ಟಗರು ಪಲ್ಯ : ಸಂಬಂಧಗಳ ಸಂಭ್ರಮದ ಅನಾವರಣ

ಚಿತ್ರ: ಟಗರು ಪಲ್ಯ
ನಿರ್ದೇಶನ: ಉಮೇಶ್ ಕೆ ಕೃಪಾ
ನಿರ್ಮಾಣ :ಡಾಲಿ ಪಿಕ್ಚರ್
ತಾರಾಗಣ: ನಾಗಭೂಷಣ್, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ಚಿತ್ರಾ ಶಣೈ, ಶ್ರೀನಾಥ್ ವಸಿಷ್ಠ, ವಾಸುಕಿ ವೈಭವ್, ಪೂರ್ಣ ಚಂದ್ರ, ರಾಧಾ ರಾಮಚಂದ್ರ, ಹುಲಿ ಕಾರ್ತಿಕ್, ಮಹಂತೇಶ್ ಹಿರೇಮಠ್ ಮತ್ತಿತರರು
ರೇಟಿಂಗ್ : * * * * 4.5 / 5

ಹಳ್ಳಿಯ ಆಚಾರ, ವಿಚಾರ, ಪದ್ದತಿ, ತಲ ತಲಾಂತರಿಂದ ನಡೆದುಕೊಂಡ ಸಂಪ್ರದಾಯ, ದೇವರ ಮೇಲಿನ ಭಕ್ತಿ, ನಂಬಿಕೆ, ಹರಕೆಯ ಸುತ್ತಾ ಸಾಗುವ ಜೊತೆ ಜೊತೆಗೆ ಪ್ರೀತಿ ಮತ್ತು ಸಂಬಂಧಗಳ ಮೌಲ್ಯಗಳನ್ನು ಕಟ್ಟಿಕೊಟ್ಟಿರುವ ಚಿತ್ರ “ಟಗರು ಪಲ್ಯ”.
ಒಂದು ಜಾನರ್ ಚಿತ್ರ ಯಶಸ್ವಿಯಾದರೆ ಗೆದ್ದೆತ್ತಿನ ಬಾಲ ಹಿಡಿದು ಅದರ ಹಿಂದೆಲೇ ಜೋತು ಬೀಳುವ ಕಾಲಘಟ್ಟದಲ್ಲಿ ವಿಭಿನ್ನವಾದ ಕಥೆ ಹೇಳುವ ಧೈರ್ಯ ಮಾಡುವುದು ಅಪರೂಪ. ಆ ಕೆಲಸವನ್ನು ಡಾಲಿ ಪಿಕ್ಚರ್ ಮಾಡುವ ಮೂಲಕ ಇತರರಿಗಿಂತ ಭಿನ್ನ ಎನ್ನುವುದನ್ನು ತೋರಿಸಿಕೊಟ್ಟಿದೆ.
ಮಣ್ಣಿನ ಸೊಗಡು, ನೆಲ ಮೂಲದ ಸಂಸೃತಿ, ದೇಸಿತನಕ್ಕೆ ಒತ್ತು ನೀಡಿರುವ ಚಿತ್ರ ಇದು. ಚಿತ್ರ ನೋಡುತ್ತಿದ್ದರೆ ಅದರೊಳಗೆ ನಮ್ಮನ್ನು ಹಾಸುಹೊಕ್ಕಾಗಿಸಿದೆ. ಅರೆ ನಮ್ಮ ಹಳ್ಳಿಯಲ್ಲಿ ಇದನ್ನೆಲ್ಲಾ ಇನ್ನೂ ಮಾಡ್ತಾ ಇದ್ದಾರ ಅಲ್ವಾ, ನಮ್ಮ ಅಕ್ಕ-ಪಕ್ಕದ ಮನೆಯವರು, ಅಷ್ಟೇ ಏಕೆ ನಾವೇ ಆಚರಣೆ ಮಾಡುತ್ತಿದ್ದೇವಲ್ಲ ಎನ್ನುವ ಮಟ್ಟಿಗೆ ನಮ್ಮನ್ನು ಕಾಡುವ ಚಿತ್ರ.
