ಉಪೇಂದ್ರ ನಟಿಸಿ, ನಿರ್ದೇಶಿಸಿರುವ “ಯುಐ” ಅಕ್ಟೋಬರ್ ನಲ್ಲಿ ತೆರೆಗೆ
ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ “ಯುಐ’ ಚಿತ್ರ ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರ . ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ಸೌಂಡ್ ಆಫ್ ಯುಐ’ ಬಿಡುಗಡೆಯಾಗಿದೆ. 1 ನಿಮಿಷ 24 ಸೆಕೆಂಡ್ ಗಳ ಈ ಮ್ಯೂಸಿಕ್ ಝಲಕ್ ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿ ಮಾಡಿದ್ದಾರೆ.
“ಯುಐ” ಚಿತ್ರದ ಮ್ಯೂಸಿಕ್‍ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್ , ಸಿ.ಆರ್ ಬಾಬಿ ಹಾಗೂ ಉಪೇಂದ್ರ ಸಾರಥ್ಯದಲ್ಲಿ ಹಂಗೇರಿಯ ಬುಡಾಪೆಸ್ಟ್‍ನಲ್ಲಿ ನಡೆದಿದೆ. 15 ವಯೊಲಿನ್, 8 ಬೇಸ್ ಗಿಟಾರ್, 4 ಕೊಳಲು ಹೀಗೆ ಹಲವು ಇನ್‍ಸ್ಟ್ರುಮೆಂಟ್ಸ್ ಬಳಸಿಕೊಂಡು 90ಕ್ಕೂ ಅಧಿಕ ನುರಿತ ಸಂಗೀತಗಾರರು ಲೈವ್ ನಲ್ಲೇ ಕಾರ್ಯ ನಿರ್ವಹಿಸಿರುವುದು ವಿಶೇಷ.
ಚಿತ್ರದಲ್ಲಿ ಬಿಜಿಎಂ ಪ್ರಮುಖಪಾತ್ರ ವಹಿಸಿದೆ. ಹಂಗೇರಿಯಲ್ಲಿ ನಡೆದ ಮ್ಯೂಸಿಕ್ ಜರ್ನಿಯ ಒಂದು ಝಲಕ್ ಅನ್ನು ಚಿಕ್ಕ ಪ್ರೊಮೋ ಮೂಲಕ “ಸೌಂಡ್ ಆಫ್ ಯುಐ” ಹೆಸರಿನಲ್ಲಿ ಚಿತ್ರತಂಡ ರಿಲೀಸ್ ಮಾಡಿದೆ.
ಹಲವು ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿರುವ “ಯುಐ” ಚಿತ್ರವನ್ನು ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ.
ನವೀನ್ ಮನೋಹರ್ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು (ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷೆಯಿರುವ `ಯುಐ’ ಚಿತ್ರ ವಿಶ್ವದಾದ್ಯಂತ ವಿಜಯಪತಾಕೆ ಹಾರಿಸಲಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.