Review: ವಿಭಿನ್ನ ಪ್ರಯತ್ನದ ಪ್ರಯೋಗಾತ್ಮಕ ಚಿತ್ರ “ಸೀಸಕಡ್ಡಿ”
ಚಿತ್ರ: ಸೀಸಕಡ್ಡಿ
ನಿರ್ದೇಶನ: ರತನ್ ಗಂಗಾಧರ್
ನಿರ್ಮಾಣ: ಗ್ರಹಣ ಪ್ರೊಡಕ್ಷನ್
ತಾರಾಗಣ: ನಿತಿನ್ ಅಪ್ಪಯ್ಯ, ಬಿ,ಎಸ್ ರಾಮಮೂರ್ತಿ,ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನೂಷ್ಕಾ ಟಕ್ಕಲಕಿ, ಸಂಜಯ್ ಗೌಡ, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ,ರಾಘವೇಂದ್ರ ಭಟ್, ನಾಗರಾಜ್ ರಾವ್ ಮತ್ತಿತರರು
ರೇಟಿಂಗ್: *** 3.5/5
ಕನ್ನಡದಲ್ಲಿ ಇತ್ತೀಚೆಗೆ ತೀರಾ ವಿಭಿನ್ನ ಬಗೆಯ ಸಿನಿಮಾಗಳು ತೆರೆ ಮೇಲೆ ಬರುತ್ತಿವೆ. ಅದರಲ್ಲಿ ಬಹುತೇಕ ಹೊಸಬರು ಮತ್ತು ಪ್ರತಿಭಾನ್ವಿತರ ಚಿತ್ರಗಳು ಎನ್ನುವುದು ಮತ್ತೊಂದು ಹೆಗ್ಗಳಿಕೆಯ ವಿಷಯ. ಇದೀಗ ಈ ಸಾಲಿಗೆ ಅಂತಹುದೇ ಮತ್ತೊಂದು ಚಿತ್ರ “ ಸೀಸಕಡ್ಡಿ”.
ಸೀಸಕಡ್ಡಿ ಯಾರಿಗೆ ಗೊತ್ತಿಲ್ಲ ಹೇಳಿ, ಸೀಸಕಡ್ಡಿ ಎಂದರೆ ಪೆನ್ಸಿಲ್, ಈ ವಿಷಯವನ್ನು ಮುಂದಿಟ್ಟುಕೊಂಡು ನಿರ್ದೇಶಕ ರತನ್ ಗಂಗಾಧರ್, ಸೀಸಕಡ್ಡಿಯ ಮೇಲಿನ ಮರದ ತೊಗಟೆಯಾದ ಅದರೊಳಗಿನ ತಿರುಳಾಗೋಣ ಎನ್ನುವುದನ್ನು ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಕರಾವಳಿ, ಬಯಲುಸೀಮೆ, ಗಡಿಭಾಗ, ಉತ್ತರ ಕರ್ನಾಟಕ, ನಗರ ಪ್ರದೇಶ ಹೀಗೆ ಒಂದೇ ಚಿತ್ರದಲ್ಲಿ ಹಲವು ವಿಷಯ ಮತ್ತು ಭಾಷೆಯನ್ನು ಅದೇ ಸೊಗಡಿನಲ್ಲಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಒದೊಂದು ಕಥೆಯಲ್ಲಿಯೂ ಸಂದೇಶ ಮತ್ತು ತಿರಳನ್ನು ಪ್ರಸ್ತುತಪಡಿಸಿ ಆ ಮೂಲಕ ಸಮಾಜಕ್ಕೊಂದು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.
ಒಂದೇ ಚಿತ್ರದಲ್ಲಿ ಇಷ್ಟೊಂದು ಬಗೆಯ ಪ್ರಯತ್ನ ಮಾಡಲು ಧೈರ್ಯಬೇಕು, ಜೊತೆಗೆ ಅಂದುಕೊಂಡ ವಿಷಯವನ್ನು ಪ್ರೇಕ್ಷಕರಿಗೆ ಯಾವುದೇ ಬೇಸರ ಅಥವಾ ಬೋರ್ ಆಗದಂತೆ ತೆರೆಗೆ ಕಟ್ಟಿಕೊಡುವುದು ಇನ್ನೂ ಸವಾಲಿನ ಕೆಲಸ, ಆ ಕೆಲಸವನ್ನು ನಿರ್ದೇಶಕ ರತನ್ ಗಂಗಾಧರ್ ಅವರ ತಂಡ ಮಾಡುವಲ್ಲಿ ಯಶಸ್ಸು ಕಂಡಿದೆ. ಈ ಮೂಲಕ ವಿಭಿನ್ನ ಪ್ರಯತ್ನದ ಪ್ರಯೋಗಾತ್ಮಕ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ಧಾರೆ.
