ಡ್ಯಾಡ್ ಟೀಸರ್ ಗೆ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್ ಫಿದಾ
ಒಮ್ಮೊಮ್ಮೆ ಸುಳಿವೇ ಇರದಂತೆ ಕೆಲ ಸಿನಿಮಾಗಳು ಪ್ರೇಕ್ಷಕರನ್ನು ಸಂಪೂರ್ಣವಾಗಿ ಸೆಳೆದು ಬಿಡುವುದಿದೆ. ಇದೀಗ ಬಿಡುಗಡೆಗೊಂಡಿರುವ ಡ್ಯಾಡ್ ಎಂಬ ಚಿತ್ರದ ಟೀಸರ್ ಕೂಡಾ ನೋಡುಗರನ್ನು ಅದೇ ತೆರನಾಗಿ ಚಕಿತಗೊಳಿಸಿದೆ. ಇಂದು ಲಾಂಚ್ ಆಗಿರೋ ಡ್ಯಾಡ್ ಟೀಸರ್ ನೋಡಿದರವೆಲ್ಲರನ್ನೂ ಕೂಡಾ ಚಕಿತಗೊಳಿಸಿ ಬಿಟ್ಟಿದೆ.
ಈ ಸಿನಿಮಾದಲ್ಲಿ ಗಹನವಾದುದೇನೋ ಕಥೆಯಿದೆ ಎಂಬ ಭಾವನೆ ಸರ್ವರನ್ನೂ ಆವರಿಸಿಕೊಂಡಿದೆ. ಇಂಥಾದ್ದೊಂದು ಟೀಸರ್ ಅನ್ನು ಸದ್ದಿಲ್ಲದೆ ಪ್ರೇಕ್ಷಕರ ಮುಂದಿಟ್ಟಿರೋದು ಹೊಸಬರ ತಂಡ ಎಂಬುದು ನಿಜಕ್ಕೂ ವಿಶೇಷ. ಗಮನೀಯ ಅಂಶವೆಂದರೆ, ಈ ಟೀಸರ್ ಈಗ ರಾಜ್ಯ ಗಡಿ ದಾಟಿ, ಎಲ್ಲೆಡೆ ಪಸರಿಸಿಕೊಂಡಿದೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಟ ಸುಭಾಶ್ ಘಾಯ್ ಫಿದಾ ಆಗಿದ್ದಾರೆ. ಡ್ಯಾಡ್ ಪೆÇೀಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಅಂದಹಾಗೆ, ದೇವರಾಜ್ ಅಲಿಯಾಸ್ ದೇವಿಡ್ ಎಂಬುದು ಡ್ಯಾಡ್ ಎಂಬುದರ ವಿಸ್ತೃತ ರೂಪವಂತೆ. ಕೇವಲ ಡ್ಯಾಡ್ ಎಂಬ ಪದವೂ ಕೂಡಾ ಸಿನಿಮಾ ಕಂಟೆಂಟಿಗೆ ಅನ್ವರ್ಥವಾಗಿದೆಯಂತೆ. ಈ ಬಗ್ಗೆ ಸದರಿ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ಅರ್ಜುನ್ ಕೃಷ್ಣ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಪ್ರತೀ ಮನುಷ್ಯರಿಗೂ ಎರಡು ಮುಖಗಳಿರುತ್ತವೆ. ಹೆಚ್ಚಾಗಿ ಈ ಸಮಾಜದೆದುರು ಒಂದು ಮುಖ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಆದರೆ ಓರ್ವ ಸಾಮಾನ್ಯ ಮನುಷ್ಯನನ್ನು ಪದೇ ಪದೆ ಕಷ್ಟಗಳು ಮುತ್ತಿಕೊಂಡರೆ, ದುಷ್ಟ ಶಕ್ತಿಗಳು ಕಾಡಿದರೆ, ನ್ಯಾಯವೆಂಬುದು ಮರೀಚಿಕೆಯಾದರೆ, ತಂತಾನೇ ಎರಡನೇ ಮುಖದ ಅನಾವರಣಗೊಳ್ಳುತ್ತದೆ. ಇಂಥಾ ಧಾಟಿಯ ಕಥೆ ಹೊಂದಿರೋ ಡ್ಯಾಡ್ ಸಂಪೂರ್ಣ ಭಿನ್ನವಾಗಿದೆ ಎಂಬುದಕ್ಕೆ ಈ ಟೀಸರ್ ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.ಇದು ಪಕ್ಕಾ ಕಮರ್ಶಿಯಲ್ ಬಗೆಯ ಚಿತ್ರ. ಆದರೆ ರಿಯಲಿಸ್ಟಿಕ್ ಮೇಕಿಂಗಿನತ್ತ ಹೆಚ್ಚು ಒತ್ತು ಕೊಡಲಾಗಿದೆಯಂತೆ.
ಎಂಬಿಎ ಮುಗಿಸಿಕೊಂಡು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅರ್ಜುನ್ ಕೃಷ್ಣ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬನ್ದಾರಿಯನ್ನೂ ನಿಭಾಯಿಸಿದ್ದಾರೆ. ಕುಂದಾಪುರ ಮೂಲದ ವಿಶಾಲ್ ರಾಘವ್ ನಾಯಕನಾಗಿ ನಟಿಸಿದ್ದರೆ, ನೃತ್ಯ ಬೋಪಣ್ಣ ಮತ್ತು ಮಾಹಿಕಾ ಮಹಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.
ಈಗಾಗಲೇ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಡ್ಯಾಡ್ ಚಿತ್ರದ ಪೋಸ್ಟ್ ಪ್ರೊಡಕ್ಟನ್ಸ್ ಕಾರ್ಯ ಕೂಡಾ ಅಂತಿಮ ಹಂತದಲ್ಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಮೂರು ಹಾಡುಗಳೂ ಕೂಡಾ ಕೇಳುಗರನ್ನು ಸೆಳೆದಿವೆ. ನಟನಾ ಮಂಜು ಕೂಡಾ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಹೆಚ್ಚೂ ಕಮ್ಮಿ ಹೊಸಬರಿಗೇ ತಾರಾಗಳದಲ್ಲಿ ಪ್ರಧಾನ್ಯತೆ ಕೊಡಲಾಗಿದೆ. ಸುಚೇಂದ್ರ ಪ್ರಸಾದ್, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರೂ ಡ್ಯಾಡ್ ಚಿತ್ರದ ಬಹುಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಇನ್ನುಳಿದಂತೆ ಒಂದಷ್ಟು ಹೊಸಾ ವಿಲನ್ನುಗಳು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಶಿವಹರಿ ವರ್ಮಾ ಹಿನ್ನೆಲೆ ಸಂಗೀತ, ಮುಂಬೈ ಮೂಲದ ಆಕಾಶ್ ಸೇಠ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನುಳಿದಂತೆ ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಅನಿಲ್ ಕುಮಾರ್ ಕೆ ನಿಭಾಯಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಅನಿಲ್ ವಿಎಫ್ ಎಕ್ಸ್, ಪೋಸ್ಟರ್ ಡಿಸೈನ್ ಅನ್ನೂ ಮಾಡುವ ಮೂಲಕ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ತಂಡದ ಪ್ರಯತ್ನದ ಫಲವಾಗಿ ರೂಪುಗೊಂಡಿರುವ ಟೀಸರ್ ಭರವಸೆ ಮೂಡಿಸುವಂತಿದೆ.