಗೆ ಹೋಲುವ ಹಾಗೆ ಇದೆ. ನಿಜ ಜೀವನದಲ್ಲಿ ನಾನು ಹೇಗೆ ಇದ್ದೇನೋ ಹಾಗೆ ಇರುವ ಪಾತ್ರ.
* ಮೊದಲ ಚಿತ್ರದಲ್ಲಿ ನೀವೆಷ್ಟು ಕಾತುರರಾಗಿದ್ದೀರಿ..
ಮಾಹಾನಟಿ ರಿಯಾಲಿಟಿ ಶೋನಲ್ಲಿ ವಿಜೇತರಾದ ಬಳಿಕ ಹಲವು ಸಿನಿಮಾ ಕಥೆಗಳು ಬಂದಿದ್ದವು. ಆದರೆ ಅವು ಯಾವುದೂ ಇಷ್ಟ ಆಗಿರಲಿಲ್ಲ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಇಂತಹ ಸಂದರ್ಭದಲ್ಲಿ ಸಿಕ್ಕ ಸಿನಿಮಾ ಇದು. ಚಿತ್ರದಲ್ಲಿ ನಟಿಸಲು ತುಂಬಾ ಕಾತುರಳನಾಗಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಹೀಗಾಗಿ ಸಿನಿಮಾಗೆ ಆಯ್ಕೆಯಾದದ್ದು ಮರೆಯಲಾರದ ಅನುಭವ. ಅದನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ.
* ನಟನೆಯ ಬಗ್ಗೆ ತರಬೇತಿ ಪಡೆದಿದ್ದೀರಾ ಹೇಗೆ..
ನಾನು ಮೂಲತಃ ರಂಗಭೂಮಿ ಕಲಾವಿದೆ. ಹಿರಿಯ ಕಲಾವಿದ ಮಂಡ್ಯ ರಮೇಶ್ ಸರ್ ಅವರ “ನಟನಾ ರಂಗ ಶಾಲೆ” ಯ ವಿದ್ಯಾರ್ಥಿ. ಅಲ್ಲಿನ ಕಲಿಕೆ ನನ್ನನ್ನು ಮಹಾನಟಿ ರಿಯಾಲಿಟಿ ಶೋಗೆ ಆಯ್ಕೆಯಾಗುವಂತೆ ಮಾಡಿತು. ಸಿನಿಮಾ ಅಂದ್ರೆ ..ಏನು. ಹೇಗೆ ನಟಿಸಬೇಕು ಎನ್ನುವುದು ಗೊತ್ತಿರಲಿಲ್ಲ. ಮಹಾನಟಿ ಶೋ ಸಿನಿಮಾ ನಟನೆಯನ್ನೂ ಕಲಿಸಿಕೊಟ್ಟಿತು. ಒಂದು ರೀತಿಯಲ್ಲಿ ನಟನಾ ರಂಗ ಶಾಲೆ ಮತ್ತು ಮಹಾ ನಟಿ ರಿಯಾಲಿಟಿ ಶೋ ನಟಿಯಾಗಲು ಕಾರಣ.

- ನಿಮಗೆ ಯಾವ ರೀತಿಯ ಪಾತ್ರ ಮಾಡುವ ಆಸೆ ಇದೆ. ಈ ರೀತಿಯ ಪಾತ್ರ ಮಾಡಬೇಕು ಅಂದುಕೊಂಡಿದ್ದೀರಿ
ನನಗೆ ಇದೇ ರೀತಿಯ ಪಾತ್ರ ಮಾಡಬೇಕು ಎನ್ನುವ ಕಟ್ಟು ಪಾಡು ಇಲ್ಲ. ಯಾವುದೇ ರೀತಿಯ ಪಾತ್ರ ಕೊಟ್ಟರೂ ಮಾಡಲು ಸಿದ್ದನಿದ್ದೇನೆ. ಪಾತ್ರಕ್ಕೆ ಜೀವ ತುಂಬುವ ಮೂಲಕ ಜನರ ಮನಸ್ಸಿಗೆ ಹತ್ತಿರವಾಗುವಂತೆ ಮಾಡುವುದು ನನ್ನ ಉದ್ದೇಶ.
* ಯಶಸ್ವಿ ನಿರ್ದೇಶಕ ತರುಣ್ ಸುದೀರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತೇನೆ ಎಂದು ಎಂದಾದರು ಅಂದುಕೊಂಡಿದ್ರಾ..
ಖಂಡಿತಾ ಇಲ್ಲ ತರುಣ್ ಸುಧೀರ್ ಸರ್ ಅವರ ನಿರ್ಮಾಣದ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡ್ತಾರೆ ಎಂದು ನಿರೀಕ್ಷೆ ಇರಲಿ ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಸಿನಿಮಾಗೆ ಅವಕಾಶ ಬಂದಾಗ ಹೇಗೆ ಪ್ರತಿಕ್ರಿಯೆ ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ. ತುಂಬಾ ಖುಷಿಯಾಗಿದ್ದೇನೆ. ನಟಿಸಲು ಎದುರು ನೋಡುತ್ತಿದ್ದೇನೆ.