ಮತ್ತೊಂದು ವಿಷಯವನ್ನು ಚಿತ್ರದ ಮೂಲಕ ಸಿನಿಮಾ ಪ್ರೇಕ್ಷಕರಿಗಷ್ಟೇ ಅಲ್ಲ ಕನ್ನಡ ಚಿತ್ರರಂಗ, ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಚಿತ್ರ ನೋಡಿ ಅದು ಇಷ್ಟವಾದರೆ ಅದರ ಬೆಲೆಯನ್ನು ಪ್ರೇಕ್ಷಕರೇ ನಿಗಧಿ ಮಾಡುವಂತಹುದು. ಇದನ್ನು ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ತೌಫಿಕ್ ಎನ್ನುವ ಪಾತ್ರದ ಮೂಲಕ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕ ಚಿತ್ರದ ಬೆಲೆ ಎಷ್ಟು ಎನ್ನುವುದನ್ನು ಚಿತ್ರ ನೋಡಿದ ಮೇಲೆ ಆತನೇ ನಿರ್ಧರಿಸಿದರೆ ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಬಹುದು. ಇಂತಹದೊಂದು ಚಿಂತನೆಗೆ ಅಡಿಪಾಯ ಹಾಕಿಕೊಟ್ಟಿದೆ ಸೀಸಕಡ್ಡಿ ಚಿತ್ರತಂಡ.
ಇನ್ನೂ ಸಿನಿಮಾ ನಿರ್ದೇಶನ ಮಾಡುವ ಕನಸು ಹೊತ್ತ ಯುವಕ, ಅಮ್ಮನ್ನು ಕಳೆದುಕೊಂಡು ಅಪ್ಪನನ್ನು ನೋಡಿಕೊಳ್ಳುವ ಮುಗ್ದ ಬಾಲಕಿ, ಅಮ್ಮನ ಪ್ರೀತಿ ಬದಿಗೊತ್ತಿ ಫೋಟೋ ತೆಗೆಯುವುದು ಪುಸ್ತಕ ಬರೆಯವ ಹವ್ಯಾಸ ಹೊಂದಿದ ಹುಡುಗ, ಹೆಸರಲ್ಲೇನಿದೆ ಅದು ತಾವು ಮಾಡುವ ಕೆಲಸ ಮತ್ತು ಸಾಧನೆಯಿಂದ ಬರಬೇಕು ಎನ್ನುವುದನ್ನು ನಿರೂಪಿಸಲು ಹೆಸರೇ ಇಲ್ಲದ ಹುಡುಗಿಯ ಸಂಗೀತ ಸಾಧನೆ, ಹಳ್ಳಿಯಲ್ಲಿ ಹೋಟೆಲ್ ಇಟ್ಟುಕೊಂಡ ಅಲ್ಲಿ ವ್ಯಾಪಾರ ಆಗದೆ ಅದನ್ನು ಮುಚ್ಚುವ ಹಂತದಲ್ಲಿ ಮಾಲೀಕನ ಪ್ರಯತ್ನಗಳು,ಆತನ ಮಗನ ಕೈ ಬರಹ ಕಲೆ ಮೆಚ್ಚಿ ಆತನ್ನು ಪ್ರೋತ್ಸಾಹಿಸುವ ಶಿಕ್ಷಕ, ಹೀಗೆ ಹಲವು ವಿಷಯಗಳನ್ನು ಒಂದೇ ಫ್ರೇಮ್‍ನಲ್ಲಿ ಕಟ್ಟಿಕೊಡುವ ಮೂಲಕ ಒಂದೇ ಚಿತ್ರದಲ್ಲಿ ಹಲವು ಚಿತ್ರ ತೋರಿಸಿದ್ದಾರೆ. ಎಲ್ಲ ಕಥೆಗಳಿಗೂ ಒಂದು ತಾರ್ಕಿಕ ಅಂತ್ಯ ನೀಡುವ ಮೂಲಕ ಸಮಾಜಮುಖಿಯಾಗಿಸಿದ್ದಾರೆ.
ಚಿತ್ರದ ಮೂಲಕ ಮಕ್ಕಳ ಮೂಲಕ ಹಲವು ವಿಷಯಗಳನ್ನು ಮನವರಿಕೆ ಮಾಡಿಕೊಡಲಾಗಿದೆ. ಚಿತ್ರದಲ್ಲಿ ನಟಿಸಿರುವ ತಿನ್ ಅಪ್ಪಯ್ಯ, ಬಿ,ಎಸ್ ರಾಮಮೂರ್ತಿ,ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನೂಷ್ಕಾ ಟಕ್ಕಲಕಿ, ಸಂಜಯ್ ಗೌಡ, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ,ರಾಘವೇಂದ್ರ ಭಟ್, ನಾಗರಾಜ್ ರಾವ್ ಸೇರಿದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.
ಸೀಸಕಡ್ಡಿ ಕನ್ನಡದಲ್ಲಿ ಹೊಸದೊಂದು ಬಗೆಯ ವಿನೂತನ ಚಿತ್ರ ಎಂದರೆ ತಪ್ಪಾಗಲಾರದು.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

