ಗರಡಿ” ಟೈಟಲ್ ಟ್ರ್ಯಾಕ್‌ಗೆ ಅಭಿಮಾನಿಗಳು ಫಿದಾ : ಚಿತ್ರ ನವೆಂಬರ್ 10 ರಂದು ತೆರೆಗೆ
ವನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ‘ಲೋಕಾನೆ ಗರಡಿ.. ಬಾಳೇ ಅಖಾಡ” ಎಂಬ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
“ಗರಡಿ” ಎಂದರೆ ಒಂದು ಊರನ್ನು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಹಿಂದೆ ಒಂದು ಊರಿನ ರಕ್ಷಣೆಗೆ “ಗರಡಿ” ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ “ಗರಡಿ” ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಇನ್ನು ಇಂದು ಬಿಡುಗಡೆಯಾಗಿರುವ ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ ಹಾಡಿದ್ದಾರೆ. ಚಿತ್ರ ನವೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು.
ಹಿರಿಯ ನಟ ಬಿ.ಸಿ.ಪಾಟೀಲ್ “ಗರಡಿ” ಚಿತ್ರ ಆರಂಭವಾಗಿ ಈ ನವೆಂಬರ್ 14 ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ (ನವೆಂಬರ್ 10) ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್ ಭಟ್ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ ಎಂದರು .
ನಾಯಕ ಸೂರ್ಯ ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ “ಗರಡಿ ಸೂರಿ” ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಟೈಟಲ್ ಸಾಂಗ್ ನಲ್ಲಿ ನಾನು ಸಖತ್ ಡ್ಯಾನ್ಸ್ ಮಾಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ .
ನಟ ಸುಜಯ್ ಬೇಲೂರು , ಚಿತ್ರದಲ್ಲಿ ಬಹುತೇಕ ಲಂಗೋಟಿಯಲ್ಲಿ ಕಾಣಿಸಿಕೊಂಡಿದ್ದೇನೆ ಎಂದರೆ ರಘು,ಖಳ ನಾಯಕ ಪಾತ್ರ ಮಾಡಿದ್ದೇನೆ ಎಮೋಷನ್ ಪಾತ್ರ, ದರ್ಶನ್ ಸಾರ್ ಅವರಿಂದ ಚಿತ್ರದ ಅವಕಾಶ ಸಿಕ್ಕಿದೆ ಎಂದರು.
ಮತ್ತೊಬ್ಬ ಕಲಾವಿದ ಧರ್ಮಣ್ಣ ಕಡೂರು ಮಾತನಾಡಿ, ಖುಷಿ ಮತ್ತು ಹೆಮ್ಮೆಯಿಂದ ಸಿನಿಮಾ ಮಾಡಿದ್ದೇನೆ. ಮುಗುಳುನಗೆ ನಂತರ ಯೋಜರಾಜ್ ಭಟ್ ಅವರ ಜೊತೆ ನಾಲ್ಕನೇ ಸಿನಿಮಾ. ನಾವು ಮಾಡುವ ಪಾತ್ರವಿದ್ದರೆ ಅವರೇ ಕರೆದು ಅವಕಾಶ ಕೊಡ್ತಾರೆ . ಬಿಸಿ ಪಾಟೀಲ್ ಜೊತೆ ಸಾಗುವ ಎಮೋಷನ್ ಪಾತ್ರ ನನ್ನದು. ಡಿಬಾಸ್ ಜೊತೆ ನಾಲ್ಕನೇ ಸಿನಿಮಾ, ಚಿತ್ರದಲ್ಲಿ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ. ಹಲ್ಲುಬ್ಬ ಎಂದು ಪಾತ್ರದ ಬಗ್ಗೆ ವಿವರ ನೀಡಿದರು
ನಾಯಕಿ ಸೋನಾಲ್ ಮಾಂತೆರೊ, ಛಾಯಾಗ್ರಾಹಕ ನಿರಂಜನ್ ಬಾಬು, ನೃತ್ಯ ನಿರ್ದೇಶಕ ಧನಂಜಯ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ವನಜಾ ಪಾಟೀಲ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ “ಗರಡಿ” ಚಿತ್ರ ಸಾಗಿ ಬಂದ ಬಗ್ಗೆ ವಿವರಣೆ ನೀಡಿದರು.