- ಮೊದಲ ಸಿನಿಮಾದಲ್ಲಿ ನಟನೆ,ಅದು ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾ ನೀಡದ ನಿರ್ದೇಶಕ ತರುಣ್ ಸುಧೀರ ಅವರ ನಿರ್ಮಾಣ ಹೇಗನಿಸಲಿದೆ.
ಮೊದಲ ಸಿನಿಮಾದಲ್ಲಿ ಒಳ್ಳೆಯ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ನನ್ನ ಸಿನಿಮಾ ಕೆರಿಯರ್ ಗೂ ತುಂಬಾ ಸಹಾಯವಾಗುತ್ತೆ ಎನ್ನುವ ನಿರೀಕ್ಷೆ ಮತ್ತು ವಿಶ್ವಾಸವಿದೆ.
* ಬೇರೆ ಸಿನಿಮಾಗಳ ಅವಕಾಶ ಬಂದಿದೆಯಾ.
ಒಂದಷ್ಟು ಸಿನಿಮಾ ಕಥೆಗಳು ಬಂದಿವೆ. ಆದರೆ ಒಂದು ಒಳ್ಳೆಯ ಕಥೆ ಬರಲಿ ಅಂತ ಕಾಯ್ತಾ ಇದ್ದೆ. ಆಗ ಸಿಕ್ಕಿದ್ದೆ ತರುಣ್ ಸರ್ ನಿರ್ಮಾಣದ ಚಿತ್ರ..
* ಸಿನಿಮಾ ನಟಿಯಾಗಲಿ ಕುಟುಂಬದ ಸಹಕಾರ ಹೇಗಿತ್ತು.
ಮನೆಯಲ್ಲಿ ಪ್ರತಿಯೊಬ್ಬರ ಸಹಕಾರ ಮತ್ತು ಪ್ರೋತ್ಸಾಹದಿಂದ ರಿಯಾಲಿಟಿ ಶೋ ಮತ್ತು ಸಿನಿಮಾಗೆ ಆಯ್ಕೆಯಾಗಲು ಸಹಕಾರಿಯಾಗಿದೆ. ಒಳ್ಳೆಯ ಪಾತ್ರ ಮಾಡುವ ಮೂಲಕ ಕುಟುಂಬದವರು ನನ್ನ ಮೇಲಿನ ವಿಶ್ವಾದ ಉಳಿಸಿಕೊಳ್ಳುವ ವಿಶ್ವಾಸವಿದೆ.
* ಸಿನಿಮಾ ಆಯ್ಕೆಯಲ್ಲಿ ಯಾವ ವಿಷಯಗಳ ಕಡೆಗೆ ನಿಮ್ಮ ಆದ್ಯತೆ ಯಾವುದು.
ಚಿತ್ರದ ಆಯ್ಕೆಯಲ್ಲಿ ಒಳ್ಳೆಯ ಕಥೆ, ನಿರ್ಮಾಣ ಸಂಸ್ಥೆ,ಜೊತೆಗೆ ನನ್ನ ಪಾತ್ರವೂ ಮುಖ್ಯವಾಗುತ್ತದೆ. ಈ ಮೂರು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಿನಿಮಾ ಆಯ್ಕೆ ಮಾಡಿಕೊಳ್ಳುವೆ. ಈ ಮೂರು ಅಂಶಗಳು ತರುಣ್ ಸುಧೀರ್ ಸರ್ ಸಿನಿಮಾದಲ್ಲಿದೆ.

ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದ ಎದೆ ನಡುಗಿಸುವ ನೈಜ ಘಟನೆಯ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಚಿತ್ರಕ್ಕೆ ನಾಯಕರಾಗಿ ನಟಿ ರಕ್ಷಿತಾ ಸಹೋದರ ರಾಣಾ ಆಯ್ಕೆಯಾಗಿದ್ದರು. ಇದೀಗ ಗಾಯಕಿಯಾಗಿ ಪ್ರಿಯಾಂಕ ಆಚಾರ್ ಅವಕಾಶ ಪಡೆದಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರ ಬಳಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಪುನೀತ್ ರಂಗಸ್ವಾಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತರುಣ್ ಸುದೀರ್ ಜೊತೆಗೆ ಅಟ್ಲಾಂಟಾ ನಾಗೇಂದ್ರ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಕನ್ನಡ ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿ ಬರಲಿದೆ. ಚಿತ್ರೀಕರಣ ಭರದಿಂದ ಸಾಗಿದೆ.