ಮುಂದಿನ ಬಾರಿ ಊರಿಗೆ ಹೋದಾಗ ನಮ್ಮದು ಹರಕೆ ಇತ್ತಲ್ಲ ಅದನ್ನು ತೀರಿಸಿ ಬರೋಣ ಅನ್ನುವಷ್ಟರ ಮಟ್ಟಿಗೆ ಮನಸ್ಸಿಗೆ ಹತ್ತಿರವಾದ ಚಿತ್ರ ಟಗರು ಪಲ್ಯ.
ಕಥೆ ಏನು:

ಇರುವ ಒಬ್ಬಳೇ ಮಗಳಿಗೆ ಒಳ್ಳೆಯ ಸಂಬಂಧ ಸಿಕ್ಕರೆ ಮದುವೆಗೆ ಮುನ್ನ ದೇವರಿಗೆ ಹರಕೆ ತೀರಿಸುವುದಾಗಿ ತಂದೆ ಕಟ್ಟಿಕೊಂಡ ಕಥನ. ಪೊಗರುದಸ್ತಾದ ಟಗರನ್ನು ಹರಕೆ ತೀರಿಸಲು ಊರ ಮಂದಿಯ ಜೊತೆ ದೇವಿಯ ಸ್ಥಳಕ್ಕೆ ಬಂದು ಅದರ ಸುತ್ತ ನಡೆಯುವ ಕಥೆ, ಅಪ್ಪನ ಮಾತಿಗೆ ಕಟ್ಟು ಬಿದ್ದು ಮದುವೆಯಾಗುವುದಾಗಿ ಒಪ್ಪಿಕೊಂಡ ಮಗಳು, ಪ್ರೀತಿಸುವ ಹುಡುಗನ್ನು ಕೈಹಿಡಿತಾಳಾ ಅಥವಾ ಅಪ್ಪನ ನೋಡಿದ ಹುಡುಗನ್ನೇ ಮದುವೆ ಆಗ್ತಾಳಾ . ಟಗರು ತಲೆ ಒದರುತ್ತಾ, ಇಲ್ಲವೇ, ಹರಕೆ ತೀರುತ್ತಾ ಎನ್ನುವುದು ಕುತೂಹಲದ ಸಂಗತಿ. ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ಯಾರೆಲ್ಲಾ ಹೇಂಗೆ:
ನಿರ್ಮಾಪಕ ಡಾಲಿ ಧನಂಜಯ ಕಥೆ ಮತ್ತು ಕಲಾವಿದ ಆಯ್ಕೆಯಲ್ಲಿ ಗೆದ್ದಿದ್ದಾರೆ. ಪೈಪೋಟಿಗೆ ಬಿದ್ದವರಂತೆ ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ ಅನುರಾಧ ನಟಿಸಿದ್ದಾರೆ. ನಟನೆ ಮಾಡಿದ್ದಾರೆ ಎನ್ನುವುದಕ್ಕಿಂತ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅದನ್ನು ಜೀವಿಸಿ ಬಿಟ್ಟಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ವೈಜನಾಥ್ ಬಿರಾದಾರ್, ಶರತ್ ಲೋಹಿತಾಶ್ವ, ಚಿತ್ರ ಶಣೈ , ವಾಸುಕಿ ವೈಭವ್, ಮಹಂತೇಶ್, ಹುಲಿ ಕಾರ್ತಿಕ್ ಮತ್ತಿತರ ಕಲಾವಿದರು ಸಾಥ್ ನೀಡಿದ್ದಾರೆ.
ಕಥೆಗೆ ನಾಗಭೂಷಣ, ಅಮೃತಾ ಪೇಮ್ ನಾಯಕ, ನಾಯಕಿ, ಆದರೆ ಚಿತ್ರ ನೋಡಿದವರಿಗೆ ರಂಗಾಯಣ ರಘು, ತಾರಾ ಅನುರಾಧ ನಾಯಕ- ನಾಯಕಿಯಾಗಿ ಕಾಣಿಸಿಕೊಂಡರೆ ಅತಿಶಯೋಕ್ತಿ ಅಲ್ಲ.
