ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ “ಜಾಕಿ” “ ಮುಂದಿನ ವರ್ಷ ಅಪ್ಪು ಬಿಡುಗಡೆಗೆ ಸಿದ್ದತೆ
“ಜಾಕಿ” ಮರು ಬಿಡುಗಡೆಯು ಎಲ್ಲೆಡೆ ಸಂಚಲನ ಮೂಡಿಸಿ, ಹೊಸ ಚಿತ್ರದಂತೆ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಸೋಲ್ಡ್ ಔಟ್ ಶೋಗಳು, ಮರು ಬಿಡುಗಡೆಗೊಂಡ ಮೊದಲನೇ ದಿನವೇ ಒಟ್ಟು 1 ಕೋಟಿ ರೂಪಾಯಿ ಸಂಪಾದಿಸಿದೆ.
ಎರಡನೇ ದಿನದ ಶೋಗಳು ಇದೇ ರೀತಿಯ ಪ್ರತಿಕ್ರಿಯೆಯನ್ನು ಕಾಣುತ್ತಿದ್ದು,ಅಪ್ಪು ಹುಟ್ಟುಹಬ್ಬದ ದಿನದಂದು “ಜಾಕಿ” ಇನ್ನು ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
14 ವರ್ಷಗಳ ನಂತರ “ಜಾಕಿ” ಮಾರ್ಚ್ 15ರಂದು ತೆರೆಗೆ ಮರುಕಳಿಸಿ 175 ಚಿತ್ರಮಂದಿರಗಳಲ್ಲಿ ಭರ್ಜರಿ ಮರು ಬಿಡುಗಡೆಯನ್ನು ಕಂಡಿತು. ಇನ್ನಾವ ಮರು ಬಿಡುಗಡೆಯಾದ ಚಿತ್ರವೂ ಪಡೆಯದಂತಹ ಮತ್ತು ಊಹಿಸಲು ಸಾಧ್ಯವಾಗದಂತಹ ಪ್ರತಿಕ್ರಿಯೆಯನ್ನು ಕಂಡಿದೆ. ಈ ಚಿತ್ರವನ್ನು ವಿತರಿಸಿದ ಕೆ.ಆರ್.ಜಿ ಸ್ಟುಡಿಯೋಸ್, ಪಿ.ಆರ್.ಕೆ ಮತ್ತು ಅಪ್ಪು ಅಭಿಮಾನಿಗಳ ಸತತ ಪರಿಶ್ರಮಕ್ಕೆ ತಕ್ಕ ಫಲವೇ ದೊರೆತಿದೆ ಎಂದರೆ ತಪ್ಪಾಗಲಾರದು.
ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, “ಜಾಕಿ ಒಂದು ಮಾಸ್ ಚಿತ್ರ. ಈ ಚಿತ್ರದ ಮರು ಬಿಡುಗಡೆಯ ಮೂಲಕ ನಾವು ಮತ್ತು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಸಂಭ್ರಮಿಸಲು ಇಚ್ಛಿಸುತ್ತೇವೆ. ಇದೇ ರೀತಿ ಪ್ರತಿ ವರ್ಷವೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಚಿತ್ರವನ್ನು ಮರು ಬಿಡುಗಡೆ ಮಾಡುತ್ತೇವೆ.
ಮುಂದಿನ ವರ್ಷ, ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ. ಆರ್.ಜಿ ಸ್ಟುಡಿಯೋಸ್ ಮತ್ತು ಪಿ.ಆರ್.ಕೆ ಪುನೀತ್ ಅವರ ಚೊಚ್ಚಲ ಚಿತ್ರವಾದ ‘ಅಪ್ಪು’ವನ್ನು ಮರು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಚಿತ್ರದ ಕಲರ್ ಗ್ರೇಡಿಂಗ್ ಮತ್ತು ಇನ್ನಿತರ ಕೆಲಸಗಳು ಏಪ್ರಿಲ್ ತಿಂಗಳಲ್ಲಿ ಆರಂಭಗೊಳಲ್ಲಿವೆ” ಎಂದರು.