Grand launch for 'Bangalore International Children's Film Festival'

‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ’ ಅದ್ದೂರಿ ಚಾಲನೆ - CineNewsKannada.com

‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ’ ಅದ್ದೂರಿ ಚಾಲನೆ

ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿ ಕೊಡುವ ಉದ್ದೇಶದಿಂದ ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ವನ್ನು ಈ ವರ್ಷದಿಂದ ಆರಂಭಿಸಿದೆ. ಮೊದಲ ಚಲನಚಿತ್ರೋತ್ಸವವನ್ನು ‘ಅಪ್ಪು ಮಕ್ಕಳ ಚಿತ್ರೋತ್ಸವ’ ಎಂಬ ಟ್ಯಾಗ್ ಲೈನ್ ನಡಿ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಣೆ ಮಾಡಲಾಗುತ್ತಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಸಚಿವ ವಿ. ಸೋಮಣ್ಣ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ಕ್ಕೆ ಚಾಲನೆ ನೀಡುವ ಮೂಲಕ ಶುಭ ಹಾರೈಸಿದ್ದಾರೆ.

ಸಚಿವ ವಿ. ಸೋಮಣ್ಣ ಮಾತನಾಡಿ ಉಲ್ಲಾಸ್ ಒಂದು ಅದ್ಭುತವಾದ ಕಾರ್ಯವನ್ನು ಕೈಗೊಂಡು ನಮ್ಮೆಲ್ಲರ ಮೆಚ್ಚಿನ ಪುನೀತ್ ಅವರ ಹೆಸರಲ್ಲಿ ಅಪ್ಪು ಮಕ್ಕಳ ಚಲನಚಿತ್ರೋತ್ಸವ ಎನ್ನುವ ದೊಡ್ಡ ಸಂದೇಶವನ್ನು ಕೊಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರ ಹಾಗೂ ಸರ್ಕಾರೇತರ ವ್ಯವಸ್ಥೆಗಳಲ್ಲಿ ಈ ರೀತಿಯ ಕೆಲಸಗಳನ್ನು ಮಾಡಬೇಕು ಎಂಬ ಚಿಂತನೆಗೆ ನಮ್ಮ ಜೊತೆಯಲ್ಲೇ ಇರುವ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರಿಗೂ ಪ್ರೇರಣೆ ಎಂದು ಮಕ್ಕಳ ಚಲನಚಿತ್ರೋತ್ಸವಕ್ಕೆ ಶುಭ ಹಾರೈಸಿದ್ರು.

‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ ಆಯೋಜಕ ಉಲ್ಲಾಸ್ ಮಾತನಾಡಿ ನಾನು ‘ನಿರ್ಮಲ’ ಎಂಬ ಮಕ್ಕಳ ಸಿನಿಮಾ ಮಾಡಿದ್ದೆ. ಆ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹೊರತು ಪಡಿಸಿ ಯಾವ ಫಿಲಂ ಫೆಸ್ಟ್ ನಲ್ಲಿಯೂ ಪ್ರದರ್ಶನಗೊಳ್ಳಲು ಅವಕಾಶ ಸಿಗಲಿಲ್ಲ. ಆದ್ರಿಂದ ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡಬೇಕು ಉದ್ದೇಶದಿಂದ ಈ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಪುಣೆ, ಕಲ್ಕತ್ತ, ಕೇರಳದಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಯುತ್ತೆ. ಇದೀಗ ಬೆಂಗಳೂರಿನಲ್ಲಿ ಈ ವರ್ಷದಿಂದ ಆರಂಭವಾಗಿದೆ. ಇನ್ಮುಂದೆಯೂ ಇದು ಅಪ್ಪು ಸರ್ ಹೆಸರಲ್ಲಿಯೇ ಪ್ರತಿ ವರ್ಷ ಮುಂದುವರೆದುಕೊಂಡು ಹೋಗುತ್ತದೆ ಎಂದು ಮಾಹಿತಿ ಹಂಚಿಕೊಂಡ್ರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮಾತನಾಡಿ ಉಲ್ಲಾಸ್ ಆಫ್ ಸಿನಿಮಾಸ್ ವತಿಯಿಂದ ಪ್ರತಿವರ್ಷ ನಾಟಕಗಳನ್ನು ಮಾಡಲಾಗುತ್ತಿತ್ತು. ಈ ಬಾರಿ ಮಕ್ಕಳ ಚಲನಚಿತ್ರೋತ್ಸವ ಮಾಡೋಣ ಎಂದು ಉಲ್ಲಾಸ್ ಪ್ರಸ್ತಾಪ ಮಾಡಿದ್ರು. ಮಕ್ಕಳ ಚಿತ್ರಕ್ಕೆ ವೇದಿಕೆಗಳೇ ಇಲ್ಲ ಆದ್ರಿಂದ ಪ್ರತ್ಯೇಕವಾಗಿ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗುತ್ತಿದೆ. ಸಾಕಷ್ಟು ಉತ್ತಮ ಮಕ್ಕಳ ಚಿತ್ರಗಳಿವೆ ಅವುಗಳಿಗೆಲ್ಲ ಈ ಚಲನಚಿತ್ರೋತ್ಸವ ಒಂದೊಳ್ಳೆ ವೇದಿಕೆಯಾಗಲಿ. ಮತ್ತಷ್ಟು ಮಕ್ಕಳ ಚಿತ್ರಗಳಿಗೆ ಉತ್ತೇಜನ ಸಿಗಲಿ ಎಂದು ಚಲನಚಿತ್ರೋತ್ಸವಕ್ಕೆ ಶುಭ ಹಾರೈಸಿದ್ರು.

ಫೆಬ್ರವರಿ 22ರಿಂದ 26ವರೆಗೆ ಐದು ದಿನಗಳ ಕಾಲ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ ನಡೆಯಲಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 12 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತಿದೆ. ಐದು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದಲ್ಲಿ ಕನ್ನಡ, ಫ್ರೆಂಚ್, ಕೊರಿಯನ್, ಜಪಾನೀಸ್, ಸ್ಪ್ಯಾನೀಶ್ ಸೇರಿದಂತೆ ಹಲವು ಭಾಷೆಯ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin