"Manada Kadalu" team ready to float in "mungaru Male" at Maja Talkies

ಮಜಾ ಟಾಕೀಸ್‍ನಲ್ಲಿ “ಮುಂಗಾರು ಮಳೆ”ಯಲ್ಲಿ ತೇಲಲು ಸಜ್ಜಾದ “ಮನದ ಕಡಲು” ಚಿತ್ರ ತಂಡ - CineNewsKannada.com

ಮಜಾ ಟಾಕೀಸ್‍ನಲ್ಲಿ “ಮುಂಗಾರು ಮಳೆ”ಯಲ್ಲಿ ತೇಲಲು ಸಜ್ಜಾದ “ಮನದ ಕಡಲು” ಚಿತ್ರ ತಂಡ

ನಿರ್ದೇಶಕ ಯೋಗರಾಜ್ ಭಟ್ ಕಳೆದ 18 ವರ್ಷಗಳ ಹಿಂದೆ ‘ಮುಂಗಾರು ಮಳೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಠಿ ಮಾಡಿದ್ದರು. ಜೊತೆಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಹಣ ಗಳಿಕೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಇದೀಗ ಮುಂಗಾರು ಮಳೆಯ ನಿರ್ಮಾಪಕ ಇ.ಕೃಷ್ಣಪ್ಪ ಜೊತೆಗೂಡಿ ಮತ್ತೊಮ್ಮೆ “ಮನದ ಕಡಲು” ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ಚಿತ್ರ ಬಿಡುಗಡೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಮುಂಗಾರು ಮಳೆಯೊಂದಿಗೆ ಮನದ ಕಡಲು ಜೊತೆಗೆ ಮಜಾ ಟಾಕೀಸ್ ಸೇರಿಕೊಂಡಿದೆ, ಇದೇ ಶನಿವಾರ ಕಿರುತೆರೆಯ ವೀಕ್ಷಕರಿಗೆ ಯುಗಾದಿ ಹಬ್ಬದ ಮುನ್ನಾ ದಿನ ನಗುವಿನ ಮೃಷ್ಠಾನ ಭೋಜನ ಉಣಬಡಿಸಲು ತಂಡ ಸಿದ್ದವಾಗಿದೆ

ಮನರಂಜನೆಯ ಮಹಾ ಸಮ್ಮಿಲನ ಯುಗಾದಿ ಹಬ್ಬದ ‘ಸ್ಪೆಷಲ್” ಆಗಿದ್ದು, ಶನಿವಾರ ರಾತ್ರಿ 7:30 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮೂರು ಗಂಟೆಗಳ ಈ ‘ಮಹಾ ಸಂಚಿಕೆ’ ಮನೆಮಂದಿಗೆ ಮನರಂಜನೆಯ ಮಳೆಯನ್ನೇ ಹರಿಸಲಿದೆ.

‘ಮನದ ಕಡಲು’ ಚಿತ್ರದ ಕಲಾವಿದರಾದ ಸುಮುಖ್, ಅಂಜಲಿ ಅನೀಶ್, ರಿಷಿಕಾ ಶೆಟ್ಟಿಯವರು ‘ಮುಂಗಾರು ಮಳೆ’ಯ ಪೂಜಾ ಗಾಂಧಿ, ದಿಗಂತ್, ನೀನಾಸಂ ಅಶ್ವಥ್, ಸುಧಾ ಬೆಳವಾಡಿ, ಪದ್ಮಜಾ ರಾವ್, ಸಂಚಿತಾ ಶೆಟ್ಟಿಯವರು ಈ ಮಹಾ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.

ಎರಡೂ ಚಿತ್ರಗಳಲ್ಲಿ ತಮ್ಮ ಅಭಿನಯದ ಕಾಣಿಕೆ ನೀಡಿರುವ ‘ರಸಮಯ ಚಕ್ರವರ್ತಿ’ ರಂಗಾಯಣ ರಘು, ನಿರ್ಮಾಪಕ ಈ ಕೃಷ್ಣಪ್ಪ, ಎಕ್ಸೆಕ್ಯುಟಿವ್ ಪ್ರೊಡ್ಯೂಸರ್ ಗಂಗಾಧರ್ ಈ ಮಹಾ ಸಂಚಿಕೆಯಲ್ಲಿರುವುದು ವಿಶೇಷ. ಎರಡೂ ಚಿತ್ರಗಳ ಸೂತ್ರಧಾರ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಎಂದಿನ ಪಂಚ್ ರಂಗಿ ಮಾತುಗಳಿಂದ ಇಡೀ ಕಾರ್ಯಕ್ರಮ ಆನಂದದ ಕಡಲಾಗುವಂತೆ ನೋಡಿಕೊಂಡಿದ್ದಾರೆ.

ಕನ್ನಡದ ಯೋಗ ಬದಲಾದದ್ದು ಮನದ ಕಡಲಾದದ್ದು ಕಂಡದ್ದು ಕಾಣದ್ದು ಎಲ್ಲವೂ ಇಲ್ಲಿ ಜೋಗದ ಜಲಪಾತದಂತೆ ಹರಿದು ಬಂದಿದೆ. ‘ಏನು ನಿನ್ನ ಹನಿಗಳ ಲೀಲೆ’ ಎಂದ ಕವಿ ಯೋಗರಾಜರಿಂದ ‘ಹನಿ ಹನಿ ಪ್ರೇಮ್ ಕಹಾನಿ’ ಇಲ್ಲಿ ತೆರೆದುಕೊಳ್ಳಲಿದೆ. ಅವರ ಯೋಗಾಯೋಗವನ್ನು ತಮ್ಮ ಸೃಜನಶೀಲತೆಯೊಂದಿಗೆ ಎಂದಿನಂತೆ ನಡೆಸಿಕೊಂಡು ಹೋಗಿರುವುದು ‘ಮಜಾ ಟಾಕೀಸ್’ನ ರೂವಾರಿ ಸೃಜನ್.

‘ರಸಮಯ ಚಕ್ರವರ್ತಿ’ ರಂಗಾಯಣ ರಘು ಈ ಎರಡು ಚಿತ್ರಗಳ ರಸಮಯ ಕ್ಷಣಗಳನ್ನು ಹಂಚಿಕೊಂಡಿರುವುದು ಮಜಾ ಟಾಕೀಸ್ ನ ಮಹಾ ಸಂಚಿಕೆಯ ಹೈಲೈಟ್. ಒಬ್ಬ ಕಲಾವಿದನಾಗಿ ತಮ್ಮ ಸುತ್ತಮುತ್ತಲಿನ ಜಗತ್ತನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನುವುದನ್ನು ಇಲ್ಲಿ ಯೋಗರಾಜ್ ಭಟ್ ರಸವತ್ತಾಗಿ ವಿವರಿಸಿದ್ದಾರೆ.

ಹಾಗೆಯೇ ಮಿಮಿಕ್ರಿ ಗೋಪಿ ರಂಗಾಯಣ ರಘು ಅವರನ್ನು ಮಿಮಿಕ್ ಮಾಡಿ ಅವರಿಂದ ಶಭಾಷ್ ಗಿರಿ ಪಡೆದಿರುವುದು, ಗೋಪಿಯವರು ನಟ ದತ್ತಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದನಿಯನ್ನು ಅನುಕರಣೆ ಮಾಡಿ ಹಾಸ್ಯದ ಹೊನಲನ್ನು ಹರಿಸಿರುವುದು ಮಜವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin