ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್: ಕುತೂಹಲ ಹೆಚ್ಚಿಸಿದ “ಪಿನಾಕ’ ಟೈಟಲ್ ಟೀಸರ್
” ಕೃಷ್ಣಂ ಪ್ರಣಯ ಸಖಿ” ಯಶಸ್ಸಿನ ಮೂಲಕ ಗೆಲುವಿನ ಟ್ರಾಕ್‍ಗೆ ಬಂದಿರುವ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ವಿಭಿನ್ನ ಅವತಾರದಲ್ಲಿ ಸಿನಿ ರಸಿಕರನ್ನು ರಂಜಿಸಲು ಮುಂದಾಗಿದ್ದಾರೆ.

ಕೈಯಲ್ಲಿ ತ್ರಿಶೂಲ ಹಿಡಿದು, ಹಣೆಯಲ್ಲಿ ವಿಭೂತಿ,ತಿಲಕನೊಂದಿಗೆ ತಲೆಬುರುಡೆಗಳನ್ನು ಸಿಂಹಾಸನ ಮಾಡಿಕೊಂಡು ಕುಳಿತಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ “ಪಿನಾಕ” ಎಂದು ಹೆಸರಿಡಲಾಗಿದೆ. ಪಿನಾಕ ಎಂದರೆ ತ್ರಿಶೂಲ ಎಂದರ್ಥ.
ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ 48 ಚಿತ್ರಗಳನ್ನು ನಿರ್ಮಿಸಿರುವ ಟಿ.ಜಿ.ವಿಶ್ವಪ್ರಸಾದ್ ನಿರ್ಮಾಣ ಮಾಡುತ್ತಿರುವ 49 ನೇ ಚಿತ್ರವಿದು. ನೃತ್ಯ ನಿರ್ದೇಶಕನಾಗಿ ಜನಪ್ರಿಯರಾಗಿರುವ ಧನಂಜಯ ಮೊದಲ ಬಾರಿಗೆ “ಪಿನಾಕ” ಚಿತ್ರ ನಿರ್ದೇಶನ ಮಾಡುವ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕ್ಷುದ್ರ ಮತ್ತು ರುದ್ರನ ಅವತಾರದಲ್ಲಿ ಗಣೇಶ್ ಇವರೆಗೂ ಯಾವ ಚಿತ್ರದಲ್ಲೂ ಕಾಣಿಸದ ಪಾತ್ರದಲ್ಲಿ ಚಿತ್ರದಲ್ಲಿ ನಟ ಗಣೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಟೈಟಲ್ ಟೀಸರ್‍ನಲ್ಲಿ ಮೈನವಿರೇಳಿಸುವ ದೃಶ್ಯಗಳಿದ್ದು, ಹಿನ್ನೆಲೆ ಸಂಗೀತ ಕೂಡ ಮೋಡಿ ಮಾಡಿದೆ. ಗಣೇಶ್ ವೃತ್ತಿ ಜೀವನಕ್ಕೆ ಹೊಸ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣಿಸಿದ್ದು ಮತ್ತೊಂದು ಹಿಟ್ ಚಿತ್ರ ನೀಡುವ ನಿರೀಕ್ಷೆ ಹುಟ್ಟಿಸಿದೆ.

ಈ ವೇಳೆ ಮಾತನಾಡಿ ನಾಯಕ ಗಣೇಶ್, ಸಾಮಾನ್ಯವಾಗಿ ಎಲ್ಲರೂ ತಮ್ಮ ಚಿತ್ರದ ಬಗ್ಗೆ ಹೇಳುವಾಗ ಡಿಫರೆಂಟಾಗಿ ಮಾಡಿದ್ದೇವೆ ಅಂತ ಹೇಳುತ್ತಾರೆ. ಆದರೆ ನಾವು ನಿಜವಾಗಲೂ ಡಿಫರೆಂಟ್ ಆಗಿ ಮಾಡಿದ್ದೇವೆ . “ಹುಡುಗಾಟ” ಚಿತ್ರದಿಂದ ಧನಂಜಯ ಅವರನ್ನು ಬಲ್ಲೆ. ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಧನಂಜಯ, ನಿರ್ಮಾಪಕರ ಸಹೋದರಿ ವಿಜಯ ಹಾಗೂ ಅವರ ತಂಡದವರು ಕಳೆದ ಒಂದು ವರ್ಷದಿಂದ ಅಡ್ವೆಂಚರ್, ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಒಂದೊಳ್ಳೆ ಕಥೆಯನ್ನು ಮಾಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಈಗ ಕಥೆಯಷ್ಟೇ ಚಂದದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ. ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶ ನೀಡಿದ್ದು. “ಮುಂಗಾರು ಮಳೆ” ಚಿತ್ರದ ನಂತರ ರೊಮ್ಯಾಂಟಿಕ್ ಹೀರೋ ಆಗಿಯೇ ನೋಡಲು ಅಭಿಮಾನಿಗಳು ಬಯಸಿದರು.ಈ ಚಿತ್ರದಿಂದ ಹಿಂದಿನ ಜಾನರನ್ನು ಬದಲಿಸಿಕೊಂಡಿದ್ದೇನೆ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ “ಪಿನಾಕ” ಮೂಡಿ ಬರಲಿದೆ ಎಂದರು.

