Bigg Boss Season 10 is just a few days away: Looking back, the entertainment is plentiful

ಬಿಗ್ ಬಾಸ್ ಸೀಸನ್ 10 ಮುಗಿಯಲು ಕೆಲವೇ ದಿನ ಬಾಕಿ : ತಿರುಗಿ ನೋಡಿದರೆ ಮನರಂಜನೆ ಮಹಾಪೂರ - CineNewsKannada.com

ಬಿಗ್ ಬಾಸ್ ಸೀಸನ್ 10 ಮುಗಿಯಲು ಕೆಲವೇ ದಿನ ಬಾಕಿ : ತಿರುಗಿ ನೋಡಿದರೆ ಮನರಂಜನೆ ಮಹಾಪೂರ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೊನ ಹತ್ತನೇ ಸೀಸನ್ ಅಂತಿಮ ಹಂತಕ್ಕೆ ಕ್ಷಣಗಣನೆ ಶುರುವಾಗಿದೆ. ಹದಿನಾಲ್ಕು ವಾರಗಳನ್ನು ಮುಗಿಸಿ ಹದಿನೈದನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ರಿಯಾಲಿಟಿ ಷೋ ದಿನದಿಂದ ದಿನಕ್ಕೆ ಕುತೂಹಲದ ಸ್ವರೂಪ ಪಡೆದುಕೊಳ್ಳುತ್ತಿದೆ.

ಈ ಹಂತದಲ್ಲಿ ಈ ಸೀಸನ್ ಬಿಗ್ ಬಾಸ್ ಜರ್ನಿಯನ್ನು ಮರಳಿ ನೋಡಿದರೂ ಕುತೂಹಲಕಾರಿ ಚಿತ್ರಣ ಸಿಗುತ್ತದೆ. ಈ ಬಾರಿ ಮನೆಯೊಳಗಿನ ಸದಸ್ಯರು ಎಷ್ಟು ವೈವಿಧ್ಯಪೂರ್ಣವಾಗಿದ್ದರೋ ಮನೆಗೆ ಭೇಟಿ ನೀಡಿದ ಅತಿಥಿಗಳೂ ಅಷ್ಟೇ ಗಾಢವಾದ ಬಣ್ಣವನ್ನು ತುಂಬಿದ್ದಾರೆ. ಹಾಗಾದ್ರೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟು ಕಲರ್ ಫುಲ್ ಮಾಡಿದ ಅತಿಥಿಗಳು ಯಾರು ಅವರು ಭೇಟಿ ನೀಡಿದ ಸಂದರ್ಭ ಹೇಗಿತ್ತು ಇಲ್ಲಿದೆ ಒಂದು ಚಿತ್ರಣ.

ಎಂಎಲ್‍ಎ ಪ್ರದೀಪ್ ಈಶ್ವರ್ ಸ್ಫೂರ್ತಿ ಮಾತುಗಳು

ಬಿಗ್ ಬಾಸ್ ಶೋ ಅರಂಭವಾದ ಮೊದಲ ಬೆಳಗಿನಲ್ಲಿಯೇ ಒಂದು ಆಶ್ವರ್ಯ ಕಾದಿತ್ತು. ಅಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಎಂಎಲ್‍ಎ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರು. ಮನೆಯೊಳಗಿನ ಸದಸ್ಯರು ಅವರ ಸ್ಪೂರ್ತಿದಾಯಕ ಮಾತು ಕೇಳಿ ಕಣ್ಣಲ್ಲಿ ನೀರನ್ನೂ ಎದೆಯಲ್ಲಿ ವಿಶ್ವಾಸವನ್ನೂ ತುಂಬಿಕೊಂಡು ಆಟಕ್ಕೆ ಅಣಿಯಾಗಿದ್ದರು. ಆರಂಭದಲ್ಲಿ ಪ್ರದೀಪ್, ಬಿಗ್ ಬಾಸ್‍ಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯೂ ನಡೆದಿತ್ತು. ಆದರೆ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ಬಾಯಿ ಸಿಹಿ ಮಾಡಿ, ಮಾತುಗಳಿಂದ ವಿಶ್ವಾಸ ತುಂಬಿ ಮನೆಯಿಂದ ಹೊರಗೆ ಬಂದಿದ್ದರು.

ಲಾರ್ಡ್ ಪ್ರಥಮ್ ಎಂಟ್ರಿ

ಬಿಗ್ ಬಾಸ್ ಸೀಸನ್ 4ನ ವಿನ್ನರ್ ಪ್ರಥಮ್ ಅವರ ಎಂಟ್ರಿಯಂತೂ ಸಖತ್ ಎಂಟರ್ಟೈನಿಂಗ್ ಆಗಿತ್ತು. ತಮ್ಮನ್ನು ತಾವು `ಲಾರ್ಡ್ ಪ್ರಥಮ್’ ಎಂದು ಕರೆದುಕೊಂಡೇ ಒಳಗೆ ಬಂದ ಅವರು ಮನೆಯ ಸದಸ್ಯರಿಂದಲೆಲ್ಲ ಭಾರಿ ಸೇವೆ ಮಾಡಿಸಿಕೊಂಡಿದ್ದರು. ಸದಸ್ಯರಿಗೆಲ್ಲ ತಮ್ಮದೇ ಸ್ಟೈಲ್‍ನಲ್ಲಿ ಆರ್ಡರ್ ಮಾಡುತ್ತ, ಅವರಿಗೆ ಸಲಹೆ ಸೂಚನೆ ನೀಡುತ್ತ ದಿನವಿಡೀ ಕಾಲ ಕಳೆದಿದ್ದರು. ಇದು ಬಿಗ್ ಬಾಸ್ ಟಾಸ್ಕ್ ಇರಬೇಕು ಎಂದು ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡ ಸದಸ್ಯರು ಪ್ರಥಮ್ ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸಿದ್ದರು. ಸಂಗೀತಾ ಅವರಂತೂ ಪ್ರಥಮ್ ಅವರಿಗೆ ಕೈತುತ್ತು ತಿನ್ನಿಸಿದ್ದರು ಕೂಡ.
ಆದರೆ ವೀಕೆಂಡ್ ಎಪಿಸೋಡ್‍ನಲ್ಲಿ ತಿಳಿದಿದ್ದು, ಪ್ರಥಮ್ ಅವರನ್ನೆಲ್ಲ ಬಕ್ರಾ ಮಾಡಿದ್ದಾರೆ. ಅವರು ಹೇಳಿದ ಆಜ್ಞೆಗಳನ್ನು ಪಾಲಿಸಬೇಕು ಎಂದು ಮನೆಯ ಸದಸ್ಯರಿಗೆ ಯಾವ ಸೂಚನೆಯೂ ಬಿಗ್ ಬಾಸ್ ಡೆಯಿಂದ ಬಂದಿರಲಿಲ್ಲ ಎಂಬುದು!

ದಸರೆಗೆ `ತಾರಾ’ ಮೆರುಗು!

ಬಿಗ್ ಬಾಸ್ ಮನೆ ಜಿದ್ದಾಜಿದ್ದಿನ ಟಾಸ್ಕ್‍ಗಳು , ಅದರಲ್ಲಿನ ಜಗಳಗಳ ಟೆನ್ಷನ್ನಲ್ಲಿ ಮುಳುಗಿ ಹೋಗಿರುವಾಗ `ದಸರೆ’ ಸಂಭ್ರಮಕ್ಕೆ ಮೆರುಗು ನೀಡಲು ಮನೆಯೊಳಗೆ ಬಂದವರು ತಾರಾ ಅನೂರಾಧಾ. ಅವರ ಉಪಸ್ಥಿತಿಯಲ್ಲಿ ಮನೆಯ ಸದಸ್ಯರೆಲ್ಲ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹಾಡು, ಕುಣಿದು, ಸಂಭ್ರಮಿಸಿದ್ದರು. ತಾರಾ ಪ್ರತಿಸದಸ್ಯರನ್ನೂ ಕರೆದು ಅವರ ಶಕ್ತಿ, ಮಿತಿಗಳ ಬಗ್ಗೆ ತಿಳಿಸಿ ಸ್ಪೂರ್ತಿ ತುಂಬಿದ್ದರು.

ಭಾಗ್ಯ ತಂದ ಸುಷ್ಮಾ

ಕಲರ್ಸ್ ಕನ್ನಡದ `ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ರಾವ್ ಅವರ ಎಂಟ್ರಿ ಮನೆಮಂದಿಗೆಲ್ಲ ಒಂದು ರೀತಿಯಲ್ಲಿ ಮತ್ತಷ್ಟು ಆಶ್ಚರ್ಯ ತಂದಿತ್ತು. ಆ ಸಂದರ್ಭದಲ್ಲಿ ವರ್ತೂರು ಸಂತೋಷ್ ಆಗಷ್ಟೇ ಹುಲಿಯುಗುರಿನ ಪ್ರಕರಣ ಎದುರಿಸಿ ಮತ್ತೆ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದರು. ಮತ್ತು ಆ ತಳಮಳ ತಾಳಲಾರದೆ ಮನೆಯಿಂದ ಹೊರಗೆ ಹೋಗುವುದಾಗಿ ಹಟಹಿಡಿದು ಕೂತಿದ್ದರು. ಸುಷ್ಮಾ ಅವರ ಆಪ್ತ ಕಿವಿಮಾತುಗಳು ಅವರ ನಿರ್ಧಾರವನ್ನು ತಕ್ಷಣಕ್ಕೆ ಬದಲಿಸಲಿಲ್ಲವಾದರೂ, ಮತ್ತೆ ಆಡುವ ಉತ್ಸಾಹ ತುಂಬಿದ್ದಂತೂ ನಿಜ. ಅವರಷ್ಟೇ ಅಲ್ಲ, ತಮ್ಮ ಅತ್ಯಮೂಲ್ಯ ಸಲಹೆಗಳನ್ನು ಅವರು ಎಲ್ಲ ಸದಸ್ಯರಿಗೂ ನೀಡಿದರು.

ಬ್ರಹ್ಮಾಂಡ ಗುರುಜಿಯ ನಗೆ ಬುಗ್ಗೆ

ತಮ್ಮ ವಿಶಿಷ್ಟಮ್ಯಾನರಿಸಂ, ಮಾತಾಡುವ ಶೈಲಿಯಿಂದ ಸಾಕಷ್ಟು ಜನಪ್ರಿಯವಾಗಿರುವ ಬ್ರಹ್ಮಾಂಡ ಗುರೂ ಬಿಗ್ ಬಾಸ್ ಯೊಳಗೆ ಎಂಟ್ರಿ ಕೊಟ್ಟಾಗಲೇ ಮನರಂಜನೆ ನಿಕ್ಕಿಯಾಗಿತ್ತು ಆ ನಿರೀಕ್ಷೆಯಂತೂ ಹುಸಿಹೋಗಲಿಲ್ಲ. ಎಲ್ಲ ಸದಸ್ಯರಿಗೂ ಅಷ್ಟೇ ಏಕೆ ಬಿಗ್ ಬಾಸ್ ಅವರನ್ನು ತಮ್ಮದೇ ಸ್ಟೈಲ್‍ನಲ್ಲಿ ಗದರುತ್ತ, ಅವರು ಸದಸ್ಯರಿಗೆ ಕೊಟ್ಟ ಕಾಟ ಸಣ್ಣದಲ್ಲ. ಬಿಗ್ಬಾಸ್ ಅವರಿಗೆ ನೀಡಿದ್ದ ಟಾಸ್ಕ್ ಅನ್ನು ಸಖತ್ ಎಂಟರ್ಟೈನಿಂಗ್ ಆಗಿಯೇನಿರ್ವಹಿಸಿದರು. ಮನೆಯಿಂದ ಹೋಗುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.

ಶ್ರುತಿ ನ್ಯಾಯ ಪಂಚಾಯ್ತಿ

ಹಿರಿಯ ನಟಿ ಶ್ರುತಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು ನ್ಯಾಯ ಪಂಚಾಯ್ತಿ ನಡೆಸುವುದಕ್ಕಾಗಿ. ಕಿಚ್ಚು ಸುದೀಪ್ ಅವರ ಅನುಪಸ್ಥಿತಿಯಲ್ಲಿ ಶನಿವಾರದ ಪಂಚಾಯ್ತಿಯನ್ನು ನಡೆಸಿಕೊಡಲು ಶ್ರುತಿ ಬಂದಿದ್ದರು. ಮನೆ ಮಂದಿಗೆಲ್ಲಅಕ್ಕರೆಯ ಅಕ್ಕನಾಗಿ ಬುದ್ಧಿ ಹೇಳಿ, ತಿದ್ದಿ ತೀಡಿದ ಅವರು, ಮನೆಯೊಳಗಿನ ನ್ಯಾಯಪೀಠದಲ್ಲಿ ಕೂತು ಕೈಯಲ್ಲಿ ಸುತ್ತಿಗೆ ಹಿಡಿದು ಮನೆಯ ಸದಸ್ಯರ ನಡುವಿನ ಹಲವು ಆರೋಪ-ಪ್ರತ್ಯಾರೋಪಗಳನ್ನು ಆಲಿಸಿ ಪ್ರಕರಣಗಳನ್ನು ಬಗೆಹರಿಸಿದರು ಕೂಡ.ವಿಶೇಷವಾಗಿ ಅವರು ಮನೆಯ ಮಹಿಳಾ ಸ್ಪರ್ಧಿಗಳಲ್ಲಿ ತುಂಬಿದ ವಿಶ್ವಾಸವಂತೂ ನಂತರದ ದಿನಗಳಲ್ಲಿ ಎದ್ದು ಕಾಣುವಂಥ ಬದಲಾವಣೆಯನ್ನು ತಂದಿತ್ತು.ಶೈನ್ ಶುಭಾಜೋಷ್!

