ಮೆಜೆಸ್ಟಿಕ್-2 ಚಿತ್ರಕ್ಕೆ ಯು/ಎ ಪ್ರಮಾಣಪತ್ರ” ಬಿಡುಗಡೆಗೆ ಸಜ್ಜು
ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ನಿರ್ಮಿಸಿರುವ ಮೆಜೆಸ್ಟಿಕ್-2 ಚಿತ್ರಕ್ಕೆ “ಯು/ಎ ಪ್ರಮಾಣಪತ್ರ ಸಿಕ್ಕಿದೆ, ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಕುಮಾರ್ -ಸಂಹಿಂತಾ ವಿನ್ಯಾ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯನಟಿ ಶೃತಿ ನಾಯಕನ ತಾಯಿ ಪಾತ್ರ ನಿಭಾಯಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ನವಂಬರ್ನಲ್ಲಿ ತೆರೆಗೆ ಬರಲಿದೆ

ಚಿತ್ರಕ್ಕೆ ರಾಮು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ಮೆಜೆಸ್ಟಿಕ್-2 ಚಿತ್ರದಲ್ಲಿ ನಿರ್ದೇಶಕ ರಾಮು ಹೇಳಹೊರಟಿದ್ದಾರೆ.
ಚಿತ್ರಕ್ಕೆ ಬೆಂಗಳೂರಿನ ಮೆಜಸ್ಟಿಕ್, ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಅಲ್ಲದೆ ಚಿತ್ರದುರ್ಗದ ಮರುಘಾ ಮಠ ಸೇರಿದಂತೆ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ವಿಶೇಷವಾಗಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹೀರೋ ಇಂಟ್ರಡಕ್ಷನ್ ಸಾಂಗನ್ನು ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದಲ್ಲಿ 5 ಹಾಡುಗಳಿದ್ದು, ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ್ ಆಗಿ ವಿಜಯಕುಮಾರ್, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಕೆಲಸ ಮಾಡಿದ್ದಾರೆ.