ನಿರ್ದೇಶಕ ಬಿ ಧನಂಜಯ್ ಮಾತನಾಡಿ, ಚಿಕ್ಕವಯಸ್ಸಿನಲ್ಲೇ ಅಸಿಸ್ಟೆಂಟ್ ಡ್ಯಾನ್ಸ್ ಮಾಸ್ಟರ್ ಆಗಿ ಹತ್ತುಸಾವಿರಕ್ಕೂ ಅಧಿಕ ಹಾಡುಗಳಿಗೆ ಹಾಗೂ ಸ್ವತಂತ್ರ ನೃತ್ಯ ನಿರ್ದೇಶಕನಾಗಿ 500 ಕ್ಕೂ ಅಧಿಕ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ.ಪಿರಿಯಾಡಿಕ್ ಡ್ರಾಮಾ ಹಿನ್ನೆಲೆಯಲ್ಲಿ ಮಾಟ ಮಂತ್ರದ ಎಳೆಯ ಮೂಲಕ ಪ್ರೇಕ್ಷಕನ ಮುಂದೆ ಹೊಸ ಥರದ ಕಥೆ ತಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಟೈಟಲ್ ಟೀಸರ್ ಮೇಕಿಂಗ್ ಮೂಲಕವೇ ಸದ್ದು ಮಾಡುತ್ತಿದೆ. “ಪಿನಾಕ” ಸಿನಿಮಾ, ಅದ್ಭುತ ವಿಎಫ್ ಎಕ್ಸ್ ಮತ್ತು ದೃಶ್ಯಗಳ ಮೂಲಕ ಕನ್ನಡ ಚಿತ್ರರಂಗಕ್ಕೂ ಹೊಸತನವನ್ನು ಪರಿಚಯಿಸುತ್ತದೆ ಎಂದರು.
ನಿರ್ಮಾಪಕ ಟಿ.ಜಿ.ವಿಶ್ವ ಮಾತನಾಡಿ ಈ ಹಿಂದೆ ಕನ್ನಡದಲ್ಲಿ “ಅಧ್ಯಕ್ಷ ಇನ್ ಅಮೇರಿಕಾ” ಹಾಗೂ “ಆದ್ಯ” ಚಿತ್ರಗಳನ್ನು ನಿರ್ಮಾಣ ಮಾಡಿದ್ದೆವು. ಧನಂಜಯ ಹಾಗೂ ತಂಡದವರು ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಗಣೇಶ್ ಜೊತೆಗೆ ಸಿನಿಮಾ ಮಾಡುತ್ತಿರುವುದು ಖುಷಿಯಾಗಿದೆ. ಈ ವರ್ಷ ಶ್ರೀಮುರಳಿ, ಶಿವರಾಜಕುಮಾರ್, ಧ್ರುವಸರ್ಜಾ ಅವರ ಸಿನಿಮಾಗಳನ್ನು ನಿರ್ಮಾಣ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ತಿಳಿಸಿದರು.

ನಿರ್ಮಾಪಕಿ ವಂದನ, ನಿರ್ದೇಶಕರೊಂದಿಗೆ ಕಥೆ ಬರೆದಿರುವ ವಿಜಯ ಸಹ “ಪಿನಾಕ” ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಮುಂತಾದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು. ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭವಗಲಿದೆ.