ಶೈನ್ ಶೆಟ್ಟಿ ಮತ್ತು ಶುಭಾಪೂಂಜಾ

ಶ್ರುತಿ ಬಂದು ಹೋದಮರು ದಿನದ ಭಾನುವಾರ ಮತ್ತಿಬ್ಬರು ಕಾರಿನಲ್ಲಿ ಮನೆಯೊಳಗೆ ಎಂಟ್ರಿಕೊಟ್ಟಿದ್ದರು. ಅವರು ಹಿಂದಿನ ಬಿಗ್ ಬಾಸ್ ಸೀಸನ್ ಸ್ಪರ್ಧಿಗಳಾದ ಶೈನ್ ಶೆಟ್ಟಿ ಮತ್ತು ಶುಭಾಪೂಂಜಾ. ಇಬ್ಬರೂ ತಮ್ಮ ಜೋಷ್ ಅನ್ನು, ಚುರುಕು ತನವನ್ನು ಮನೆಯ ಸದಸ್ಯರಿಗೆಲ್ಲ ಹಂಚಿದರು. ಅವರ ಜೊತೆ ಸೇರಿ ವಿಶಿಷ್ಟವಾದ ಟಾಸ್ಕ್ಗಳನ್ನುಆಡಿಸಿದರು. ಭಾನುವಾರವನ್ನು ಸಖತ್ ಕಲರ್ ಫುಲ್ ಆಗಿ ಮಾಡಿದರು.

ಸಪ್ತಮಿ ಗೌಡ ಸಾಮಾಜಿಕ ಜಾಗೃತಿ

ಬಿಗ್ ಬಾಸ್ ಎನ್ನುವುದು ಬರೀ ಮನರಂಜೆನಗೆ ಮಾತ್ರ ಸೀಮಿತವಾದದ್ದಲ್ಲ, ಸಾಮಾಜಿಕ ಜಾಗೃತಿಯೂ ಅದರ ಭಾಗ ಎನ್ನುವುದಕ್ಕೆ `ಕಾಂತಾರ’ ನಟಿ ಸಪ್ತಮಿಗೌಡ ಅವರ ಎಂಟ್ರಿಯೇ ನಿದರ್ಶನವಾಗಿತ್ತು.
ಕರ್ನಾಟದ ಸರ್ಕಾರ ವಿತರಿಸುತ್ತಿರುವ ಮುಟ್ಟಿನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅವರು ಮನೆಯ ಪುರುಷ ಮತ್ತು ಮಹಿಳಾ ಸದಸ್ಯರಿಗೆ ಈ ಬಗ್ಗೆ ಕೇಳಿದ ಪ್ರಶ್ನೆಗಳು ವಿಚಾರ ಪ್ರಚೋದಕವಾಗಿದ್ದವು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಂತಿದ್ದವು.

ಗುರೂಜಿ ಭವಿಷ್ಯವಾಣಿ

ಶ್ರೀವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನ ಇಡೀ ಮನೆಯೊಳಗೆ ದೈವೀಕ ಕಳೆ ತುಂಬಿದ್ದು ಸುಳ್ಳಲ್ಲ. ಮನೆಯೊಳಗೆ ಆಗಮಿಸಿ ಪೂಜೆ ನಡೆಸಿದ ಅವರು ಪ್ರತಿಯೊಬ್ಬ ಸದಸ್ಯರಿಗೂ ಭವಿಷ್ಯವನ್ನೂ ಹೇಳಿದರು. ಅವರ ಮಾತುಗಳು ಹಲವು ಸ್ಪರ್ಧಿಗಳಲ್ಲಿ ಸ್ಫೂರ್ತಿ ತುಂಬಿತ್ತು. ಹಾಗೆಯೇ ಪ್ರತಾಪ್ ಅವರ ಕಳವಳವನ್ನೂ ಹೆಚ್ಚಿಸಿತ್ತು. ಒಟ್ಟಾರೆ ಬಿಗ್ ಬಾಸ್ ವೇದಿಕೆಗೊಂದು ದೈವೀಕ ಪ್ರಭಾವಳಿಯನ್ನು ಅವರು ತುಂಬಿದರು ಎಂದರೆ ತಪ್ಪಾಗಲಿಕ್ಕಿಲ್ಲ.

ಬಿಗ್ ಬಾಸ್ ಕನ್ನಡ ಸೀಸನ್ 10 ರ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಅನ್ನು ಒದಗಿಸುವ ಜಿಯೋ ಸಿನೆಮಾದಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ ಆಕರ್ಷಕ ಫಿನಾಲೆಯನ್ನು ತಪ್ಪಿಸಿಕೊಳ್ಳಬೇಡಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin