ಆಕ್ಷನ್, ಕ್ರೈಂ-ಥ್ರಿಲ್ಲರ್ ಚಿತ್ರಕ್ಕೆ ಗುರುರಾಜ ಕುಲಕರ್ಣಿ ಸಿದ್ದತೆ

ಕನ್ನಡದಲ್ಲಿ ಈಗಾಗಲೇ ಅಮೃತ್ ಅಪಾರ್ಟ್ಮೆಂಟ್ ‘ ಮತ್ತುದ ಜಡ್ಜ್ ಮೆಂಟ್’ ಸಿನೆಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಕಮ್ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ಸದ್ದಿಲ್ಲದೆ ಹೊಸ ಸಿನೆಮಾಕ್ಕೆ ತಯಾರಿ ನಡೆಸಿದ್ದಾರೆ.

ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಕಥಾಹಂದರ ಈಗಾಗಲೇ ಪೂರ್ಣಗೊಂಡಿದ್ದು, ಈ ಸಿನೆಮಾಕ್ಕೆ ಹಿಂದಿಯ `ಲಾಪತ ಲೇಡಿಸ್’ ಖ್ಯಾತಿಯ ಸೋನು ಆನಂದ್ ಬರಹಗಾರರಾಗಿ ಎಂಟ್ರಿಯಾಗಿದ್ದಾರೆ.

ಇತ್ತೀಚೆಗಷ್ಟೇ ಹಿಂದಿಯ ಲಾಪತ ಲೇಡಿಸ್’ ಸಿನೆಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ’ ನಾಮನಿರ್ದೇಶನವಾಗಿದೆ. `ಆಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನೆಮಾಕ್ಕೆ ಬರಹಗಾರನಾಗಿರುವ ಸೋನು ಆನಂದ್, ಇದೀಗ ಕನ್ನಡದ ಮೂಲಕ ಬಹುಭಾಷೆಗಳಿಗೆ ಹೋಗುತ್ತಿರುವ ಸಿನೆಮಾಕ್ಕೂ ಬರಹಗಾರನಾಗಿ ತೊಡಗಿಸಿಕೊಂಡಿರುವುದು ವಿಶೇಷ.
ನಿರ್ದೇಶಕ ಕಮ್ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ಮಾತನಾಡಿ ಈಗಾಗಲೇ ಐದಾರು ಸಿನೆಮಾಗಳನ್ನು ನಿರ್ಮಿಸಿ, ಎರಡು ಸಿನೆಮಾ ನಿರ್ದೇಶಿಸಿದ್ದೇನೆ. ಮುಂದೆ ಯಾವ ಥರದ ಸಿನೆಮಾಗಳನ್ನು ಮಾಡಬೇಕು ತಿಳಿಯಲು ಆಡಿಯನ್ಸ್ ಸರ್ವೇ ಮಾಡಿದ್ದೆ. ಈ ಹಿಂದೆ ನಿರ್ದೇಶಿಸಿದ್ದದ ಜಡ್ಜ್‍ಮೆಂಟ್’ ಚಿತ್ರಕ್ಕೆ ಮೆಚ್ಚುಗೆಯ ವಿಮರ್ಶೆ ಬಂದಿತ್ತು. ಆ ಸಿನೆಮಾದ ಬಳಿಕ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ನಡೆದ ಈ ಸರ್ವೇಯಲ್ಲಿ ಸುಮಾರು ಶೇಕಡಾ 65 ಕ್ಕೂ ಅಧಿಕ ಸಂಖ್ಯೆಯ ಆಡಿಯನ್ಸ್ ತಮಗೆ ಸಸ್ಪೆನ್ಸ್ ಕಮ್ ಕ್ರೈಂ-ಥ್ರಿಲ್ಲರ ಶೈಲಿಯ ಸಿನೆಮಾಗಳು ಇಷ್ಟವಾಗಿದೆ ಎಂದರು.
ಹೀಗಾಗಿ, ಮುಂದಿನ ಸಿನೆಮಾವನ್ನು ಪ್ರೇಕ್ಷಕರ ಆಸಕ್ತಿ ಮತ್ತು ಹಕ್ಕೊತ್ತಾಯದಂತೆ ಸಸ್ಪೆನ್ಸ್ ಕಮ್ ಕ್ರೈಂ-ಥ್ರಿಲ್ಲರ ಶೈಲಿಯಲ್ಲೇ ಮಾಡಲು ಮುಂದಾಗಿದ್ದೇವೆ. ಥ್ರಿಲ್ಲರ್ ನೊಂದಿಗೆ ಭಾವನಾತ್ಮಕ ಕಥಾ ಹಂದರವುಳ್ಳ ಚಿತ್ರ’ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಈ ಮೂಲಕ ಗುರುರಾಜ್ ಕುಲಕರ್ಣಿ ತಮ್ಮ ಸಿನಿಮಾ ಆದ್ಯತೆಗಳನ್ನು ಅರ್ಥ ಮಾಡಿಕೊಂಡ ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗಲು ಉತ್ಸುಕರಾಗಿದ್ದಾರೆ. ”ದ ಜಡ್ಜ್ ಮೆಂಟ್’ ನಂತರ ಅಂತಹ ಪ್ರೇಕ್ಷಕರನ್ನು ತಲುಪಲು ಮತ್ತು ಅವರು ಯಾವ ರೀತಿ ಸಿನಿಮಾ ನೋಡಲು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಬಯಸುತ್ತೇನೆ.
ಕುತೂಹಲಕಾರಿ ವಿಷಯ ಏನೆಂದರೆ, ಇನ್ನೂ ಹೆಸರಿಡದ ಚಿತ್ರವನ್ನು ಪ್ಯಾನ್- ಇಂಡಿಯಾ ಮಟ್ಟದಲ್ಲಿ ತಯಾರಿಸಲು ಗುರುರಾಜ್ ಯೋಜಿಸಿದ್ದಾರೆ. ವಿವಿಧ ಭಾಷೆಗಳ ಪ್ರತಿಭಾವಂತರೊಂದಿಗೆ ಆ ನೆಲಕ್ಕೆ ತಕ್ಕಂತೆ ಚಿತ್ರ ಮಾಡಲು ಎದುರು ನೋಡುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಕಿರಣ್ ರಾವ್ ನಿರ್ದೇಶನದ `ಲಾಪತಾ ಲೇಡೀಸ್’ನ ಸಂಭಾಷಣೆಗಾರ ಸೋನು ಆನಂದ್ ಸೇರಿದಂತೆ ವೈವಿಧ್ಯಮಯ ಬರಹಗಾರರ ತಂಡವನ್ನು ಅವರು ಒಟ್ಟುಗೂಡಿಸಿದ್ದಾರೆ.

”ಲಾಪತಾ ಲೇಡೀಸ್’ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ 97ನೇ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಚಿತ್ರವಾಗಿದೆ. ಕನ್ನಡ ಕಥೆಗಾರರೊಂದಿಗೆ ಪ್ಯಾನ್- ಇಂಡಿಯಾ ಚಿತ್ರಗಳ ಬಗ್ಗೆ ಮಾತನಾಡಿದ್ದೇವೆ. ಸೋನು ಆನಂದ್, ತನ್ನ ನೆಲದ ಅನುಭವವನ್ನು ಕಥೆಯಲ್ಲಿ ಸೇರಿಸಲಿದ್ದಾರೆ. ಸಾಮಾನ್ಯ ಸ್ನೇಹಿತನ ಮೂಲಕ ಸೋನು ಪರಿಚಯವಾಯಿತು. ಅವರಿನ್ನೂ ಯುವಕರಾಗಿದ್ದು, ಹೊಸ ಪರಿಕಲ್ಪನೆ ಒದಗಿಸುತ್ತಾರೆ ಎಂದು ಭಾವಿಸಿದ್ದೇನೆ. ಸದ್ಯ ಚಿತ್ರ ಕಥೆ ರಚನೆ ಪ್ರಕ್ರಿಯೆಯಲ್ಲಿದೆ. ಹಿಂದಿ, ಮರಾಠಿ ಮತ್ತು ಭೋಜ್‍ಪುರಿಯಲ್ಲಿ ಸೋನು ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಸೋನು ಆನಂದ್ ಸಂಭಾಷಣೆಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಅಲ್ಲದೆ ಅನುಭವಿ ಬರಹಗಾರರೊಂದಿಗೆ ಸಮರ್ಥವಾಗಿ ಸಹಕರಿಸುತ್ತಾರೆ’ ಎಂದು ಗುರುರಾಜ್ ಕುಲಕರ್ಣಿ ಹೇಳಿದ್ದಾರೆ.
