2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ ಕನ್ನಡದಿಂದ ‘ಕಬ್ಜ’ ಮಾತ್ರ

2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪೈಕಿ ಕನ್ನಡದಿಂದ ‘ಕಬ್ಜ’ ಮಾತ್ರ …

ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಮಾತ್ರ ಇರುವುದು ವಿಶೇಷ.

‘ಕಬ್ಜ’ ಚಿತ್ರವು ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದು, ಮಿಕ್ಕಂತೆ ಶಾರುಖ್ ಖಾನ್ ಅಭಿನಯದ ‘ಪಠಾಣ್’, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ – ದಿ ರೂಲ್’, ಪ್ರಭಾಸ್ ಅಭಿನಯದ ‘ಸಲಾರ್’ ಮತ್ತು ‘ಆದಿಪುರುಷ್’, ವಿಜಯ್ ಅಭಿನಯದ ‘ವಾರಿಸು’, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಮುಂತಾದ ಚಿತ್ರಗಳಿವೆ.
ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳೇ ಹೆಚ್ಚಿರುವ ಈ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಏಕೈಕ ಚಿತ್ರವಾಗಿ ‘ಕಬ್ಜ’ ಹೊರಹೊಮ್ಮಿದೆ.ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರವು ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ.

ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ.
‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇರುವ ಈ ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.