ಆನ್‍ಲೈನ್ ಗೇಮ್ ಕುರಿತ ಚಿತ್ರ “ರಮ್ಮಿ ಆಟ
ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್, ಇಂಟರ್‍ನೆಟ್ ಇರುತ್ತದೆ. ಮನರಂಜನೆಗಾಗಿ ಆಡುವ ಆನ್‍ಲೈನ್ ಗೇಮ್ ಕೆಲವರ ಜೀವನವನ್ನೇ ಸರ್ವನಾಶ ಮಾಡುತ್ತಿದೆ. “ರಮ್ಮಿ ಆಟ” ಇತ್ತೀಚೆಗೆ ತುಂಬಾ ಫೇಮಸ್ ಆಗಿದೆ. ಇದಕ್ಕೆ ಒಮ್ಮೆ ಅಡಿಕ್ಟ್ ಆದಮೇಲೆ ಅದನ್ನು ಬಿಡಲು ಸಾಧ್ಯವೇ ಆಗದು.
ಈ ಆಟ ಆಡುವುದರಿಂದ ಕೆಲವೊಮ್ಮೆ ತುಂಬಾಲಾಭ ಆಗಬಹುದು. ಜೊತೆಗೆ ಕೆಟ್ಟದ್ದೂ ಆಗಬಹುದು. ಈಆಟಕ್ಕೆ ಸರಕಾರವೇ ಅನುಮತಿ ನೀಡಿದೆ. ಸೆಲೆಬ್ರಿಟಿಗಳು ಇದರ ಜಾಹೀರಾತು ಮಾಡುವುದರಿಂದ ಅಭಿಮಾನಿಗಳೂ ಅದನ್ನೇ ಅನುಸರಿಸುತ್ತಾರೆ. ಈಗಿನ ಕಾಲದಲ್ಲಿ ಆನ್ ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ತೊಂದರೆಗಳಾಗುತ್ತವೆ, ಜನ ಯಾವ ರೀತಿ ಮೋಸ ಹೋಗುತ್ತಾರೆ. ಈ ಆಟದಿಂದ ಏನೆಲ್ಲ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು “ರಮ್ಮಿ ಆಟ” ಎಂಬ ಚಿತ್ರಕ್ಕೆ ಉಮರ್ ಷರೀಫ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ಚಿತ್ರದ ನಿರ್ಮಾಣ ಸಹ ಮಾಡಿದ್ದಾರೆ.
ಒಂದಷ್ಟು ಡ್ರಾಮಾ ಕಥೆ ಬರೆದು ನಿರ್ದೇಶನ ಮಾಡಿರುವ ಉಮರ್ ಪರೀಫ್ ಅವರ ನಿರ್ದೇಶನದ ಮೊದಲ ಚಿತ್ರವಿದು. ಈಗಾಗಲೇ ತನ್ನ ಶೂಟಿಂಗ್, ಪೋಸ್ಟ್ ಪ್ರೋಡಕ್ಷನ್ಸ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಸಿದ್ದತೆ ನಡೆದಿದ್ದು, ನೆರಳು ಮೀಡಿಯಾ ಥ್ರೂ ಲಿಖಿತ್ ಫಿಲಂಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ.
ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ನಲ್ಲಿ ಭಾಗವಹಿಸಿ ಪ್ರಶಂಸೆ ಸಹ ಪಡೆದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರ ನಡೆಸಲಾಗಿದೆ. ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
ನಿರೂಪಕ ರಾಘವ ಸೂರ್ಯ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿನ್ಯಾ ಶೆಟ್ಟಿ, ಸ್ನೇಹರಾವ್, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ನೋಹನ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.