ಜಗತ್ತನ್ನು ಗೆಲ್ಲಲು ಬರುತ್ತಿದ್ದಾಳೆ “ಶಾರದೆ” : ಮಾರ್ಚ್ 17ರಿಂದ ಆರಂಭ

ಒಬ್ಬಂಟಿಯಾಗಿ ಹೋರಾಡುತ್ತಾ ಜಗತ್ತನ್ನು ಗೆಲ್ಲುವ ವಿಶ್ವಾಸದೊಂದಿಗೆ “ಶಾರದೆ” ಬರ್ತಾ ಇದ್ದಾಳೆ. ಅದು ಮಾರ್ಚ್ 17 ರಿಂದ ಸಂಜೆ 6.30ಕ್ಕೆ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ.

ಧಾರಾವಾಹಿಯಲ್ಲಿ ಅನುಭವಿ ಕಲಾವಿದರ ದಂಡೇ ಇದೆ. ನಾಯಕಿಯಾಗಿ ಚೈತ್ರ ಸಕ್ಕರಿ, ನಾಯಕನಾಗಿ ಸೂರಜ್ ಹೊಳಲು ಹಾಗೂ ಮುಖ್ಯ ಪಾತ್ರದಲ್ಲಿ ದಿವ್ಯ ಸುರೇಶ್, ಸ್ವಾತಿ, ಅನಂತವೇಲು, ಅಂಬುಜಾ, ರಾಜೇಶ್ ಧ್ರುವ ಸೇರಿದಂತೆ ಇನ್ನು ಅನೇಕರು ಅಭಿನಯಿಸುತ್ತಿದ್ದಾರೆ.

ಪುರಾಣಿಕ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಧಾರಾವಾಹಿಯನ್ನು ಸುನಿಲ್ ಪುರಾಣಿಕ್ ಹಾಗು ಸಾಗರ್ ಪುರಾಣಿಕ್ ನಿರ್ಮಿಸುತ್ತಿದ್ದು, ಧರಣಿ ಜಿ ರಮೇಶ್ ನಿರ್ದೇಶಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ ‘ಶಾರದೆ’ ಧಾರಾವಾಹಿಗೆ ಸಂಗೀತ ಸಂಯೋಜಿಸಿದ್ದು, ನಿರ್ದೇಶಕ ಪವನ್ ಒಡೆಯರ್ ಬರೆದಿರುವ ಸಾಹಿತ್ಯಕ್ಕೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ.

ಜಗತ್ತಿನ ಎಲ್ಲಾ ಪ್ರೀತಿಯನ್ನು ಧಾರೆಯೆರೆಯೋ ನಿಷ್ಕಲ್ಮಶ ಜೀವ ಅಂದ್ರೆ ಅದು ‘ಅಮ್ಮ’. ಈ ಕಥೆಯಲ್ಲೂ ಅಷ್ಟೇ ನಾಯಕಿ ಶಾರದಾ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಯಾರೋ ಮಾಡಿದ ಕುತಂತ್ರದಿಂದ ಬಡತನದಲ್ಲಿ ಬೆಳೆದಿರುತ್ತಾಳೆ. ಗಂಡ ಮಾಡಿದ ಮೋಸದಿಂದಾಗಿ ಎಷ್ಟೇ ನೋವಿದ್ದರೂ ಈಕೆ ತನ್ನ ಮಗಳಿಗಾಗಿ ಹೋರಾಡುತ್ತಾ ಜೀವನ ನಡೆಸುತ್ತಿರ್ತಾಳೆ. ಇನ್ನೊಂದೆಡೆ ಕೂಡು ಕುಟುಂಬದಲ್ಲಿ ಬೆಳೆದಿರೋ ನಾಯಕ ಸಿದ್ದಾರ್ಥ್, ಇಷ್ಟವಿಲ್ಲದಿದ್ದರೂ ಅತ್ತೆ ಮಗಳಾದ ಜ್ಯೋತಿಕಾಳ ಜೊತೆ ಮದುವೆಯಾಗಲು ತಯಾರಾಗಿರ್ತಾನೆ.
ಆದರೆ ಈ ಮನೆಗೆ ಮನೆಕೆಲಸದವಳಾಗಿ ಬರೋ ಶಾರದಾಳ ಬದುಕಲ್ಲಿ ಮುಂದೆ ಏನೆಲ್ಲಾ ತಿರುವುಗಳು ಬರಲಿದೆ ಕಷ್ಟ, ನೋವು, ಅವಮಾನಗಳನ್ನೇ ಎದುರಿಸುತ್ತಾ ಬಂದಿರೋ ಶಾರದೆಗೆ ತನ್ನ ಜನ್ಮರಹಸ್ಯದ ಬಗ್ಗೆ ತಿಳಿಯುತ್ತಾ? ಒಬ್ಬಂಟಿಯಾಗಿ ಬದುಕುತ್ತಿರೋ ಶಾರದೆಯ ಬಾಳಲ್ಲಿ ಪ್ರೀತಿಯ ಹೂ ಚಿಗುರಲಿದೆಯಾ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಸದಾ ಹೊಸತನಕ್ಕಾಗಿ ತುಡಿಯುವ ಸ್ಟಾರ್ ಸುವರ್ಣದಲ್ಲಿ ಸಹನೆಯ ಸಾರಥಿಯಾಗಿ, ಮಮತೆಯ ಮಡಿಲಾಗಿ ನಿಮ್ಮ ಮನೆ ಮನೆಗೆ ಬರ್ತಿದ್ದಾಳೆ ‘ಶಾರದೆ’ ಇದೇ ಸೋಮವಾರದಿಂದ ಪ್ರತಿದಿನ ಸಂಜೆ 6.30ಕ್ಕೆ ಮೂಡಿಬರಲಿದೆ.