ಮೊದಲ ಚಿತ್ರದಲ್ಲಿ ನಟಿ ಅಮೃತಾ ಪ್ರೇಮ್, ಸಂಭಾಷಣೆ ಹೇಳುವ ರೀತಿ, ನಟನೆಯಿಂದ ಚಿತ್ರರಂಗದಲ್ಲಿ ತಾವೊಬ್ಬ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ. ಅದರಲ್ಲಿಯೂ ಕ್ಲೈಮಕ್ಸ್ ಮುನ್ನ ಚಿಂದಿ. ಹೊಸ ನಟಿಯ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ ಶ್ರೇಯ ಇಡೀ ತಂಡಕ್ಕೆ ಸಲ್ಲಬೇಕು. ಇನ್ನೂ ನಾಗಭೂಷಣ್ ಮುಗ್ದತೆಯಿಂದಲೇ ಎಲ್ಲವನ್ನೂ ಎಲ್ಲವನ್ನೂ ನಿಭಾಯಿಸುತ್ತಾ, ಪ್ರೀತಿಯನ್ನು ಬಿಟ್ಟುಕೊಡಲಾಗದೆ ಒಳ ಒಳಗೆ ಅನುಭವಿಸುವ ಯಾತನೆ, ಹಾವ ಭಾವದಿಂದ ಗಮನ ಸೆಳೆದಿದ್ದಾರೆ.

ಗೆದ್ಡ ತಂಡ:
ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಚಿತ್ರ ತಂಡ ಗೆದ್ದಿದೆ. ಮೊದಲ ಪ್ರಯತ್ನದಲ್ಲಿ ನಿರ್ದೇಶಕ ಉಮೇಶ್ ಕೆ ಕೃಪಾ ಮನಸ್ಸಿಗೆ ನಾಟುವ ಕಥೆಯನ್ನು ಜನರ ಮುಂದಿಟ್ಟು ಭರವಸೆ ಮೂಡಿಸಿದ್ದಾರೆ. ಕಂಟೆಂಟ್ ಆಧಾರಿತ ಮತ್ತಷ್ಟು ಚಿತ್ರ ಮಾಡಲು ನಿರ್ಮಾಪಕ ಡಾಲಿ ಧನಂಜಯ ಅವರಿಗೆ ಮತ್ತಷ್ಟು ಸ್ಪೂರ್ತಿ ನೀಡಿದೆ. ಕೆ ಆರ್ ಜಿ ಸಂಸ್ಥೆಗೆ “ಟಗರು ಪಲ್ಯ” ದಿಂದ ಕಿರೀಟ ಸಿಕ್ಕಂತಾಗಿದೆ. ಚಿತ್ರಕ್ಕೆ ಎಸ್.ಕೆ ರಾವ್ ಕ್ಯಾಮರಾ, ವಾಸುಕಿ ವೈಭವ್ ಸಂಗೀತ ಪೂರಕವಾಗಿದೆ,
ತಮಿಳು, ಮಲೆಯಾಂನಲ್ಲಿ ಒಳ್ಳೊಳ್ಳೆ ಸಿನಿಮಾ ಬರುತ್ತೆ, ಅಲ್ಲಿನ ಸೊಗಡಿನ ಕಥೆ ಹೇಳ್ತಾರಾ, ವ್ಹಾ ಎಂತಹ ನಟನೆ ಕಲಾವಿದರದ್ದು ಎನ್ನುವ ಮಂದಿಯೊಮ್ಮೆ ಟಗರು ಪಲ್ಯ ನೋಡಿ, ಪರಭಾಷೆಗಿಂತಲೂ ಒಳ್ಳೆಯ ಚಿತ್ರ ನಮಗೂ ಮಾಡಲು ಬರುತ್ತೆ. ಅಷ್ಟೇ ಚೆನ್ನಾಗಿ ಅಭಿನಯಿಸಬಲ್ಲ ಕಲಾವಿದರೂ ಇದ್ದಾರೆ ಎನ್ನುವುದನ್ನು ನಿರೂಪಿಸುವ ಚಿತ್ರ ಇದು.
ಆರಂಭದಿಂದ ಹಳ್ಳಿಯ ಸೊಡಗು ಕಟ್ಟಿಕೊಡುತ್ತಲೇ ನಗಿಸುತ್ತಾ ಅಳಿಸುತ್ತಾ, ಸಂಬಂಧ, ನಮ್ಮೋರು ತಮ್ಮೋರು ಮುಖ್ಯ ಎನ್ನುವುದನ್ನು ಸಾರುವ ಹಾಗು ಕೊನೆ ತನಕ ಕಾಡುವ ಚಿತ್ರ “ಟಗರು ಪಲ್ಯ”