ಗುರುರಾಜ್ ಕನ್ನಡ ಆವೃತ್ತಿಗೆ ಸಂಭಾಷಣೆ ಬರೆಯಲು ಉದ್ದೇಶಿಸಿದ್ದಾರೆ. ಮತ್ತು ತಮಿಳು, ತೆಲುಗು ಮತ್ತು ಮಲಯಾಳಂ ಉದ್ಯಮಗಳಿಂದ ಚಿತ್ರ ಕಥೆಗಾರರನ್ನು ಹುಡುಕುತ್ತಿದ್ದಾರೆ. `ಸದ್ಯ ಚಿತ್ರದ ಚಿತ್ರಕಥೆ ಸಿದ್ಧವಾಗಿದೆ ಮತ್ತು ಮೊದಲ ಡ್ರಾಫ್ಟ್ ಸಿದ್ಧಪಡಿಸುತ್ತಿರುವ ಸೋನು ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿದ್ದಾಗ ಅಲ್ಪಾವಧಿಯಲ್ಲೇ ಕನ್ನಡದಲ್ಲಿ ಕಿರುಚಿತ್ರ ಮಾಡಿದರು. ಅವರು ಧೀರ್ಘಾವಧಿ ಸಹಯೋಗದಲ್ಲಿ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಸಿನೆಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ದೀಪಾವಳಿ ಹಬ್ಬದ ವೇಳೆಗೆ ಈ ಸಿನೆಮಾದ ಮುಹೂರ್ತ ನಡೆಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ಗುರುರಾಜ್ ಅವರೇ ತಮ್ಮ ಬ್ಯಾನರ್ `ಜಿ9 ಕಮ್ಯುನಿಕೇಷನ್ ಮೀಡಿಯಾ ಮತ್ತು ಎಂಟರ್ ಟೈನ್ ಮೆಂಟ್’ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ಕಲಾವಿದರನ್ನು ಆಯ್ಕೆ ಮಾಡಲು ಒಲವು ತೋರಿದ್ದಾರೆ.
ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಈ ಸಿನೆಮಾ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಯ ಹಲವು ಜನಪ್ರಿಯ ಕಲಾವಿದರು ಈ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಈ ಸಿನೆಮಾದಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಬರಹಗಾರನೊಬ್ಬನನ್ನು ಚಿತ್ರತಂಡ ಪರಿಚಯಿಸಿದೆ. ಶೀಘ್ರದಲ್ಲಿಯೇ ಈ ಸಿನೆಮಾದ ಟೈಟಲ್ ಮತ್ತು ಕಲಾವಿದರು, ತಂತ್ರಜ್ಞರ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ದೇಶಕ ಕಮ್ ನಿರ್ಮಾಪಕ ಗುರುರಾಜ ಕುಲಕರ್ಣಿ (ನಾಡಗೌಡ) ತಿಳಿಸಿದ್ದಾರೆ.