ನಟ ವಿವೇಕ್ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಚಿತ್ರ ಸೆಪ್ಟೆಂಬರ್‍ನಲ್ಲಿ ತೆರೆಗೆ
ವಿವೇಕ್ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಚಿತ್ರ ಸೆನ್ಸಾರ್ ಅಡೆತಡೆ ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಮನೋಜ್ ಅಣ್ಣಯ್ಯ ನಿರ್ದೇಶನದಲ್ಲಿ ಹಾಗೂ ಬಿ. ವಿನೋದ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ.

ನಿರ್ದೇಶಕ ಮನೋಜ್ ಅಣ್ಣಯ ಮಾತನಾಡಿ “ಕೊನೆಗೂ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಚಿತ್ರಕ್ಕೆ’ಎ’ ಪ್ರಮಾಣಪತ್ರ ನೀಡಿದೆ. ಚಿತ್ರದ ಹಿಂಸಾತ್ಮಕ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಸಮಿತಿ ಸೂಚಿಸಿತ್ತು. ಆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈಗ ಪ್ರಮಾಣಪತ್ರ ಸಿಕ್ಕಿರುವುದು ಖುಷಿಯ ವಿಚಾರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಶೀಘ್ರದಲ್ಲೇ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಅನುಭವಿಸಲಿ ಎಂಬುದು ನಮ್ಮ ಆಶಯ.” ಎಂದು ಹೇಳಿದರು.
“‘ಅನಿರೀಕ್ಷಿತ ಅತಿಥಿಗಳು’ ಕೇವಲ ಸರ್ವೈವಲ್ ಥ್ರಿಲ್ಲರ್ ಮಾತ್ರವಲ್ಲ. ಒಂದು ಪ್ರೇಮಕಥೆಯೂ ಹೌದು. ಕಥೆ ತುಂಬಾ ರಾ, ಕ್ರೂರ ಮತ್ತು ಭಾವನಾತ್ಮಕವಾಗಿದೆ. ವಿಶೇಷವಾಗಿ ವಿವೇಕ್ ಸಿಂಹ ಅವರ ಅಭಿನಯ ಚಿತ್ರದ ದೊಡ್ಡ ಆಕರ್ಷಣೆಯಾಗಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಅವರ ಅಭಿನಯವೇ ಎಲ್ಲರ ಚರ್ಚೆಯ ವಿಷಯವಾಗಲಿದೆ.” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರತಂಡ ಮೊದಲಿಗೆ ಜುಲೈ ಅಂತ್ಯದಲ್ಲಿ ಬಿಡುಗಡೆ ಯೋಜಿಸಿತ್ತು. ಆದರೆ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದ ಬಳಿಕ ತಮ್ಮ ಬಿಡುಗಡೆಯನ್ನು ಸೆಪ್ಟೆಂಬರ್‍ಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದರು

ಚಿತ್ರದ ನಿರ್ಮಾಪಕ ಬಿ. ವಿನೋದ್ ಕುಮಾರ್ ಮಾತನಾಡಿ, ಸೆನ್ಸಾರ್ ಪ್ರಕ್ರಿಯೆ ತಂಡಕ್ಕೆ ಸಾಕಷ್ಟು ಪಾಠ ಕಲಿಸಿದೆ.
ಇಂದಿನ ಕಾಲಘಟ್ಟದಲ್ಲಿ ಚಿತ್ರ ನಿರ್ಮಾಪಕರಿಗೆ ಸಿಬಿಎಫ್‍ಸಿ ಮಾರ್ಗಸೂಚಿಗಳು ಇನ್ನಷ್ಟು ಸ್ಪಷ್ಟವಾಗಿ ತಿಳಿಯುವಂತಾಗಬೇಕು ಎಂಬ ಅಭಿಪ್ರಾಯವನ್ನೂ ವಿನೋದ್ ಕುಮಾರ್ ವ್ಯಕ್ತಪಡಿಸಿದರು.
ಸರ್ವೈವಲ್ ಥ್ರಿಲ್ಲರ್, ಪ್ರೇಮಕಥೆ ಮತ್ತು ತೀವ್ರ ಭಾವನೆಗಳ ಸಂಯೋಜನೆಯಾಗಿರುವ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ.

ಚಿತ್ರದ ತಾರಾಬಳದಲ್ಲಿ ಮೈತ್ರಿ ಜಗ್ಗಿ, ದಯ ಪಲ್ಲವಗೆರೆ, ದೈವಿಕ್ ನಾಗ್, ಶ್ರೀ ದತ್ತ, ಸಂಪ್ರತಿ ಆಳ್ವಾ, ಹರಿತ ಶಾ, ಅಭಿನಯಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ಎರಿಕ್ ವಿ.ಜೆ. ವಹಿಸಿದ್ದಾರೆ, ಚಿತ್ರಕ್ಕೆ ಸ್ವಾಮಿನಾಥನ್ ಆರ್.ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

